ADVERTISEMENT

ಚೆನ್ನೈನಲ್ಲಿ ಗುರು-ಶಿಷ್ಯರ ಆಟದ ಸೊಬಗು

ಕ್ರಿಕೆಟ್: ಆತಿಥೇಯರಿಗೆ ಸಚಿನ್, ಕೊಹ್ಲಿ ಆಸರೆ; ಆಸಕ್ತಿ ಕೆರಳಿಸಿದ ಟೆಸ್ಟ್

ಕೆ.ಓಂಕಾರ ಮೂರ್ತಿ
Published 23 ಫೆಬ್ರುವರಿ 2013, 19:59 IST
Last Updated 23 ಫೆಬ್ರುವರಿ 2013, 19:59 IST
ಚೆನ್ನೈಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತಕ್ಕೆ ಆಸರೆಯಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ರನ್ ಗಳಿಸಲು ಓಡಿದ ರೀತಿ 	-ಪಿಟಿಐ ಚಿತ್ರ
ಚೆನ್ನೈಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತಕ್ಕೆ ಆಸರೆಯಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ರನ್ ಗಳಿಸಲು ಓಡಿದ ರೀತಿ -ಪಿಟಿಐ ಚಿತ್ರ   

ಚೆನ್ನೈ: `ಫಾರ್ಮ್ ಎಂಬುದು ನೀರಿನ ಮೇಲಿನ ಗುಳ್ಳೆಯಂತೆ. ಅದು ತಾತ್ಕಾಲಿಕ. ಆದರೆ ಕ್ಲಾಸ್ ಎಂಬುದು ಶಾಶ್ವತ. ಹಿಮಾಲಯ ಪರ್ವತದಂತೆ, ಸೂರ್ಯ-ಚಂದ್ರರಂತೆ'

-ಸಚಿನ್ ತೆಂಡೂಲ್ಕರ್ ಕುರಿತು ನವಜೋತ್ ಸಿಂಗ್ ಸಿಧು ಹೇಳಿದ ಮಾತಿದು. ತೆಂಡೂಲ್ಕರ್ ವಿದಾಯ ಹೇಳಬೇಕು ಎಂದು ಹೋದ ವರ್ಷ ಟೀಕಾ ಪ್ರಹಾರವೇ ಹರಿದಿತ್ತು. ಆದರೆ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ಭಾರತ 12 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಆಸರೆಯಾಗಿದ್ದು 40 ವರ್ಷ ವಯಸ್ಸಿನ ಸಚಿನ್.

ಈ ಪರಿಣಾಮ ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಆರಂಭಿಕ ಆಘಾತದಿಂದ ಚೇತರಿಸಿಕೊಂಡಿತು. ಕಾಂಗರೂ ಪಡೆಯ 380 ರನ್‌ಗಳಿಗೆ ಉತ್ತರವಾಗಿ ದೋನಿ ಬಳಗ ಎರಡನೇ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 52 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ.
ಒತ್ತಡ ಮೆಟ್ಟಿ ನಿಂತು ಆಡಿದ ತೆಂಡೂಲ್ಕರ್ (ಬ್ಯಾಟಿಂಗ್ 71) ಹಾಗೂ ಕೊಹ್ಲಿ (ಬ್ಯಾಟಿಂಗ್ 50) ಭಾನುವಾರಕ್ಕೆ ತಮ್ಮ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಆತಿಥೇಯರು ಇನ್ನೂ 198 ರನ್‌ಗಳಿಂದ ಹಿಂದಿದ್ದಾರೆ.

