ADVERTISEMENT

ಜಯಂತ್‌, ಅತಿಶ್‌ಗೆ ಪದಕ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST

ಬೆಂಗಳೂರು/ಬೆಳಗಾವಿ: ಬೆಂಗಳೂರಿನ ಎಚ್‌.ಜಿ.ಜಯಂತ್‌ ಹಾಗೂ ಬೆಳಗಾವಿಯ ಅತಿಶ್‌ ಅನಿಲ್‌ ಜಾಧವ್‌ ಆಸ್ಟ್ರೇಲಿಯಾದ ನ್ಯೂಕ್ಯಾಸಲ್‌ನಲ್ಲಿ ಇತ್ತೀಚೆಗೆ ನಡೆದ ವಿಶೇಷ ಒಲಿಂಪಿಕ್ಸ್‌ ಏಷ್ಯಾ ಪೆಸಿಫಿಕ್‌ (ಎಸ್‌ಒಎಪಿ) ಕ್ರೀಡಾಕೂಟದಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

21 ವರ್ಷ ವಯಸ್ಸಿನ ಜಯಂತ್‌ ಅವರು 4x25 ಮೀಟರ್‌ ಫ್ರೀ ಸ್ಟೈಲ್‌ ರಿಲೇ ಈಜುವಿನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ‘ಡೌನ್‌ ಸಿಂಡ್ರೋಮ್‌’ನಿಂದ ಬಳಲುತ್ತಿರುವ ಅವರು ‘ವಿಶೇಷ ಒಲಿಂಪಿಕ್ಸ್‌ ಭಾರತ’ ಕ್ರೀಡಾಕೂಟದಲ್ಲೂ ಪದಕ ಗೆದ್ದಿದ್ದರು.

ಅತೀಶ್‌ 400 ಮೀ. ಫ್ರೀ ಸ್ಟೈಲ್‌ ಈಜುವಿನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಅವರು 7:49.26 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಈ ಸಾಧನೆ ಮಾಡಿದ್ದಾರೆ. 200 ಮೀ. ಫ್ರೀಸ್ಟೈಲ್‌ನಲ್ಲಿ ಅವರು ಏಳನೇ ಸ್ಥಾನ ಗಳಿಸಿದ್ದರು. 2011ರಲ್ಲಿ ಅಥೆನ್ಸ್‌ನಲ್ಲಿ ನಡೆದ ವಿಶೇಷ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 400 ಮೀ. ಫ್ರೀಸ್ಟೈಲ್‌ನಲ್ಲಿ ಅತಿಶ್‌ ಚಿನ್ನ ಗೆದ್ದಿದ್ದರು.

ಡಿಸೆಂಬರ್‌ 1ರಿಂದ 7ರವರೆಗೆ ನಡೆದ ವಿಶೇಷ ಒಲಿಂಪಿಕ್ಸ್‌ನಲ್ಲಿ 32 ದೇಶಗಳ ಎರಡು ಸಾವಿರ ಅಥ್ಲೀಟ್‌ ಗಳು  ಪಾಲ್ಗೊಂಡಿದ್ದರು. ಏಷ್ಯಾ ಪೆಸಿಫಿಕ್‌ ಪ್ರದೇಶದಲ್ಲಿ ನಡೆದ ಮೊದಲ ವಿಶೇಷ ಒಲಿಂಪಿಕ್ಸ್‌ ಇದು. ಅಥ್ಲೆಟಿಕ್ಸ್‌, ಈಜು, ಬ್ಯಾಡ್ಮಿಂಟನ್‌, ಟೇಬಲ್‌ ಟೆನಿಸ್‌, ಬ್ಯಾಸ್ಕೆಟ್‌ಬಾಲ್‌, ಕ್ರಿಕೆಟ್‌, ಫುಟ್‌ಬಾಲ್‌ ವಿಭಾಗದಲ್ಲಿ ಸ್ಪರ್ಧೆಗಳು ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.