ADVERTISEMENT

ಚುಟುಕು ಗುಟುಕು

​ಪ್ರಜಾವಾಣಿ ವಾರ್ತೆ
Published 11 ಮೇ 2012, 19:30 IST
Last Updated 11 ಮೇ 2012, 19:30 IST

ಟೆನಿಸ್: ಸೆಮಿಫೈನಲ್‌ಗೆ ಭೂಪತಿ-ಬೋಪಣ್ಣ

ಮ್ಯಾಡ್ರಿಡ್ (ಪಿಟಿಐ): ಭಾರತದ ಮಹೇಶ್ ಭೂಪತಿ-ರೋಹನ್ ಬೋಪಣ್ಣ ಇಲ್ಲಿ ನಡೆಯುತ್ತಿರುವ ಎಟಿಪಿ ಮ್ಯಾಡ್ರಿಡ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.ಏಳನೇ ಶ್ರೇಯಾಂಕದ ಈ ಜೋಡಿ ಕ್ವಾರ್ಟರ್‌ಫೈನಲ್‌ನಲ್ಲಿ 7-6, 7-6ರಲ್ಲಿ ಐಸಾಮ್ ಉಲ್ ಹಕ್ ಖುರೇಷಿ-ಜೆಯಾನ್ ಜುಲೈನ್ ರೋಜರ್ ಅವರನ್ನು ಮಣಿಸಿದರು. ಖುರೇಷಿ ಹಾಗೂ ಬೋಪಣ್ಣ ಕಳೆದ ವರ್ಷದ ಟೂರ್ನಿಯಲ್ಲಿ ಇಲ್ಲಿ ಒಂದಾಗಿ ಆಡಿದ್ದರು.

ಎಂಟರ ಘಟ್ಟಕ್ಕೆ ಪೇಸ್-ಸ್ಟೆಪನಿಕ್: ಭಾರತದ ಲಿಯಾಂಡರ್ ಪೇಸ್ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನಿಕ್ 6-3, 6-4ರಲ್ಲಿ ಶ್ರೇಯಾಂಕ ರಹಿತ ಅಟಗಾರರಾದ ಫ್ರಾನ್ಸ್‌ನ ರಿಚರ್ಡ್  ಗ್ಯಾಸ್ಕೂಟ್ ಹಾಗೂ ಗೇಯಲ್ ಮೊನ್‌ಫಿಲ್ಸ್ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.

ಅಥ್ಲೆಟಿಕ್ಸ್: ವಿಕಾಸ್‌ಗೆ ಆರನೇ ಸ್ಥಾನ

ದೋಹಾ (ಪಿಟಿಐ): ರಾಷ್ಟ್ರೀಯ ದಾಖಲೆ ಹೊಂದಿರುವ ಡಿಸ್ಕಸ್ ಥ್ರೋ ಸ್ಪರ್ಧಿ ಕರ್ನಾಟಕದ ವಿಕಾಸ್ ಗೌಡ ಇಲ್ಲಿ ನಡೆಯುತ್ತಿರುವ ಸ್ಯಾಮ್‌ಸಂಗ್ ಡೈಮೆಂಡ್ ಅಥ್ಲೆಟಿಕ್ ಕ್ರೀಡಾಕೂಟದ ಮೊದಲ ಲೆಗ್‌ನಲ್ಲಿ ಆರನೇ ಸ್ಥಾನ ಪಡೆದರು.
ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ವಿಕಾಸ್ 64.10ಮೀಟರ್ ದೂರ ಡಿಸ್ಕ್ ಎಸೆದರು. ಇತ್ತೀಚಿಗೆ ನಡೆದ ಅಥ್ಲೆಟಿಕ್ ಕೂಟದಲ್ಲಿ ವಿಕಾಸ್ 66.28ಮೀ. ದೂರ ಎಸೆದಿದ್ದರು.

ಟಿಟಿ: ಭಾರತ ಬಾಲಕಿಯರ ತಂಡಕ್ಕೆ ಬೆಳ್ಳಿ

ನವದೆಹಲಿ (ಪಿಟಿಐ): ಭಾರತದ ಬಾಲಕಿಯರ ತಂಡ ಸ್ಪೇನ್‌ನ ಗಿರೊನಾದಲ್ಲಿ ಮುಕ್ತಾಯವಾದ ಜೂನಿಯರ್ ಕೆಡೆಟ್ ಓಪನ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿತು. ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ 0-3ರಲ್ಲಿ ಜಪಾನ್ ಎದುರು ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟಿತು. ಆದರೆ, ಭಾರತದ ಬಾಲಕರ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದೆ.

ಭಾರತದ ಮನಿಕಾ ಬಾತ್ರಾ 15-17, 7-11, 5-11ರಲ್ಲಿ ಶಿಹೊ ಮತ್ಸುದಾಯಿರಾ ಮೇಲೂ, ರೀಟಾ 3-11, 2-11, 7-11ರಲ್ಲಿ ಯುಕಿ ಶೊಂಜಿ ವಿರುದ್ದವೂ ಸೋಲು ಕಂಡರು. ಡಬಲ್ಸ್ ವಿಭಾಗದಲ್ಲಿ ಮನಿಕಾ ಹಾಗೂ ರೀಟಾ ಜೋಡಿ 7-11, 7-11, 6-11ರಲ್ಲಿ ಮಿಕಿ ಫುಜಿಹರಾ-ಯೂರಿ ಅರಾಕಿ ಎದುರು ನಿರಾಸೆ ಅನುಭವಿಸಿತು. ಇದರಿಂದ ಭಾರತ ತಂಡಕ್ಕೆ 0-3ರಲ್ಲಿ ನಿರಾಸೆ.

ಹಾಕಿ: ಫೈನಲ್‌ಗೆ ಮುಂಬೈನ ಆರ್‌ಸಿಎಫ್
ಗದಗ: ಸ್ಥಳೀಯ ಹನುಮಾನ ಬ್ಲೆಸ್ಸಿಂಗ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿರುವ ಶಿವಕುಮಾರ ಉದಾಸಿ ಹಾಕಿ ಟೂರ್ನಿಯಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈನ ಆರ್‌ಸಿಎಫ್ ತಂಡವು 4-0 ಗೋಲುಗಳಿಂದ ಹುಬ್ಬಳ್ಳಿಯ ಯಂಗ್ ಸ್ಟಾರ್ಸ್‌ ತಂಡವನ್ನು ಸೋಲಿಸಿತು.

ಆರ್‌ಸಿಎಫ್ ತಂಡದ ಪರ ಮೊದಲ ಗೋಲನ್ನು ಮಹೇಶ (30 ಹಾಗೂ 44ನೇ ನಿಮಿಷ) ಗಳಿಸಿದರು. ಮೇಘರಾಜ 47, 60ನೇ ನಿಮಿಷದಲ್ಲಿ ಗೋಲು ಹೊಡೆದರು.ಮಹಿಳಾ ವಿಭಾಗದಲ್ಲಿ ಭೋಪಾಲ್‌ನ ಸಾಯಿ ಹಾಸ್ಟೇಲ್ ತಂಡವು 2-0  ಗೋಲುಗಳಿಂದ ಬುಡಲ್‌ಖಂಡ್ ತಂಡವನ್ನು ಮಣಿಸಿತು. ಜ್ಯೋತಿ ಮತ್ತು ಶಿಖಾ ತಲಾ ಒಂದು ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.