ಸಚಿನ್‌ಗೆ ಭರ್ಜರಿ ಸ್ವಾಗತ...
ಇನಿಂಗ್ಸ್ ಆರಂಭಿಸಿದ ಮುರಳಿ ವಿಜಯ್ ಹಾಗೂ ವೀರೇಂದ್ರ ಸೆಹ್ವಾಗ್ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಅದರಲ್ಲೂ ಸೆಹ್ವಾಗ್ ವಿಕೆಟ್ ಬೀಳುತ್ತಿದ್ದಂತೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಲು ಶುರು ಮಾಡಿದರು. ಇದ್ಯಾಕೆ ಎಂದು ಕಕ್ಕಾಬಿಕ್ಕಿಯಾದವರಿಗೆ ಉತ್ತರ ಸಿದ್ಧವಾಗಿತ್ತು. ಏಕೆಂದರೆ ಆಗ ಕ್ರೀಸ್‌ಗೆ ಬಂದಿದ್ದು ತೆಂಡೂಲ್ಕರ್!

`ದಕ್ಷಿಣ ಭಾರತದ ಜನರನ್ನು ಬುದ್ಧಿವಂತರು ಎಂದು ನಾವು ಭಾವಿಸಿದ್ದೆವು. ಆದರೆ 12 ರನ್‌ಗಳಿಗೆ 2 ವಿಕೆಟ್ ಬಿದ್ದರೂ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದ್ದಾರೆ. ವೀರೂ ಔಟ್ ಆದರು ಎಂಬ ಖುಷಿಗೋ? ಸಚಿನ್ ಕ್ರೀಸ್‌ಗೆ ಬರುತ್ತಾರೆ ಎಂಬ ಖುಷಿಯೋ?' ಎಂದು ಪ್ರೆಸ್ ಬಾಕ್ಸ್‌ನಲ್ಲಿ ಉತ್ತರ ಭಾರತದ ಪತ್ರಕರ್ತರೊಬ್ಬರು ತಮಾಷೆ ಮಾಡಿದರು.

ಅದು ಸಚಿನ್ ಹಾಗೂ ಅಭಿಮಾನಿಗಳ ನಡುವಿನ ಇಷ್ಟು ವರ್ಷಗಳ ಪ್ರೀತಿ. ಅಭಿಮಾನಿಗಳ ಭರ್ಜರಿ ಚಪ್ಪಾಳೆಯ ಸ್ವಾಗತದ ನಡುವೆ ಕ್ರೀಸ್‌ಗೆ ಆಗಮಿಸಿದ ತೆಂಡೂಲ್ಕರ್ ಆರಂಭದಿಂದಲೇ ಆಕ್ರಮಣಕಾರಿಯಾಗಿದ್ದರು. ಎದುರಿಸಿದ ಮೊದಲ ಎಸೆತವನ್ನು ಆಕರ್ಷಕ ಕವರ್ ಡ್ರೈವ್ ಮೂಲಕ ಬೌಂಡರಿ ಗಳಿಸಿದಾಗಲೇ ಸಚಿನ್ ಬಗ್ಗೆ ಆಸ್ಟ್ರೇಲಿಯಾದ ಆಟಗಾರರಲ್ಲಿ ಆತಂಕ ಶುರುವಾಯಿತು. ಅದು ನಿಜವಾಗಲು ಹೆಚ್ಚು ಹೊತ್ತು ಬೇಕಾಗಲಿಲ್ಲ.

39 ರನ್ ಗಳಿಸಿದ್ದಾಗ ರನ್‌ಔಟ್‌ನಿಂದ ಪಾರಾಗ್ದ್ದಿದು ಹಾಗೂ ಒಮ್ಮೆ ಲಿಯೋನ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಮನವಿಯಿಂದ ಬಚಾವ್ ಆಗಿದ್ದು ಹೊರತುಪಡಿಸಿದರೆ ತೆಂಡೂಲ್ಕರ್ ಅವರದ್ದು ಕೌಶಲದಿಂದ ಕೂಡಿದ ಆಟ.
ತೆಂಡೂಲ್ಕರ್ ಮತ್ತು ವೇಗಿಗಳು...

