ADVERTISEMENT

ಜಪಾನ್‌ ಓಪನ್‌ ಟೆನಿಸ್‌ ಟೂರ್ನಿ: ರಾವನಿಕ್‌ ಜಯದ ಆರಂಭ

ಏಜೆನ್ಸೀಸ್
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST
ಜಪಾನ್‌ ಓಪನ್‌ ಟೆನಿಸ್‌ ಟೂರ್ನಿ: ರಾವನಿಕ್‌ ಜಯದ ಆರಂಭ
ಜಪಾನ್‌ ಓಪನ್‌ ಟೆನಿಸ್‌ ಟೂರ್ನಿ: ರಾವನಿಕ್‌ ಜಯದ ಆರಂಭ   

ಟೋಕಿಯೊ: ಕೆನಡಾದ ಆಟಗಾರ ಮಿಲೊಸ್‌ ರಾವನಿಕ್‌ ಅವರು ಜಪಾನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಗೆಲುವಿನ ಆರಂಭ ಕಂಡಿದ್ದಾರೆ. ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ರಾವನಿಕ್‌ 6–3, 6–4ರ ನೇರ ಸೆಟ್‌ಗಳಿಂದ ಸರ್ಬಿಯಾದ ವಿಕ್ಟರ್‌ ಟ್ರೊಯಿಕಿ ಅವರನ್ನು ಮಣಿಸಿದರು.

ಮೊದಲ ಸೆಟ್‌ನಲ್ಲಿ ಅವರು ಶರವೇಗದ ಸರ್ವ್‌ಗಳನ್ನು ಸಿಡಿಸುವ ಜೊತೆಗೆ ಚೆಂಡನ್ನು ನೆಟ್‌ನ ಸಮೀಪದಲ್ಲಿ ಡ್ರಾಪ್‌ ಮಾಡುವಲ್ಲೂ ಚಾಕಚಕ್ಯತೆ ತೋರಿದರು. ವಿಕ್ಟರ್‌ ಕೂಡ ಪರಿಣಾ ಮಕಾರಿ ಆಟ ಆಡಿದರು. ಮೊದಲ ಆರು ಗೇಮ್‌ ಗಳವರೆಗೆ ಎದುರಾಳಿಗೆ ಪ್ರಬಲ ಪೈಪೋಟಿ ನೀಡಿದ ಅವರು ಬಳಿಕ ಹಲವು ಸ್ವಯಂಕೃತ ತಪ್ಪುಗಳನ್ನು ಮಾಡಿದರು. ರಾವನಿಕ್‌ ನಂತರದ ಮೂರೂ ಗೇಮ್‌ಗಳಲ್ಲೂ ಎದುರಾಳಿಯ ಸವಾಲು ಮೀರಿದರು.

ವಿಕ್ಟರ್‌ ಎರಡನೇ ಸೆಟ್‌ನಲ್ಲಿ ಪರಿಣಾಮಕಾರಿ ಆಟ ಆಡಿದರು. ಒಂದು ಹಂತದಲ್ಲಿ ಇಬ್ಬರೂ 4–4ರಿಂದ ಸಮಬಲ ಸಾಧಿಸಿದ್ದರು. ಆ ನಂತರ ರಾವನಿಕ್‌ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದರು. 71ನೇ ನಿಮಿಷದಲ್ಲಿ ಗೆಲುವು ಒಲಿಸಿಕೊಂಡರು.

ADVERTISEMENT

ಇತರ ಪಂದ್ಯಗಳಲ್ಲಿ ಲು ಯೆನ್‌ ಹ್ಸುನ್‌ 6–1, 6–3ರಲ್ಲಿ ಟಾರೊ ಡೇನಿಯಲ್‌ ಎದುರೂ, ಮ್ಯಾಥ್ಯೂ ಎಬ್ಡನ್‌ 6–4, 6–3ರಲ್ಲಿ ಟಾರೊ ಡೇನಿಯಲ್‌ ಮೇಲೂ, ಡಿಯಾಗೊ ಸ್ವಾರ್ಟ್ಜ್‌ಮನ್‌ 6–2, 7–5ರಲ್ಲಿ ಡೊನಾಲ್ಡ್‌ ಯಂಗ್‌ ವಿರುದ್ಧವೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.