ADVERTISEMENT

ಜರ್ಮನಿಗೆ ಶರಣಾದ ಭಾರತ

ಚಾಂಪಿಯನ್ಸ್ ಟ್ರೋಫಿ: `ಎ' ಗುಂಪಿನಲ್ಲಿ ಅಗ್ರಸ್ಥಾನದ ಹೆಗ್ಗಳಿಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST
ಗೋಲು ಗಳಿಸಿದ ನಿತಿನ್ ತಿಮ್ಮಯ್ಯ ಅವರ ಸಂಭ್ರಮ 	-ಎಎಫ್‌ಪಿ ಚಿತ್ರ
ಗೋಲು ಗಳಿಸಿದ ನಿತಿನ್ ತಿಮ್ಮಯ್ಯ ಅವರ ಸಂಭ್ರಮ -ಎಎಫ್‌ಪಿ ಚಿತ್ರ   

ಮೆಲ್ಬರ್ನ್ (ಪಿಟಿಐ): ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಪ್ರಾಥಮಿಕ ಸುತ್ತಿನಲ್ಲಿ 2-3 ಗೋಲುಗಳಿಂದ ಜರ್ಮನಿ ಎದುರು ಸೋಲನುಭವಿಸಿದರೂ, ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದ್ದೊಂದು ವಿಶೇಷ.`ಎ' ಗುಂಪಿನಲ್ಲಿ ಭಾರತ ಮತ್ತು ಒಲಿಂಪಿಕ್ಸ್ ಚಾಂಪಿಯನ್ ಜರ್ಮನಿ ತಲಾ ಆರು ಪಾಯಿಂಟ್ಸ್ ಗಳಿಸಿದವಾದರೂ, ಗೋಲುಗಳಿಕೆಯ  ಅಂತರದಲ್ಲಿ ಭಾರತವೇ ತನ್ನ ಮೇಲರಿಮೆ ತೋರಿತು.

ಇದೀಗ ತನ್ನ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವುದರಿಂದ ಭಾರತ ತಂಡವು ಬಿ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿರುವ ಬೆಲ್ಜಿಯಂ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಆಡಲಿದೆ. ಬೆಲ್ಜಿಯಂ ಆಟಗಾರರು  ಮಂಗಳವಾರ ನೆದರ್‌ಲೆಂಡ್ಸ್ ಎದುರು ಸೋತಿದ್ದೂ ಸೇರಿದಂತೆ ತಮ್ಮ ಗುಂಪಿನಲ್ಲಿ ಸತತ ಮೂರೂ ಪಂದ್ಯಗಳನ್ನು ಸೋತಿದ್ದಾರೆ.

ಜರ್ಮನಿಯ ಆಟಗಾರರು ಎಂಟರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಏಷ್ಯಾ ಚಾಂಪಿಯನ್ಸ್ ಪಾಕಿಸ್ತಾನದ ವಿರುದ್ಧ ಆಡಲಿದ್ದಾರೆ.
ಆರಂಭದಿಂದಲೂ ತೀವ್ರ ಸೆಣಸಾಟ ಕಂಡು ಬಂದ ಮಂಗಳವಾರದ ಪಂದ್ಯದಲ್ಲಿ ಮೊದಲ ಗೋಲು ಭಾರತವೇ ಗಳಿಸಿತ್ತು. ಆಟ ಶುರುವಾಗಿ 6 ನಿಮಿಷಗಳಾಗಿದ್ದಾಗ ಜರ್ಮನ್ ಪೆನಾಲ್ಟಿ ಆವರಣದತ್ತ ರೂಪಿಂದರ್‌ಪಾಲ್ ಸಿಂಗ್ ಕಳುಹಿಸಿದ ಚೆಂಡನ್ನು ಗುರುವಿಂದರ್ ಸಿಂಗ್ ತಡೆದು ಕರಾರುವಾಕ್ಕಾಗಿ ಗೋಲು ಪೆಟ್ಟಿಗೆಯತ್ತ ಕಳುಹಿಸಿದರು.

ಆಗ ಜರ್ಮನ್ ಗೋಲ್‌ಕೀಪರ್ ನಿಕೊಲಸ್ ಜಾಕೋಬಿ ಚೆಂಡನ್ನು ತಡೆಯುವಲ್ಲಿ ವಿಫಲರಾದರು.ಮೊದಲ ಗೋಲಿನ ಮುನ್ನಡೆಯ ಆತ್ಮವಿಶ್ವಾಸದಿಂದ ಆಡತೊಡಗಿದ ಭಾರತದ ಹುಮ್ಮಸ್ಸಿಗೆ 14ನೇ ನಿಮಿಷದಲ್ಲಿ ಒಲಿವರ್ ಕೋರ್ನ್ ತಡೆ ಹಾಕಿದರು. ಆಗ ಭಾರತದ ರಕ್ಷಣಾವ್ಯೆಹದಲ್ಲಿನ ದೌರ್ಬಲ್ಯದ ಲಾಭ ಪಡೆದ ಒಲಿವರ್ ಗೋಲು ಪೆಟ್ಟಿಗೆಯತ್ತ ಬಿರುಸಾಗಿ ಕಳುಹಿಸಿದ ಚೆಂಡು ಗೋಲುಕಂಬಕ್ಕೆ ಬಡಿದು ವಾಪಸಾಗಿತ್ತು. ಅದಕ್ಕೆ ಒಲಿವರ್  `ಸ್ಟಿಕ್' ತಾಗಿಸಿದರು. ಗೋಲುಗಳ ಅಂತರ ಸಮಗೊಂಡಿತು.

