ADVERTISEMENT

ಚೆಸ್‌: ಮತ್ತೆ ಡ್ರಾ ಸಾಧಿಸಿದ ಆನಂದ್‌

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ಖಾಂಟಿ ಮನ್‌ಸಿಸ್ಕ್‌ (ಪಿಟಿಐ): ವಿಶ್ವನಾಥನ್‌ ಆನಂದ್‌ ಇಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ ಎಂಟನೇ ಸುತ್ತಿನ ಪಂದ್ಯದಲ್ಲಿ ಅರ್ಮೇನಿಯದ ಲೆವೊನ್‌ ಅರೋನಿಯನ್‌ ಜೊತೆ ಡ್ರಾ ಸಾಧಿಸಿದರು.

ಇದೀಗ ಆನಂದ್‌ ಮತ್ತು ಅರೋನಿಯನ್‌ ತಲಾ ಐದು ಪಾಯಿಂಟ್‌ಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಟೂರ್ನಿಯಲ್ಲಿ ಇನ್ನು ಆರು ಸುತ್ತುಗಳ ಪಂದ್ಯಗಳು ಬಾಕಿಯಿವೆ. ಇದರಲ್ಲಿ ನಾಲ್ಕರಲ್ಲೂ ಆನಂದ್‌ ಬಿಳಿ ಕಾಯಿಗಳೊಂದಿಗೆ ಆಡಲಿದ್ದಾರೆ. ಆದ್ದರಿಂದ ಭಾರತದ ಗ್ರ್ಯಾಂಡ್‌ಮಾಸ್ಟರ್‌ಗೆ ಪ್ರಶಸ್ತಿ ಗೆಲ್ಲಲು ಉತ್ತಮ ಅವಕಾಶವಿದೆ.

ರಷ್ಯಾದ ವ್ಲಾದಿಮಿರ್‌ ಕ್ರಾಮ್ನಿಕ್‌ ಮತ್ತು ದಿಮಿತ್ರಿ ಆ್ಯಂಡ್ರೆಕಿನ್‌ ನಡುವಿನ ಎಂಟನೇ ಸುತ್ತಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಬಲ್ಗೇರಿಯದ ವೆಸೆಲಿನ್‌ ಟೊಪಲೊವ್‌ ಮತ್ತು ಅಜರ್‌ಬೈಜಾನ್‌ನ ಶಕ್ರಿಯಾರ್‌ ಮಮೆದ್ಯರೊವ್‌ ಅವರೂ ಪಾಯಿಂಟ್‌ ಹಂಚಿಕೊಂಡರು. ಕ್ರಾಮ್ನಿಕ್‌ 4.5 ಪಾಯಿಂಟ್‌ ಹೊಂದಿದ್ದರೆ, ಸ್ವಿಡ್ಲರ್‌ 3.5 ಪಾಯಿಂಟ್‌ ಗಳಿಸಿದ್ದಾರೆ.

ಆನಂದ್‌ ವಿರುದ್ಧ ಬಿಳಿ ಕಾಯಿಗಳೊಂದಿಗೆ ಆಡಿದ ಅರೋನಿಯನ್‌ ಆರಂಭದಲ್ಲಿ ಅಲ್ಪ ಮೇಲುಗೈ ಸಾಧಿಸಿದ್ದರು. ಆದರೆ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಮರುತಂತ್ರ ರೂಪಿಸಲು ಯಶಸ್ವಿಯಾದರು. 19 ನಡೆಗಳ ಬಳಿಕ ಇಬ್ಬರೂ ಡ್ರಾಗೆ ಒಪ್ಪಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.