ಸೆಹ್ವಾಗ್ ಹಾಗೂ ವಿಜಯ್ ಅವರನ್ನು ಬೌಲ್ಡ್ ಮಾಡಿದ್ದ ವೇಗಿ ಪ್ಯಾಟಿನ್ಸನ್ ತುಂಬಾ ಪ್ರಭಾವಿಯಾಗಿದ್ದರು. ಆದರೆ ಅವರ ಒಂದೇ ಓವರ್‌ನಲ್ಲಿ ಸಚಿನ್ ಮೂರು ಬೌಂಡರಿ ಬಾರಿಸಿದರು. ಆ ಕ್ಷಣ ಸುಂದರವಾಗಿತ್ತು. ಏಕೆಂದರೆ ಒಂದೆಡೆ 40 ವರ್ಷ ವಯಸ್ಸಿನ ಸಚಿನ್, ಇನ್ನೊಂದೆಡೆ 140-150 ಕಿ.ಮೀ. ವೇಗದಲ್ಲಿ ಬೌಲ್ ಮಾಡುತ್ತಿದ್ದ ಮಿಷೆಲ್ ಸ್ಟಾರ್ಕ್, ಪ್ಯಾಟಿನ್ಸನ್ ಹಾಗೂ ಸಿಡ್ಲ್ ಅವರಂಥ ಯುವ ವೇಗಿಗಳು.

ಆದರೆ ಅವರನ್ನು ತೆಂಡೂಲ್ಕರ್ (ಬ್ಯಾಟಿಂಗ್ 71; 128 ಎ, 205 ನಿ. 6 ಬೌಂ.) ಸಮರ್ಥವಾಗಿ ಎದುರಿಸಿದರು. ಮಾಸ್ಟರ್ ಬ್ಲಾಸ್ಟರ್ ಆಕ್ರಮಣಕಾರಿಯಾಗುತ್ತಿದ್ದಂತೆ ವೇಗಿ ಪ್ಯಾಟಿನ್ಸನ್ ಅವರನ್ನು ನಾಯಕ ಕ್ಲಾರ್ಕ್ ಬದಲಾಯಿಸಿದರು.

ಗುರು-ಶಿಷ್ಯರ ಜುಗಲ್‌ಬಂದಿ
ಸಚಿನ್ ಮೊದಲು ಪೂಜಾರ ಜೊತೆ ಮೂರನೇ ವಿಕೆಟ್‌ಗೆ 93 ರನ್ ಸೇರಿಸಿದರು. ಬಳಿಕ ಕೊಹ್ಲಿ ಜೊತೆ ಮುರಿಯದ ನಾಲ್ಕನೇ ವಿಕೆಟ್‌ಗೆ 77 ರನ್ ಜೋಡಿಸಿದ್ದಾರೆ. ಪೂಜಾರ (44; 74 ಎ, 116 ನಿ, 6 ಬೌಂ) ಕೂಡ ತಂಡಕ್ಕೆ ಆಸರೆಯಾದರು. ಚೆನ್ನಾಗಿಯೇ ಆಡುತ್ತಿದ್ದ ಅವರು ಪ್ಯಾಟಿನ್ಸನ್ ಎಸೆತದಲ್ಲಿ ಬೌಲ್ಡ್ ಆದರು.

ಆಗ ಕ್ರೀಸ್‌ಗೆ ಬಂದಿದ್ದು ಕೊಹ್ಲಿ. ಈ ಹಂತದಲ್ಲಿ ತೆಂಡೂಲ್ಕರ್ ಅವರ ಬ್ಯಾಟಿಂಗ್ ಶೈಲಿ ಕೂಡ ಬದಲಾಯಿತು. ಗುರು-ಶಿಷ್ಯರ ಆಟ ಮನಮೋಹಕವಾಗಿತ್ತು. ವಿರಾಟ್ ಜೊತೆಗಿನ 77 ರನ್‌ಗಳ ಜೊತೆಯಾಟದ ಸಮಯದಲ್ಲಿ ಮುಂಬೈಕರ್ ಗಳಿಸಿದ್ದು ಕೇವಲ 26 ರನ್. ಸಚಿನ್ ಕೇವಲ 80 ಎಸೆತಗಳಲ್ಲಿ 67ನೇ ಅರ್ಧ ಶತಕ ಗಳಿಸಿದರು. ಕೊಹ್ಲಿ (ಬ್ಯಾಟಿಂಗ್ 50; 84 ಎ, 99 ನಿ, 7 ಬೌಂ) ಕೂಡ ಪ್ರವಾಸಿ ಬೌಲರ್‌ಗಳ ಮೇಲೆ ಒತ್ತಡ ಹೇರಿದರು.

