ADVERTISEMENT

ಚಾರ್ಜರ್ಸ್ ಮುಗಿದ ಅಧ್ಯಾಯ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST
ಚಾರ್ಜರ್ಸ್ ಮುಗಿದ ಅಧ್ಯಾಯ
ಚಾರ್ಜರ್ಸ್ ಮುಗಿದ ಅಧ್ಯಾಯ   

ನವದೆಹಲಿ (ಪಿಟಿಐ): ಡೆಕ್ಕನ್ ಚಾರ್ಜರ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದ ಶಾಶ್ವತವಾಗಿ ಹೊರಬಿದ್ದಿದೆ. ತಂಡದ ಒಡೆತನ ಹೊಂದಿರುವ  ಡೆಕ್ಕನ್ ಕ್ರಾನಿಕಲ್ಸ್ ಹೋಲ್ಡಿಂಗ್ ಲಿಮಿಟೆಡ್‌ಗೆ (ಡಿಸಿಎಚ್‌ಎಲ್) ಸುಪ್ರೀಂ ಕೋರ್ಟ್‌ನಲ್ಲೂ ಸೋಲು ಎದುರಾಗಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಚಾರ್ಜರ್ಸ್ ಜೊತೆಗಿನ ಒಪ್ಪಂದ ರದ್ದುಗೊಳಿಸಿತ್ತು. ಇದಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಡಿಸಿಎಚ್‌ಎಲ್ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಆದರೆ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ನೇತೃತ್ವದ ಪೀಠ ಡಿಸಿಎಚ್‌ಎಲ್‌ನ ಕೋರಿಕೆಯನ್ನು ತಿರಸ್ಕರಿಸಿದೆ. ಅದೇ ರೀತಿ 100 ಕೋಟಿ ರೂ. ಬ್ಯಾಂಕ್ ಖಾತರಿ ಮೊತ್ತ ನೀಡಲು ಅಕ್ಟೋಬರ್ 25ರ ವರೆಗೆ ಕಾಲಾವಕಾಶ ನೀಡಬೇಕೆಂಬ ಮನವಿಯನ್ನೂ ತಳ್ಳಿಹಾಕಿದೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಗುರುವಾರ ನೀಡಿದ ತೀರ್ಪಿನ ಕುರಿತು ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಬಾಂಬೆ ಹೈಕೋರ್ಟ್ ತೀರ್ಪು ತನಗೆ ವಿರುದ್ಧವಾಗಿ ಬಂದ ಕಾರಣ ಡಿಸಿಎಚ್‌ಎಲ್ ತರಾತುರಿಯಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಬಿಸಿಸಿಐ ಚಾರ್ಜರ್ಸ್ ಜೊತೆಗಿನ ಒಪ್ಪಂದ ರದ್ದುಗೊಳಿಸಿದ್ದರೂ, ವಿವಾದ ಬಗೆಹರಿಸಲು ಹೈಕೋರ್ಟ್ ನೇಮಿಸಿದ್ದ ಮಧ್ಯಸ್ಥಿಕೆದಾರರು `ಯಥಾಸ್ಥಿತಿ~ ಕಾಪಾಡಬೇಕೆಂದು ಮಂಡಳಿಗೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಮಂಡಳಿಯ ಪರವಾಗಿ ತೀರ್ಪು ಬಂದಿತ್ತು.

ಬಾಕಿ ಸಂಭಾವನೆ ನೀಡುವೆವು: ಡೆಕ್ಕನ್ ಚಾರ್ಜರ್ಸ್ ತಂಡದ ಆಟಗಾರರಿಗೆ ಬಾಕಿಯಿರುವ ಸಂಭಾವನೆಯನ್ನು ನೀಡುತ್ತೇವೆ ಎಂದು ಬಿಸಿಸಿಐ ತಿಳಿಸಿದೆ. `2012 ಋತುವಿನ ಐಪಿಎಲ್ ಟೂರ್ನಿಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಪ್ರತಿನಿಧಿಸಿದ ಎಲ್ಲ ಆಟಗಾರರಿಗೆ ದೊರೆಯಬೇಕಿರುವ ಬಾಕಿ ಮೊತ್ತವನ್ನು ನೀಡುವೆವು~ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಹೇಳಿದ್ದಾರೆ.

`ಬಾಂಬೆ ಹೈಕೋರ್ಟ್ ಅ. 18 ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಡಿಸಿಎಚ್‌ಎಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಆದ್ದರಿಂದ ಒಪ್ಪಂದ ರದ್ದುಗೊಳಿಸಿರುವ ನಮ್ಮ ನಿರ್ಧಾರಕ್ಕೆ ಯಾವುದೇ ಅಡ್ಡಿಯಿಲ್ಲ~ ಎಂದು ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.