ADVERTISEMENT

ಜಪಾನ್‌ಗೆ ಸೋಲುಣಿಸಿದ ಭಾರತ

ಹತ್ತನೇ ಆವೃತ್ತಿಯ ಏಷ್ಯಾ ಕಪ್ ಹಾಕಿ ಟೂರ್ನಿ

ಪಿಟಿಐ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
ಭಾರತ ತಂಡದ ಆಟಗಾರರು
ಭಾರತ ತಂಡದ ಆಟಗಾರರು   

ಢಾಕಾ: ಪ್ರಶಸ್ತಿ ಗೆದ್ದುಕೊಳ್ಳುವ ನೆಚ್ಚಿನ ತಂಡ ಎನಿಸಿರುವ ಭಾರತ ಹತ್ತನೇ ಆವೃತ್ತಿಯ ಪುರುಷರ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಬುಧವಾರ ಜಪಾನ್ ಎದುರು ಜಯದಾಖಲಿಸುವ ಮೂಲಕ ಶುಭಾರಂಭ ಮಾಡಿದೆ.

ಸುಲ್ತಾನ್ ಅಜ್ಲನ್ ಷಾ ಟೂರ್ನಿಯಲ್ಲಿ ಜಪಾನ್ ತಂಡವನ್ನು 4–3 ಗೋಲುಗಳಲ್ಲಿ ಮಣಿಸಿದ್ದ ಭಾರತ ತಂಡ ಇಲ್ಲಿಯೂ ತನ್ನ ಅಪೂರ್ವ ಆಟ ಮುಂದುವರಿಸಿತು. ಈ ಪಂದ್ಯದಲ್ಲಿ ಭಾರತ 5–1ರಲ್ಲಿ ಜಪಾನ್‌ಗೆ ಆಘಾತ ನೀಡಿದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಭಾರತ ಹೊಸ ಕೋಚ್ ಶೊರ್ಡ್ ಮ್ಯಾರಿಜ್‌ ಮಾರ್ಗದರ್ಶನದಲ್ಲಿ ಮೊದಲ ಗೆಲುವು ದಾಖಲಿಸಿದೆ. ಎಲ್ಲಾ ಕ್ವಾರ್ಟರ್‌ನಲ್ಲಿಯೂ ಗೋಲು ಗಳಿಸುವ ಮೂಳಕ ಭಾರತ ತಂಡದ ಆಟಗಾರರು ಅಂಗಳದಲ್ಲಿ ಮಿಂಚು ಹರಿಸಿದರು.

ADVERTISEMENT

ಎಸ್‌.ವಿ ಸುನಿಲ್ (3ನೇ ನಿ.), ಲಲಿತ್ ಉಪಾಧ್ಯಾಯ (22ನೇ ನಿ.), ರಮಣ್‌ದೀಪ್ ಸಿಂಗ್‌ (33ನೇ ನಿ.), ಹರ್ಮನ್‌ಪ್ರೀತ್ ಸಿಂಗ್‌ (35ಮತ್ತು 48ನೇ ನಿ.) ಗೋಲುಗಳನ್ನು ತಂದುಕೊಟ್ಟರು. ಜಪಾನ್ ತಂಡಕ್ಕೆ ಕೆಂನ್ಜಿ ಕಿಟಾಜೊಟೊ 4ನೇ ನಿಮಿಷದಲ್ಲಿ ಏಕೈಕ ಗೋಲು ತಂದುಕೊಟ್ಟಿದ್ದರು.

