ADVERTISEMENT

ಚೊಚ್ಚಲ ಕೆಬಿಎಲ್: 10 ಲಕ್ಷ ರೂ. ಬಹುಮಾನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST

ಬೆಂಗಳೂರು: ಚೊಚ್ಚಲ ಕರ್ನಾಟಕ ಬ್ಯಾಡ್ಮಿಂಟನ್ ಲೀಗ್ (ಕೆಬಿಎಲ್) ಒಟ್ಟು ಹತ್ತು ಲಕ್ಷ ರೂಪಾಯಿ ಬಹುಮಾನ ಒಳಗೊಂಡಿದ್ದು, ಆರು ಫ್ರಾಂಚೈಸಿಗಳು ಬಿಡ್‌ನಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ಸೋಮವಾರ ರಾತ್ರಿ ನಡೆದ ಬಿಡ್‌ನಲ್ಲಿ ನಾಲ್ಕು ಫ್ರಾಂಚೈಸಿಗಳ ಪ್ರತಿನಿಧಿಗಳು ದಾಖಲೆಗಳಿಗೆ ಸಹಿ ಮಾಡಿದ್ದಾರೆ. ಇನ್ನುಳಿದ ಇಬ್ಬರು ಸಹಿ ಮಾಡುವುದಾಗಿ ತಿಳಿಸಿದ್ದಾರೆ ಎಂದು ಕೆಬಿಎಲ್ ಮುಖ್ಯಸ್ಥ ಥಾಮಸ್ ಕುನ್ನತ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಬಿಡ್‌ನಲ್ಲಿ ಪಾಲ್ಗೊಳ್ಳಲು ಮೊದಲು 15 ಅರ್ಜಿಗಳು ಬಂದಿದ್ದವು. ಮೂರು ವರ್ಷದ ಅವಧಿಗೆ 2.5 ಲಕ್ಷ ರೂಪಾಯಿ ಕನಿಷ್ಠ ಮೊತ್ತವನ್ನು ನಿಗದಿ ಮಾಡಲಾಗಿತ್ತು. ಕುಮಾರ್  ಸ್ಪೋರ್ಟ್ಸ್‌ನ ಲೀ ನಿಂಗ್ ತಂಡದವರು 2.57 ಲಕ್ಷ ರೂ. ನೀಡಿದರು. ಇದು ಹೆಚ್ಚು ಮೊತ್ತಕ್ಕೆ ಮಾರಾಟವಾದ ಬಿಡ್ ಆಯಿತು. ಮಾಜಿ ಬ್ಯಾಡ್ಮಿಂಟನ್ ಆಟಗಾರ ವಿವೇಕ್ ಕುಮಾರ್ 2.52ಲಕ್ಷ ರೂ. ನೀಡಿ ತಂಡದ ಮಾಲೀಕರಾದರು.

ಅರತ್ ಫೈಟರ್ಸ್‌ (ಮುತ್ತುಕೃಷ್ಣನ್ ಮತ್ತು ತಂಡ), ಎಚ್.ಬಿ.  ಚಾಲೆಂಜ ರ್ಸ್ (ಕೃಷ್ಣ ಕುಮಾರ್ ಮತ್ತು ತಂಡ), ವೈಟ್ ಪಿಕಾಕ್ (ಶಿವಪ್ರಕಾಶ್) ಹಾಗೂ ಟಿಮ್ ವಿಕ್ಟರ್ ಅವರು ಫ್ರಾಂಚೈಸಿಗಳನ್ನು ಹೊಂದುವಲ್ಲಿ ಯಶಸ್ವಿಯಾಗಿದ್ದಾರೆ.

ನವೆಂಬರ್ 5ರಿಂದ 19ರ ವರೆಗೆ ಕೆಬಿಎಲ್‌ನ ಪಂದ್ಯಗಳು ಬ್ಯಾಡ್ಮಿಂಟನ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿವೆ.
ಈ ಮೊದಲು ಧಾರವಾಡ, ಹುಬ್ಬಳ್ಳಿ, ದಾವಣಗೆರೆ, ಮಂಗಳೂರು ಸೇರಿದಂತೆ ಇತರೆ ಜಿಲ್ಲಾ ಕೇಂದ್ರಗಳಲ್ಲಿ ಪಂದ್ಯಗಳನ್ನು ಆಯೋಜಿಸುವುದಾಗಿ ಥಾಮಸ್ ಹೇಳಿದ್ದರು. ಆದರೆ ಬೆಂಗಳೂರು ಹೊರತು ಪಡಿಸಿ ಬಿಡ್‌ನಲ್ಲಿ ಪಾಲ್ಗೊಳ್ಳಲು ಹೊರ ಜಿಲ್ಲೆಯವರು ಆಸಕ್ತಿ ತೋರಿಲ್ಲ. ಆದ್ದರಿಂದ ಅಲ್ಲಿ ಪಂದ್ಯಗಳನ್ನು ನಡೆಸುವುದು ಕಷ್ಟವಾಗುತ್ತದೆ. ಆದ್ದರಿಂದ ಹೊರ ಜಿಲ್ಲೆಗಳಲ್ಲಿ ಪಂದ್ಯ ನಡೆಸುವ ವಿಚಾರವನ್ನು ಕೈ ಬಿಡಲಾಗಿದೆ ಎಂದು ಥಾಮಸ್ ತಿಳಿಸಿದರು.

ಸ್ಪೋರ್ಟ್ಸ್ ಎಕ್ಸಲೆನ್ಸ್ ಹಾಗೂ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಜಂಟಿಯಾಗಿ ಚೊಚ್ಚಲ ಕೆಬಿಎಲ್ ಆಯೋಜಿಸಿದೆ. 32 ಜೂನಿಯರ್ ಹಾಗೂ 16 ಮಾಜಿ ಆಟಗಾರರು ಸೇರಿದಂತೆ ಒಟ್ಟು 80 ಆಟಗಾರರು ಕೆಬಿಎಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಅಕ್ಟೋಬರ್ 24ರಂದು ಆಟಗಾರರ ಹರಾಜು ನಡೆಯಲಿದೆ. ಯುವ ಸ್ಪರ್ಧಿಗಳಿಗೆ ಈ ಲೀಗ್ ಉತ್ತಮ ವೇದಿಕೆ ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.