ಭಾರತ 46ನೇ ನಿಮಿಷದಲ್ಲಿ ಮತ್ತೆ ಮುನ್ನಡೆ ಸಾಧಿಸಿತು. ಆಗ ಭಾರತಕ್ಕೆ ಸಿಕ್ಕಿದ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಬೀರೇಂದ್ರ ಲಾಕ್ರ ಅವರಿಂದ ಬಂದ ಚೆಂಡನ್ನು  ನಿತಿನ್ ತಿಮ್ಮಯ್ಯ ಅವರು ಗೋಲುಪೆಟ್ಟಿಗೆಯತ್ತ ಕಳುಹಿಸಿದರು. ಅದಕ್ಕೆ ಮೊದಲು ವಿ.ಆರ್.ರಘುನಾಥ್ ಕಳುಹಿಸಿದ್ದ ಚೆಂಡನ್ನು ಆಸ್ಟ್ರೇಲಿಯಾದ ಗೋಲ್‌ಕೀಪರ್ ತಡೆದಿದ್ದರು. ಆದರೆ ಚೆಂಡು ಅವರ ಮುಂದೆಯೇ ಪುಟಿದಿತ್ತು. ಆ ಚೆಂಡನ್ನೇ ಲಾಕ್ರ ಪಡೆದು, ನಿತಿನ್ ಅವರತ್ತ ಕಳುಹಿಸಿದ್ದು.
ಉತ್ತರಾರ್ಧದಲ್ಲಿ ಭಾರತ ಹಲವು ನಿಮಿಷಗಳ ಕಾಲ ಮೇಲುಗೈ ಸಾಧಿಸಿತ್ತು.  ಭಾರತದ ರಕ್ಷಣಾ ಕೋಟೆಯನ್ನು ಬೀಳಿಸುವ ನಿಟ್ಟಿನಲ್ಲಿ ಜರ್ಮನಿಯ ಹಲವು ಯತ್ನಗಳು ವೈಫಲ್ಯ ಕಂಡವು.  ಆದರೆ ಜರ್ಮನಿಯ ತೊಬಿಯಾಸ್ ಮಟಾನಿಯಾ 56ನೇ ನಿಮಿಷದಲ್ಲಿ ಕೆಲವೇ ಸೆಕೆಂಡುಗಳ ಅಂತರದಲ್ಲಿ ಗಳಿಸಿದ ಎರಡು ಗೋಲುಗಳು ಭಾರತದ ಉತ್ಸಾಹಕ್ಕೆ ತಣ್ಣೀರೆರಚಿತು.

ಆ ನಂತರ ಜರ್ಮನ್ ಆಟಗಾರರು ಇನ್ನಿಲ್ಲದ ಆತ್ಮವಿಶ್ವಾಸದಿಂದ ಆಡತೊಡಗಿದರು. ಆಗ ಭಾರತ ಕೂಡಾ ಸತತ ದಾಳಿಗಿಳಿಯಿತು. ಆದರೆ ಜರ್ಮನ್ ಮುನ್ನಡೆಯಲ್ಲಿದುದರಿಂದ ರಕ್ಷಣಾ ಆಟಕ್ಕೇ ಹೆಚ್ಚು ಒತ್ತು ನೀಡಿತು. ಭಾರತ ಕೊನೆಯ ಕ್ಷಣಗಳಲ್ಲಿಪರದಾಡುತ್ತಿದ್ದುದುಎದ್ದುಕಾಣುತಿತ್ತು.ಗಾಯಾಳುಗಳಾಗಿರುವ ಸರ್ದಾರ್ ಸಿಂಗ್ ಮತ್ತು ಮನ್‌ಪ್ರೀತ್ ಸಿಂಗ್ ಅವರನ್ನು ಇಂದು ಆಡಲಿಳಿಸಲಾಗಿತ್ತು. ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ಗಲ್ಲಕ್ಕೆ ಎದುರಾಳಿ ಆಟಗಾರನ ಸ್ಟಿಕ್ ತಾಗಿದ್ದರಿಂದ ಮನ್‌ಪೀತ್ 10 ಹೊಲಿಗೆಗಳನ್ನು ಹಾಕಿಸಿಕೊಂಡಿದ್ದರು. ಕಳೆದ ಪಂದ್ಯದಲ್ಲಿ ಆಡುತ್ತಿದ್ದಾಗ ಕೆಳಗೆ ಉರುಳಿ ಬಿದ್ದು ಭುಜಕ್ಕೆ ಪೆಟ್ಟಾಗಿದ್ದರಿಂದ ಸರ್ದಾರ್‌ಸಿಂಗ್ ನೋವನು ಭವಿಸುತ್ತಿದ್ದಾರೆ. ಭಾರತದ ಇನ್ನೊಬ್ಬ ಪ್ರಮುಖ ಆಟಗಾರ ಎಸ್.ವಿ.ಸುನಿಲ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು ಈ ಪಂದ್ಯದ ವೇಳೆ ಆಡಲು ಇಳಿಯಲಿಲ್ಲ. ಆದರೆ ಸುನಿಲ್ ಕ್ವಾರ್ಟರ್ ಫೈನಲ್‌ನಲ್ಲಿ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.