ಆಕಾಶ್‌ದೀಪ್ ಸಿಂಗ್ ನೀಡಿದ ಪಾಸ್‌ನಲ್ಲಿ ಸುನಿಲ್ ಭಾರತಕ್ಕೆ ಆರಂಭಿಕ ಗೋಲು ತಂದುಕೊಟ್ಟರು. ಆದರೆ ಈ ಸಂತೋಷ ಹೆಚ್ಚು ಹೊತ್ತು ಉಳಿಯಲಿಲ್ಲ. ಜಪಾನ್ ತಂಡ ಕೇವಲ ಒಂದು ನಿಮಿಷದ ಅಂತರದಲ್ಲಿಯೇ ಫೀಲ್ಡ್ ಗೋಲು ಗಳಿಸಿ ಸಮಬಲ ಮಾಡಿಕೊಂಡಿತು. ಬಳಿಕ ಭಾರತ ತಂಡ ಜಪಾನ್ ಆಟಗಾರರು ನೀಡಿದ ಎಲ್ಲಾ ಅವಕಾಶಗಳಲ್ಲಿಯೂ ಮಿಂಚಿದರು.

ಪಂದ್ಯದ ಅಂತಿಮ ನಿಮಿಷದವರೆಗೂ ಭಾರತ ಅಭೂತಪೂರ್ವವಾಗಿ ಹೋರಾಟ ನಡೆಸಿತು. ಆಕ್ರಮಣಕಾರಿಯಾಗಿ ಆಡಿದ ಆಟಗಾರರು ಜಪಾನ್‌ ಆಟಗಾರರ ಮೇಲೆ ಒತ್ತಡ ಹೇರಿದರು. 22ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಹರ್ಮನ್‌ಪ್ರೀತ್‌ ಅವರ ಫ್ಲಿಕ್‌ನಿಂದ ಚೆಂಡನ್ನು ಹಿಡಿತಕ್ಕೆ ಪಡೆದ ಲಲಿತ್ ಗುರಿ ಸೇರಿಸುವಲ್ಲಿ ಯಶಸ್ವಿಯಾದರು.

ಸುನಿಲ್ ನೀಡಿದ ಪಾಸ್‌ನಲ್ಲಿ ಪಂದ್ಯದ ದ್ವಿತೀಯಾರ್ಧದಲ್ಲಿ ರಮಣದೀಪ್‌ ಸಿಂಗ್‌ ಗೋಲು ಗಳಿಸಿ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. ಬಳಿಕ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಭಾರತ ತಂಡದ ನಾಲ್ಕನೇ ಗೋಲು ದಾಖಲಿಸಿದರು.

41ನೇ ನಿಮಿಷದಲ್ಲಿ ಆಕಾಶ್‌ದೀಪ್ ಸಿಂಗ್ ಗೋಲು ಗಳಿಸುವ ಹಂತದಲ್ಲಿ ಎಡವಿದರು. ಆದರೆ ಐದನೇ ಗೋಲನ್ನು ಮತ್ತೊಮ್ಮೆ ಹರ್ಮನ್‌ಪ್ರೀತ್ ತಂದುಕೊಟ್ಟರು. ಭಾರತಕ್ಕೆ ಸಿಕ್ಕ ಮೂರನೇ ಪೆನಾಲ್ಟಿ ಕಾರ್ನರ್‌ನಲ್ಲಿ ಹರ್ಮನ್‌ಪ್ರೀತ್ ಕೊನೆಯ ಗೋಲು ಗಳಿಸಿದರು.

ಅಂತಿಮ ನಿಮಿಷದಲ್ಲಿ ಭಾರತಕ್ಕೆ ಎರಡು ಪೆನಾಲ್ಟಿ ಕಾರ್ನರ್ ಸಿಕ್ಕಿದ್ದವು. ಆದರೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಜಪಾನ್ ಆಟಗಾರರಿಗೆ ಕೂಡ ಎರಡು ಪೆನಾಲ್ಟಿ ಅವಕಾಶ ಸಿಕ್ಕಿದ್ದರೂ ಭಾರತದ ರಕ್ಷಣಾಗೋಡೆ ದಾಟುವಲ್ಲಿ ವಿಫಲರಾದರು. ‘ಎ’ ಗುಂಪಿನ ಮುಂದಿನ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಶುಕ್ರವಾರ ನಡೆಯುವ ಪಂದ್ಯದಲ್ಲಿ ಭಾರತ ತಂಡ ಪ್ರಬಲ ಪೈಪೋಟಿ ನೀಡುವ ಉದ್ದೇಶ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.