ADVERTISEMENT

ಚೊಚ್ಚಲ ಗೆಲುವಿನ ಕನಸಲ್ಲಿ ಚಾರ್ಜರ್ಸ್

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 19:30 IST
Last Updated 25 ಏಪ್ರಿಲ್ 2012, 19:30 IST

ಪುಣೆ (ಪಿಟಿಐ): ಐಪಿಎಲ್ ಐದನೇ ಆವೃತ್ತಿ ಟೂರ್ನಿಯು ಅರ್ಧ ಹಾದಿಯನ್ನು ದಾಟುವ ಹಂತದಲ್ಲಿದೆ. ಅಚ್ಚರಿ ಎಂದರೆ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡ ಇದುವರೆಗೆ ಗೆಲುವಿನ ಮುಖವನ್ನೇ ನೋಡಿಲ್ಲ. ಹೋದಲೆಲ್ಲಾ ನಿರಾಸೆ.

ಈಗಾಗಲೇ ಚಾರ್ಜರ್ಸ್ ತಂಡದವರು ಆರು ಪಂದ್ಯ ಆಡಿದ್ದಾರೆ. ಅದರಲ್ಲಿ ಐದು ಸೋಲುಗಳು ಎದುರಾಗಿವೆ. ಆದರೆ ಮಂಗಳವಾರ ಮಳೆ ಕಾರಣ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ರದ್ದಾಯಿತು. ಹಾಗಾಗಿ ಈ ತಂಡಕ್ಕೆ ಒಂದು ಪಾಯಿಂಟ್ ಉಡುಗೊರೆಯಾಗಿ ಸಿಕ್ಕಿತು. ಇದೇ ಈ ತಂಡದ ಮೊದಲ ಪಾಯಿಂಟ್ ಕೂಡ.

ಆದರೆ ಈ ತಂಡವೇನು ಈ ಬಾರಿಯ ಟೂರ್ನಿಯ ರೇಸ್‌ನಿಂದ ಹೊರಬಿದ್ದಿಲ್ಲ. ಏಕೆಂದರೆ ಟೂರ್ನಿಯಲ್ಲಿ ಚಾರ್ಜರ್ಸ್‌ಗೆ ಇನ್ನೂ ಹತ್ತು ಪಂದ್ಯಗಳಿವೆ. ಹಾಗಾಗಿ ಈ ತಂಡದ ನಾಯಕ ಕುಮಾರ ಸಂಗಕ್ಕಾರ ಹಾಗೂ ಸಹ ಆಟಗಾರರು ವಿಶ್ವಾಸದಲ್ಲಿಯೇ ಇದ್ದಾರೆ.

ADVERTISEMENT

ಗೆಲುವಿಗಾಗಿ ಪರಿತಪಿಸುತ್ತಿರುವ ಚಾರ್ಜರ್ಸ್ ತಂಡದವರು ಗುರುವಾರ ರಾತ್ರಿ ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಪುಣೆ ವಾರಿಯರ್ಸ್ ಎದುರು ಪೈಪೋಟಿಗೆ ಸಿದ್ಧರಾಗಿದ್ದಾರೆ. ಕಳೆದ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಎದುರು ಸೋಲು ಕಂಡಿರುವ ವಾರಿಯರ್ಸ್ ಕೂಡ ಗೆಲುವಿನ ಟ್ರ್ಯಾಕ್‌ಗೆ ಮರಳಲು ಕಾತರವಾಗಿದೆ.

ಸೌರವ್ ಗಂಗೂಲಿ ಸಾರಥ್ಯದ ವಾರಿಯರ್ಸ್ ಉತ್ತಮ ಪ್ರದರ್ಶನವನ್ನೇ ತೋರುತ್ತಿದೆ. ಎಂಟು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಎಂಟು ಪಾಯಿಂಟ್ ಹೊಂದಿದೆ. ಅಷ್ಟೇ ಪಂದ್ಯಗಳಲ್ಲಿ ಪರಾಭವಗೊಂಡಿದ್ದಾರೆ. ಬ್ಯಾಟಿಂಗ್‌ನಲ್ಲಿ ಈ ತಂಡ ಬಲಿಷ್ಠವಾಗಿದೆ. ಮನೀಷ್ ಪಾಂಡೆ ಫಾರ್ಮ್ ಕಂಡುಕೊಂಡಿರುವುದು ನಾಯಕ ಗಂಗೂಲಿ ಅವರಲ್ಲಿ ಸಂತೋಷ ತಂದಿದೆ. ವಿಕೆಟ್ ಕೀಪಿಂಗ್ ಕೂಡ ಮಾಡುವ ರಾಬಿನ್ ಉತ್ತಪ್ಪ ಈ ತಂಡದ ಬೆನ್ನೆಲುಬು.

ಆದರೆ ದೊಡ್ಡ ಮೊತ್ತ ಕಲೆಹಾಕಲು ಈ ತಂಡದವರಿಗೆ ಸಾಧ್ಯವಾಗುತ್ತಿಲ್ಲ. ಅದಕ್ಕೆ ಸಾಕ್ಷಿ ಡೇರ್‌ಡೆವಿಲ್ಸ್ ಎದುರಿನ ಪಂದ್ಯ. ಏಕೆಂದರೆ ಈ ಪಂದ್ಯದಲ್ಲಿ ವಾರಿಯರ್ಸ್ ಕಳೆದುಕೊಂಡಿದ್ದು ಕೇವಲ 2 ವಿಕೆಟ್. ಆದರೆ ಗಳಿಸಿದ ರನ್ 146. ಜೊತೆಗೆ ಬೌಲರ್‌ಗಳು ಸ್ಥಿರ ಪ್ರದರ್ಶನ ತೋರುತ್ತಿಲ್ಲ. ಚಾರ್ಜರ್ಸ್ ಪಾಲಿಗೆ ಮಾತ್ರ ಈ ಪಂದ್ಯ ತುಂಬಾ ಮುಖ್ಯವಾಗಿದೆ. ಆದರೆ ಎಲ್ಲಾ ವಿಭಾಗಗಳಲ್ಲಿ ಈ ತಂಡದವರು ವಿಫಲರಾಗುತ್ತಿದ್ದಾರೆ. ಕೊನೆಯ ಎರಡು ಪಂದ್ಯಗಳಲ್ಲಿ ಈ ತಂಡದ ಸೋಲಿಗೆ ಪ್ರಮುಖ ಕಾರಣ ಕಳಪೆ ಫೀಲ್ಡಿಂಗ್. ನಾಯಕ ಸಂಗಕ್ಕಾರ ಕೂಡ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಎಡವುತ್ತಿದ್ದಾರೆ.

ಪಂದ್ಯದ ಆರಂಭ: ರಾತ್ರಿ 8.00ಕ್ಕೆ

ನೇರ ಪ್ರಸಾರ: ಸೆಟ್ ಮ್ಯಾಕ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.