ADVERTISEMENT

ಚೆಸ್: ಅಕ್ಷಯ್ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 19:30 IST
Last Updated 14 ಜೂನ್ 2011, 19:30 IST

ಶಿವಮೊಗ್ಗ: ಬೆಂಗಳೂರಿನ ಅಕ್ಷಯ್ ಭಾರದ್ವಾಜ್, ಭದ್ರಾವತಿಯ ಕಾಗದನಗರದಲ್ಲಿ ಎಂ.ಪಿ.ಎಂ ಚೆಸ್ ಕ್ಲಬ್ ಆಶ್ರಯದಲ್ಲಿ ನಡೆದ ರಾಜ್ಯ 13 ವರ್ಷದೊಳಗಿನವರ ಫಿಡೆ ರೇಟೆಡ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡನು.

ಮಂಗಳವಾರ ಮುಕ್ತಾಯಗೊಂಡ ಈ ಕೂಟದಲ್ಲಿ ಅಕ್ಷಯ್ ಹತ್ತು ಸುತ್ತುಗಳಿಂದ ಎಂಟೂವರೆ ಪಾಯಿಂಟ್ಸ್ ಸಂಗ್ರಹಿಸಿದ. ಅಕ್ಷಯ್ ಅಂತಿಮ ಸುತ್ತಿನಲ್ಲಿ ಬೆಂಗಳೂರಿನ ಸಾರಂಗ್ ಎಂ.ಎಸ್. (7.5) ಜತೆ 40 ನಡೆಗಳ ನಂತರ ಡ್ರಾ  ಮಾಡಿಕೊಂಡನು. ಎರಡನೇ ಬೋರ್ಡ್‌ನಲ್ಲಿ ಪಾಂಗಾಳ ಗೋಪಾಲಕೃಷ್ಣ ನಾಯಕ್ ಜತೆ ಡ್ರಾಕ್ಕೆ ಒಪ್ಪಿಕೊಂಡ ಮಂಗಳೂರಿನವರೇ ಆದ ಆರ್.ಎ.ಅನಂತರಾಮು (7.5) ದ್ವಿತೀಯ ಸ್ಥಾನ ಪಡೆದನು.

ಗೋಪಾಲಕೃಷ್ಣ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅಕ್ಷಯ್ ಮತ್ತು ಅನಂತರಾಮು ದೆಹಲಿಯಲ್ಲಿ ಅಕ್ಟೋಬರ್ 2 ರಿಂದ ನಡೆಯುವ ರಾಷ್ಟ್ರೀಯ 13 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವರು.

ಮಾನಸಾ ರಾಜ್ಯ ಮಹಿಳಾ ಚಾಂಪಿಯನ್: ಮಂಗಳೂರಿನ ಕೆ.ಮಾನಸಾ, ಭದ್ರಾವತಿಯ ಕಾಗದನಗರದ ರಾಮ ಮಂದಿರದಲ್ಲಿ ನಡೆದ ರಾಜ್ಯ ಮಹಿಳಾ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಆರು ಪಾಯಿಂಟ್‌ಗಳೊಡನೆ ಪ್ರಶಸ್ತಿ ಗೆದ್ದುಕೊಂಡರು.

ಎಂ.ಪಿ.ಎಂ. ಚೆಸ್ ಕ್ಲಬ್ ಆಶ್ರಯದಲ್ಲಿ ನಡೆದ ಈ ಏಳು ಸುತ್ತುಗಳ ಚಾಂಪಿಯನ್‌ಷಿಪ್‌ನಲ್ಲಿ ಮಾನಸಾ ಆರು ಪಾಯಿಂಟ್ಸ್ ಸಂಗ್ರಹಿಸಿದರು. ಶಿವಮೊಗ್ಗದ ಸೃಷ್ಟಿ ಜೆ.ಶೆಟ್ಟಿ (5.5) ಎರಡನೇ ಸ್ಥಾನ ಪಡೆದರು.

ಈ ಇಬ್ಬರ ಜತೆ ಮೂರನೇ ಸ್ಥಾನ ಪಡೆದ ಹಾಸನದ ಸಂಪದಾ ಎಚ್.ಆರ್. (5.5) ಮತ್ತು ಶಿವಮೊಗ್ಗದ ನಿಶಾ ಪಾಟ್ಕರ್ (5.5) ರಾಷ್ಟ್ರೀಯ ಮಹಿಳಾ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಅರ್ಹತೆ ಪಡೆದರು.ರಾಷ್ಟ್ರೀಯ ಮಹಿಳಾ ಚಾಂಪಿಯನ್‌ಷಿಪ್, ಚೆನ್ನೈನಲ್ಲಿ ಜುಲೈ 1 ರಿಂದ 13ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.