ADVERTISEMENT

ಚುಟುಕು ಗುಟುಕು

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 19:59 IST
Last Updated 19 ಜೂನ್ 2013, 19:59 IST

ಚೀನಾದ ಲೀ ನಾಗೆ ಮುನ್ನಡೆ
ಈಸ್ಟ್‌ಬೋರ್ನ್, ಇಂಗ್ಲೆಂಡ್ (ಐಎಎನ್‌ಎಸ್): ಚೀನಾದ ಲೀ ನಾ ಇಲ್ಲಿ ನಡೆಯುತ್ತಿರುವ ಎಜೋನ್ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಯಲ್ಲಿ6-2, 6-4 ರಲ್ಲಿ ಫ್ರಾನ್ಸ್‌ನ ಅಲಿಜ್ ಕೊರ್ನೆಟ್ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಮುನ್ನಡೆದಿದ್ದಾರೆ.
ಲೀ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಮಾರಿಯೊನ್ ಬಾರ್ತೊಲಿ ಅವರ ಸವಾಲನ್ನು ಎದುರಿಸಲಿದ್ದಾರೆ.

ಟಿಟಿ: ಪೀಟರ್ ಏಂಜೆಲ್ ಮುಖ್ಯ ಕೋಚ್?
ನವದೆಹಲಿ (ಪಿಟಿಐ): ಭಾರತ ಟೇಬಲ್ ಟೆನಿಸ್ ಫೆಡರೇಷನ್ (ಟಿಟಿಎಫ್‌ಐ) ಜರ್ಮನಿಯ ಪೀಟರ್ ಏಂಜೆಲ್ ಅವರನ್ನು ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರರಾಗಿ ನೇಮಿಸುವ ಸಾಧ್ಯತೆಗಳಿವೆ.

ಭಾರತ ಕ್ರೀಡಾ ಪ್ರಾಧಿಕಾರಕ್ಕೆ (ಎಸ್‌ಎಐ) ಏಂಜೆಲ್ ಅವರ ಹೆಸರನ್ನು ಸೂಚಿಸಲಾಗಿತ್ತು ಎಂದು ಟಿಟಿಎಫ್‌ಐ ಪ್ರಧಾನ ಕಾರ್ಯದರ್ಶಿ ಧನರಾಜ್ ಚೌಧರಿ ತಿಳಿಸಿದ್ದಾರೆ.

`ಭಾರತ ತಂಡಕ್ಕೆ ವಿದೇಶಿ ತರಬೇತುದಾರನ ಹುದ್ದೆಗೆ ಏಂಜೆಲ್ ಹೆಸರನ್ನು ಶಿಫಾರಸು ಮಾಡಿದ್ದೇವೆ. ನಮಗೆ 7-8 ಅರ್ಜಿಗಳು ಬಂದಿದ್ದವು. ಅದರಲ್ಲಿ ನಾಲ್ಕು ಹೆಸರುಗಳನ್ನು ಆಯ್ಕೆ ಮಾಡಿ ಎಸ್‌ಎಐಗೆ ಕಳುಹಿಸಿದ್ದೇವೆ' ಎಂದು ಚೌಧರಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ವಿಂಬಲ್ಡನ್‌ನಲ್ಲಿ ಈ ಸಲ ವೀನಸ್ ಇಲ್ಲ
ಲಂಡನ್ (ಐಎಎನ್‌ಎಸ್): ಗಾಯದ ಸಮಸ್ಯೆಯಿಂದಾಗಿ ವಿಂಬಲ್ಡನ್ ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ಐದು ಬಾರಿಯ ಚಾಂಪಿಯನ್ ವೀನಸ್ ವಿಲಿಯಮ್ಸ ಪ್ರಕಟಿಸಿದ್ದಾರೆ.

`ವಿಶ್ವ ರ‌್ಯಾಂಕಿಂಗ್‌ನಲ್ಲಿ 34ನೇ ಸ್ಥಾನಕ್ಕೆ ಕುಸಿದಿರುವ ವಿಲಿಯಮ್ಸ, ಗಾಯದ ಸಮಸ್ಯೆಯಿಂದ ಮುಂದಿನ ತಿಂಗಳವರೆಗೂ ಸ್ಪರ್ಧೆಯಿಂದ ದೂರ ಉಳಿಯುವುದಾಗಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ' ಎಂದು ಕ್ಸಿನ್ಹುವಾ ವರದಿ ಮಾಡಿದೆ.

`ಈ ವರ್ಷ ವಿಂಬಲ್ಡನ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರುವುದು ದುರದೃಷ್ಟಕರ. ನನಗೆ ತುಂಬಾ ನಿರಾಸೆಯಾಗಿದೆ. ಗಾಯ ವಾಸಿಯಾಗಲು ವಿಶ್ರಾಂತಿ ತೆಗೆದುಕೊಳ್ಳುವ ಅಗತ್ಯವಿದೆ' ಎಂದು ವಿಲಿಯಮ್ಸ ಹೇಳಿರುವುದಾಗಿ ಅದು ವರದಿ ಮಾಡಿದೆ.

ವಿಲಿಯಮ್ಸ 2000, 2001, 2005, 2007 ಹಾಗೂ 2008ರಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಕಳೆದ ವರ್ಷ ಮೊದಲ ಬಾರಿಗೆ ಪ್ರಥಮ ಸುತ್ತಿನಲ್ಲೇ ಸೋತು ಹೊರ ಬಿದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.