ADVERTISEMENT

ಚೆಸ್: ಅಗ್ರಸ್ಥಾನಕ್ಕೆ ಆಗಸ್ಟಿನ್

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 19:30 IST
Last Updated 21 ಜುಲೈ 2012, 19:30 IST

ಮಂಗಳೂರು: ಆರಂಭದ ಸುತ್ತುಗಳ ಹಿನ್ನಡೆಯಿಂದ ಪ್ರಗತಿ ಕಾಣುತ್ತಿರುವ ಅಗ್ರ ಶ್ರೇಯಾಂಕದ ಎ.ಆಗಸ್ಟಿನ್ (ಕೊಡಗು) ಮೊದಲ ಬಾರಿ ಒಂಟಿಯಾಗಿ ಮೊದಲ ಸ್ಥಾನಕ್ಕೇರಿದ. ರಾಜ್ಯ 15 ವರ್ಷದೊಳಗಿನವರ ಫಿಡೆ ರೇಟೆಡ್ ಓಪನ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಆಡಿದ ಎರಡೂ ಸುತ್ತುಗಳಲ್ಲಿ ಉತ್ತಮ ಗೆಲುವನ್ನು ಪಡೆದ ಆಗಸ್ಟಿನ್ ಎಂಟನೇ ಸುತ್ತಿನ ನಂತರ ಆರೂವರೆ ಪಾಯಿಂಟ್ಸ್ ಸಂಗ್ರಹಿಸಿದ್ದಾನೆ.

ಕೊಡಿಯಾಲಬೈಲ್‌ನ ಸುಬ್ರಹ್ಮಣ್ಯ ಸಭಾದಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಮೂರು ದಿನಗಳಿಂದ ಅಗ್ರಸ್ಥಾನ ಬದಲಾಗುತ್ತಿದೆ. ಆಗಸ್ಟಿನ್ ಬೆಳಿಗ್ಗೆ ಏಳನೇ ಸುತ್ತಿನಲ್ಲಿ, ಶುಕ್ರವಾರದ ಕೊನೆಗೆ ಅಗ್ರಸ್ಥಾನಕ್ಕೇರಿದ್ದ ಎರಡನೇ ಶ್ರೇಯಾಂಕದ ಎಂ.ಸಾತ್ವಿಕ್ (5.5) ವಿರುದ್ಧ ಗೆಲುವನ್ನು ದಾಖಲಿಸಿದ. ಮಧ್ಯಾಹ್ನ ಬೆಂಗಳೂರಿನ ಆರ್.ಪಾರ್ಥಸಾರಥಿ (5) ವಿರುದ್ಧವೂ ಯಶಸ್ಸು ಮುಂದುವರಿಸಿದ. ಮಂಗಳೂರಿನ ಶರಣ್ ರಾವ್ (6) ಎರಡನೇ ಸ್ಥಾನದಲ್ಲಿದ್ದಾರೆ. ತಲಾ ಐದೂವರೆ ಪಾಯಿಂಟ್ಸ್ ಸಂಗ್ರಹಿಸಿರುವ ಆಂಡ್ರಿಯಾ ಡಿಸೋಜ, ಬೆಂಗಳೂರಿನ ಎಂ.ಸಾತ್ವಿಕ್ ಮತ್ತು ಮೈಸೂರಿನ ಎಚ್.ಎ.ಅಮೋಘ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

ಅಮೋಘ, ಎಂಟನೇ ಸುತ್ತಿನಲ್ಲಿ ಎಂ.ಸಾತ್ವಿಕ್‌ಗೆ ದಿನದ ಎರಡನೇ ಸೋಲು ಕಾಣಿಸಿದರೆ, ಶರಣ್ ರಾವ್, ಎರಡನೇ ಬೋರ್ಡ್‌ನಲ್ಲಿ ಸ್ಥಳೀಯ ಆಟಗಾರ್ತಿ ಆಂಡ್ರಿಯಾ ಡಿಸೋಜ ವಿರುದ್ಧ ಜಯಗಳಿಸಿದ. ಶಿವಮೊಗ್ಗದ ನಿಖಿಲ್ ಉಮೇಶ್ (5) ಮತ್ತು ಬೆಂಗಳೂರಿನ ಓಜಸ್ ಕುಲಕರ್ಣಿ (4.5) ನಡುವಣ ಪಂದ್ಯ ಡ್ರಾ ಆಯಿತು. ಮಂಗಳೂರಿನ ಶಾಬ್ಧಿಕ್ ವರ್ಮ (5), ಕೆ.ಆದಿತ್ಯ ಪೈ (4) ವಿರುದ್ಧ, ವಿವೇಕರಾಜ್ (5), ಪುತ್ತೂರಿನ ಎ.ಚಂದನ್ (4) ವಿರುದ್ಧ ಜಯಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.