ADVERTISEMENT

ಚೆಸ್: ವೆಂಕಟೇಶ್‌ಗೆ 5ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 19:59 IST
Last Updated 19 ಜೂನ್ 2013, 19:59 IST

ವರ್ನಾ, ಬಲ್ಗೇರಿಯಾ (ಪಿಟಿಐ): ಗ್ರ್ಯಾಂಡ್ ಮಾಸ್ಟರ್ ಎಂ.ಆರ್.ವೆಂಕಟೇಶ್ ಇಲ್ಲಿ ನಡೆದ ಗ್ರ್ಯಾಂಡ್ ಯುರೋಪ್ ಗೋಲ್ಡನ್ ಸ್ಯಾಂಡ್ಸ್ ಅಂತರರಾಷ್ಟ್ರೀಯ ಚೆಸ್ ಟೂರ್ನಿಯ ಅಂತಿಮ ಸುತ್ತಿನಲ್ಲಿ ರುಮೇನಿಯದ ಮಿರ್ಸೆಯಾ ಎಮಿಲಿಯನ್ ಪಾರ್ಲಿಗ್ರಾಸ್ ಅವರನ್ನು ಸೋಲಿಸಿ ಟೂರ್ನಿಯಲ್ಲಿ ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ಟೂರ್ನಿಯ 9 ಸುತ್ತುಗಳಲ್ಲಿ 7 ಪಾಯಿಂಟ್‌ಗಳೊಂದಿಗೆ ವೆಂಕಟೇಶ್ ಜಂಟಿ ಎರಡನೇ ಸ್ಥಾನ ಪಡೆದರು. ಆದರೆ, ಚೆಕ್ ಗಣರಾಜ್ಯದ ಜಿಬ್ನಿಕ್ ರಾಸೆಕ್, ರುಮೇನಿಯದ ವ್ಲಾಡಿಸ್ಲಾವ್ ನಿವೆದ್ನಿಚಿ ಹಾಗೂ ಮ್ಯಾಸೆಡೊನಿಯಾ ವ್ಲಾದಿಮಿರ್ ಜಾರ್ಜಿವ್ ಸಹ ಇಷ್ಟೇ ಪಾಯಿಂಟ್ ಪಡೆದ ಕಾರಣ ಟೈ ಬ್ರೇಕರ್ ನಡೆಸಲಾಯಿತು. ಈ ವೇಳೆ ಭಾರತದ ವೆಂಕಟೇಶ್‌ಗೆ ಐದನೇ ಸ್ಥಾನ ಲಭಿಸಿತು.

ಭಾರತದ ಆಟಗಾರರ ಪೈಕಿ ಗ್ರ್ಯಾಂಡ್ ಮಾಸ್ಟರ್ ಎಸ್.ಅರುಣ್ ಪ್ರಸಾದ್‌ಗೆ ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶಗಳಿದ್ದವು. ಆದರೆ ಅಂತಿಮ ಸುತ್ತಿನಲ್ಲಿ ಪ್ರಸಾದ್ ಅವರನ್ನು ಸೋಲಿಸಿದ ಸ್ವೀಡನ್ನಿನ ನಿಲ್ಸ್ ಗ್ರಾಂಡೆಲಿಸ್ ಪ್ರಶಸ್ತಿ ಗೆದ್ದರು.

ಭಾರತದ ರಾಷ್ಟ್ರೀಯ ಮಹಿಳಾ ಚಾಂಪಿಯನ್ ಮೇರಿ ಅನ್ನಾ ಗೋಮ್ಸ ಬಲ್ಗೇರಿಯಾದ ವಸಿಲ್ ಸ್ಪಾಸೊವ್ ಅವರೊಂದಿಗೆ ಡ್ರಾ ಸಾಧಿಸಿ 6.5 ಪಾಯಿಂಟ್‌ಗಳೊಂದಿಗೆ ಟೂರ್ನಿಯಲ್ಲಿ ಉತ್ತಮ ಮಹಿಳಾ ಆಟಗಾರ್ತಿ ಎನಿಸಿದರು.

ಅಂತರರಾಷ್ಟ್ರೀಯ ಮಾಸ್ಟರ್ ಅಶ್ವಿನ್ ಜಯರಾಮ್ ಭಾರತದ ವಿದಿತ್ ಗುಜರಾತಿ ವಿರುದ್ಧ ಡ್ರಾ ಸಾಧಿಸಿ 6.5 ಪಾಯಿಂಟ್‌ಗಳೊಂದಿಗೆ ಟೂರ್ನಿ ವ್ಯವಹಾರ ಕೊನೆಗೊಳಿಸಿದ್ದಾರೆ. ಜಯರಾಮ್ ಗ್ರ್ಯಾಂಡ್ ಮಾಸ್ಟರ್ ಪದವಿ ಸನಿಹದಲ್ಲಿದ್ದು, ಎರಡು ಟೂರ್ನಿಗಳಲ್ಲಿ 26 ಪಾಯಿಂಟ್ ಗಳಿಸಿದ್ದಾರೆ.

ವಿದಿತ್, ಜಯರಾಮ್, ಅರುಣ್ ಪ್ರಸಾದ್, ಅಭಿಜಿತ್ ಗುಪ್ತಾ ಹಾಗೂ ಸೇನ್‌ಗುಪ್ತಾ ಟೂರ್ನಿಯಲ್ಲಿ ಕ್ರಮವಾಗಿ 8, 9,10, 12 ಹಾಗೂ 17 ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.