ADVERTISEMENT

ಚೆಸ್‌: ಅರೋನಿಯನ್‌ಗೆ ಆಘಾತ ನೀಡಿದ ಹರಿಕೃಷ್ಣ

ಪಿಟಿಐ
Published 13 ಜುಲೈ 2017, 19:30 IST
Last Updated 13 ಜುಲೈ 2017, 19:30 IST
ಪೆಂಟಾಲ ಹರಿಕೃಷ್ಣ
ಪೆಂಟಾಲ ಹರಿಕೃಷ್ಣ   

ಜಿನೆವಾ: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಪೆಂಟಾಲ ಹರಿಕೃಷ್ಣ ಅವರು ಜಿನೆವಾ ಫಿಡೆ ಗ್ರ್ಯಾನ್‌ ಪ್ರಿ  ಚೆಸ್‌ ಟೂರ್ನಿಯಲ್ಲಿ ಗುರುವಾರ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗಿದ್ದಾರೆ.

ಆರನೇ ಸುತ್ತಿನ ಹಣಾಹಣಿಯಲ್ಲಿ ಹರಿಕೃಷ್ಣ, ಅರ್ಮೇನಿಯಾದ ಆಟಗಾರ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ಲೆವೊನ್‌ ಅರೋನಿಯನ್‌ ಅವರನ್ನು ಪರಾಭವಗೊಳಿಸಿದರು.

ಈ ಗೆಲುವಿನೊಂದಿಗೆ ಪೂರ್ಣ ಪಾಯಿಂಟ್‌ ಕಲೆಹಾಕಿರುವ ಭಾರತದ ಆಟಗಾರ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿ ದ್ದಾರೆ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 22ನೇ ಸ್ಥಾನದಲ್ಲಿರುವ ಹರಿಕೃಷ್ಣ ಅವರ ಖಾತೆಯಲ್ಲಿ ನಾಲ್ಕು ಪಾಯಿಂಟ್ಸ್‌ ಇವೆ. ಅವರು ಆಡಿದ  ಆರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿದ್ದು, ನಾಲ್ಕರಲ್ಲಿ ಡ್ರಾ ಮಾಡಿಕೊಂಡಿದ್ದಾರೆ.

ADVERTISEMENT

ಕಪ್ಪು ಕಾಯಿಗಳೊಂದಿಗೆ ಆಡಿದ ಹರಿಕೃಷ್ಣ ಆರಂಭದಲ್ಲಿ ಎಚ್ಚರಿಕೆಯ ಆಟ ಆಡಿದರು. ಎದುರಾಳಿ ಆಟಗಾರ ಕೂಡ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು.  ಹೀಗಾಗಿ ಪಂದ್ಯ ರೋಚಕತೆ ಪಡೆದು ಕೊಂಡಿತ್ತು. ಈ ಹಂತದಲ್ಲಿ ಅರೋನಿ ಯನ್‌   ಮಾಡಿದ ತಪ್ಪಿನ  ಲಾಭ ಎತ್ತಿಕೊಂಡ 31 ವರ್ಷದ  ಹರಿಕೃಷ್ಣ  ಗೆಲುವಿನ ತೋರಣ ಕಟ್ಟಿದರು.  ಏಳನೇ ಸುತ್ತಿನಲ್ಲಿ ಹರಿಕೃಷ್ಣ, ರಷ್ಯಾದ ಅಲೆಕ್ಸಾಂ ಡರ್‌ ಗ್ರಿಸ್‌ಚುಕ್‌ ವಿರುದ್ಧ ಆಡಲಿದ್ದಾರೆ.

‘ಗ್ರಿಸ್‌ಚುಕ್‌ ಬಲಿಷ್ಠ ಆಟಗಾರ. ಅವರನ್ನು ಸೋಲಿಸಲು ಭಿನ್ನ ಯೋಜನೆ ಹೆಣೆದಿದ್ದು ಶುಕ್ರವಾರದ ಪಂದ್ಯದಲ್ಲಿ ಅದಕ್ಕನುಗುಣವಾಗಿ ಆಡುತ್ತೇನೆ’ ಎಂದು  ಹರಿಕೃಷ್ಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.