ADVERTISEMENT

ಚೆನ್ನೈ ಓಪನ್ ಟೆನಿಸ್: ಸೆಮಿಫೈನಲ್‌ಗೆ ಮಿಲೋಸ್, ಅಲ್ಮಾರ್ಗೊ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST

ಚೆನ್ನೈ: ವೇಗದ ಸರ್ವ್‌ಗಳಿಗೆ ಹೆಸರು ಪಡೆದಿರುವ ಆಟಗಾರ ಕೆನಡಾದ ಮಿಲೋಸ್ ರೋನಿಕ್ ಇಲ್ಲಿ ನಡೆಯುತ್ತಿರುವ ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು.

ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಿಲೋಸ್ 7-6, 6-3 ರಲ್ಲಿ ಇಸ್ರೇಲ್‌ನ ಡುಡಿ ಸೆಲಾ ವಿರುದ್ಧ ಜಯ ಸಾಧಿಸಿದರು. ಇಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿರುವ ಕೆನಡಾದ ಆಟಗಾರ 90 ನಿಮಿಷಗಳ ಹೋರಾಟದ ಬಳಿಕ ಗೆಲುವು ತಮ್ಮದಾಗಿಸಿಕೊಂಡರು.

ಮಿಲೋಸ್ ನಾಲ್ಕರಘಟ್ಟದ ಪಂದ್ಯದಲ್ಲಿ ಸ್ಪೇನ್‌ನ ನಿಕೊಲಸ್ ಅಲ್ಮಾರ್ಗೊ ವಿರುದ್ಧ ಪೈಪೋಟಿ ನಡೆಸುವರು. ದಿನದ ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಅಲ್ಮಾರ್ಗೊ 4-6, 7-6, 6-4 ರಲ್ಲಿ ಜಪಾನ್‌ನ ಯೂಚಿ ಸುಗಿತಾ ಅವರನ್ನು ಮಣಿಸಿದರು.

ವಾವ್ರಿಂಕಾಗೆ ಆಘಾತ: ಕಳೆದ ಬಾರಿಯ ಚಾಂಪಿಯನ್ ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ ಕ್ವಾರ್ಟರ್ ಫೈನಲ್‌ನಲ್ಲಿ ಆಘಾತ ಅನುಭವಿಸಿದರು. ಜಪಾನ್‌ನ ಗೊ ಸೊಯೆದಾ 6-4, 6-4 ರಲ್ಲಿ ವಾಂವ್ರಿಂಕಾ ಅವರನ್ನು ಸೋಲಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು.

ವಾವ್ರಿಂಕಾ ಎಂದಿನ ಲಯದಲ್ಲಿ ಆಡಲು ವಿಫಲರಾದರು. `ಪ್ರಮುಖ ಆಟಗಾರನ ವಿರುದ್ಧ ಗೆಲುವು ಲಭಿಸಿರುವುದು ಸಂತಸದ ವಿಚಾರ~ ಎಂದು ಸೊಯೆದಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.