ಭಾನುವಾರ ಆಟ ಮುಂದುವರಿಸಲಿರುವ ಇವರಿಬ್ಬರು ಮುಂದೆ ಇನ್ನೂ ದೊಡ್ಡ ಸವಾಲಿದೆ. ಕಾಂಗರೂ ಪಡೆಯ ಆಟಗಾರರು ಅತ್ಯುತ್ತಮ ಫೀಲ್ಡಿಂಗ್‌ನಿಂದ ಚಪ್ಪಾಳೆ ಗಿಟ್ಟಿಸಿದರು. ಅದರಲ್ಲೂ ವಾರ್ನರ್ ಗಾಳಿಯಲ್ಲಿ ಹಾರಿ ಚೆಂಡನ್ನು ತಡೆದ ರೀತಿ ಅದ್ಭುತ.

ಆಸ್ಟ್ರೇಲಿಯಾದ ಸವಾಲಿನ ಮೊತ್ತ
ಇದಕ್ಕೂ ಮೊದಲು ಆಸ್ಟ್ರೇಲಿಯಾ ತಂಡದವರು ತಮ್ಮ ಮೊದಲ ಇನಿಂಗ್ಸ್‌ನಲ್ಲಿ 133 ಓವರ್‌ಗಳಲ್ಲಿ 380 ರನ್‌ಗಳಿಗೆ ಆಲೌಟಾದರು. ಒಂದು ಹಂತದಲ್ಲಿ ಕೇವಲ 153 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ತಂಡ ಇಷ್ಟು ರನ್ ಪೇರಿಸಿದ್ದು ಅಚ್ಚರಿಯೇ ಸರಿ.

ಇಷ್ಟು ರನ್ ಗಳಿಸಲು ಕಾರಣರಾಗಿದ್ದು ನಾಯಕ ಕ್ಲಾರ್ಕ್ (130; 246 ಎ., 323 ನಿ., 12 ಬೌಂ., 1 ಸಿ.). ಭಾರತದ ಪರ ಆರ್.ಅಶ್ವಿನ್ (103ಕ್ಕೆ7) ಯಶಸ್ವಿ ಬೌಲರ್ ಎನಿಸಿದರು.

`ಅಕಸ್ಮಾತ್ ಈ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದರೆ ಅಂಪೈರ್ ಧರ್ಮಸೇನಾಗೆ ಪಂದ್ಯ ಶ್ರೇಷ್ಠ ನೀಡಬೇಕು' ಎಂದು ಕ್ರಿಕೆಟ್ ಪ್ರೇಮಿಗಳು ಟ್ವಿಟ್ ಮಾಡಿದ್ದರಲ್ಲಿ ಅರ್ಥವಿದೆ. ಏಕೆಂದರೆ ಈ ಅಂಪೈರ್ ಹಲವು ತಪ್ಪು ನಿರ್ಧಾರ ಕೈಗೊಂಡರು. ಕ್ಲಾರ್ಕ್ ಔಟ್ ಆಗ್ದ್ದಿದು ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು. ಆದರೆ ಧರ್ಮಸೇನಾ ಕೈ ಮೇಲೆತ್ತಲಿಲ್ಲ. ಆಗ ಕ್ಲಾರ್ಕ್ 39 ರನ್ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.