ADVERTISEMENT

ಚುಟುಕು ಗುಟುಕು

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 19:30 IST
Last Updated 9 ಜನವರಿ 2014, 19:30 IST

ಬೆಂಗಳೂರು: ಕರ್ನಾಟಕದ ಬಾಲಕ ಮತ್ತು ಬಾಲಕಿಯರ ತಂಡಗಳು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆಯುತ್ತಿರುವ 40 ನೇ ರಾಷ್ಟ್ರೀಯ ಜೂನಿಯರ್‌ ವಾಲಿಬಾಲ್  ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಸಂಪಾದಿಸಿವೆ.

ಗುರುವಾರ ನಡೆದ ಪಂದ್ಯದಲ್ಲಿ ಕರ್ನಾಟಕದ ಬಾಲಕಿಯರ ತಂಡ 25–8, 25–6, 25–4ರ ನೇರ ಸೆಟ್‌ಗಳಿಂದ ಚಂಡೀಗಡ ತಂಡವನ್ನು  ಸುಲಭವಾಗಿ ಮಣಿಸಿತು.

ಬಾಲಕರ ವಿಭಾಗದ ಪಂದ್ಯದಲ್ಲಿ ಕರ್ನಾಟಕ 25–19, 25–21, 22–25, 25–21 ರಲ್ಲಿ ಸಾಯ್‌ ಎದುರು ಜಯ ಸಾಧಿಸಿತು.
ಬುಧವಾರ ನಡೆದ  ಪಂದ್ಯಗಳಲ್ಲಿ  ಬಾಲಕಿಯರ ತಂಡ 25–17, 25–08, 25–12ರಲ್ಲಿ ಮಧ್ಯ ಪ್ರದೇಶದ ವಿರುದ್ಧವೂ ಹಾಗೂ ಬಾಲಕರ ತಂಡ 25–18, 25–15, 25–14 ರಲ್ಲಿ ಮಹಾರಾಷ್ಟ್ರ ತಂಡದ ಮೇಲೂ ಗೆಲುವು ಪಡೆದು ಶುಭಾರಂಭ ಮಾಡಿದ್ದವು.

ಸೋನಿ ಸಿಕ್ಸ್‌ನಲ್ಲಿ ಭಾರತ–ನ್ಯೂಜಿಲೆಂಡ್‌ ಸರಣಿ
ನವದೆಹಲಿ (ಐಎಎನ್‌ಎಸ್‌): ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ ಸರಣಿಯ ಪಂದ್ಯಗಳು ಸೋನಿ ಸಿಕ್ಸ್‌ನಲ್ಲಿ ಪ್ರಸಾರವಾಗಲಿವೆ. ಈ ಸರಣಿ ಜನವರಿ 19ರಂದು ಶುರುವಾಗಲಿದೆ.

30 ದಿನಗಳ ಪ್ರವಾಸದ ಅವಧಿಯಲ್ಲಿ ಭಾರತ ಐದು ಏಕದಿನ ಹಾಗೂ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

ತೆರಿಗೆ ವಿನಾಯಿತಿ ಹಿಂಪಡೆದ ಸಿಬಿಡಿಟಿ
ನವದೆಹಲಿ (ಪಿಟಿಐ):
ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿದ್ದ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ, ಬರೋಡ ಕ್ರಿಕೆಟ್ ಸಂಸ್ಥೆ, ಕೇರಳ ಕ್ರಿಕೆಟ್‌ ಸಂಸ್ಥೆ ಹಾಗೂ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಗೆ ನೀಡಿದ್ದ ತೆರಿಗೆ ವಿನಾಯಿತಿಯನ್ನು  ಆದಾಯ ತೆರಿಗೆ ಇಲಾಖೆ ಹಿಂಪಡೆದಿದೆ.

ತೆರಿಗೆ ಇಲಾಖೆಯ ಅಧಿಕಾರಿಗಳು ಈ ನಾಲ್ಕು ಕ್ರಿಕೆಟ್‌ ಸಂಸ್ಥೆಗಳ ವ್ಯವಹಾರವನ್ನು ಪರಿಶೀಲಿಸಿದ ಬಳಿಕ ಈ ಅಂಶಗಳನ್ನು ಪತ್ತೆ ಹಚ್ಚಿದ್ದಾರೆ. ತಿದ್ದುಪಡಿ ತರಲಾಗಿರುವ ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 2 (15) ಪ್ರಕಾರ ಈ ಚಟುವಟಿಕೆಗಳು ವಾಣಿಜ್ಯ ಉದ್ದೇಶಿತ ಎಂದು ಪರಿಗಣಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.