ADVERTISEMENT

ಜಹೀರ್ ಮೇಲೆ ಭರವಸೆ: ಗಂಭೀರ್

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 19:39 IST
Last Updated 5 ಡಿಸೆಂಬರ್ 2012, 19:39 IST

ಕೋಲ್ಕತ್ತ: `ವೇಗಿ ಜೇಮ್ಸ ಆ್ಯಂಡರ್ಸನ್ ರಿವರ್ಸ್ ಸ್ವಿಂಗ್ ಮೂಲಕ ನಮ್ಮ ಮೇಲೆ ಒತ್ತಡ ಹೇರಿದ್ದನ್ನು ನೀವು ಗಮನಿಸಿದ್ದೀರಿ. ಆದರೆ ನಮ್ಮ ಬಳಿಯೂ ದೊಡ್ಡ ಅಸ್ತ್ರವಿದೆ. ವೇಗಿ ಜಹೀರ್ ಖಾನ್ ರಿವರ್ಸ್ ಸ್ವಿಂಗ್‌ನ ರಾಜ. ಇಂಗ್ಲೆಂಡ್‌ಗೆ ಅವರು ಕೂಡ ಸಮಸ್ಯೆ ನೀಡಬಲ್ಲರು' ಎಂದು ಗೌತಮ್ ಗಂಭೀರ್ ನುಡಿದರು.

ತೆಂಡೂಲ್ಕರ್ ಶತಕ ತಪ್ಪಿಸಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಪ್ರತಿ ರನ್‌ಗೆ ತುಂಬಾ ಮಹತ್ವವಿದೆ. ಆದರೆ ಕ್ರಿಕೆಟ್‌ನಲ್ಲಿ ಒಬ್ಬರ ಆಟ ನಡೆಯುವುದಿಲ್ಲ. ತಂಡದ ಪ್ರತಿ ಆಟಗಾರರು ಪ್ರಯತ್ನ ಹಾಕಬೇಕು. ಒಬ್ಬರು ಶತಕ ಗಳಿಸಿ ತಂಡ 250-260 ರನ್‌ಗಳಿಗೆ ಆಲೌಟ್ ಆದರೆ ಏನು ಪ್ರಯೋಜನ' ಎಂದರು.

ವೀರೇಂದ್ರ ಸೆಹ್ವಾಗ್ ರನ್‌ಔಟ್ ಆಗಿದ್ದು ನಿರಾಸೆಗೆ ಕಾರಣವಾಯಿತು ಎಂಬುದನ್ನು ಅವರು ಒಪ್ಪಿಕೊಂಡರು. `ಮೂರನೇ ರನ್ ಓಡುವುದು ಸಾಧ್ಯವಿಲ್ಲ ಎಂದುಕೊಂಡೆ. ಏಕೆಂದರೆ ಆಗಲೇ ಚೆಂಡು ಫೀಲ್ಡರ್ ಕೈಯಲ್ಲಿತ್ತು. ಈ ಕಾರಣ ನಾನು ಓಡಲಿಲ್ಲ. ಆದರೆ ರಿಪ್ಲೇ ನೋಡಿದ ಮೇಲೆ ಸಾಧ್ಯವಿತ್ತು ಎಂಬ ಅಂಶ ಮನದಟ್ಟಾಯಿತು. ಆ ಸಮಯದಲ್ಲಿ ವೀರೂ ಚೆನ್ನಾಗಿ ಆಡುತ್ತಿದ್ದರು' ಎಂದು ಗಂಭೀರ್ ಹೇಳಿದರು.

`ಅಷ್ಟೇ ಅಲ್ಲ; ಕೆಲ ಬ್ಯಾಟ್ಸ್‌ಮನ್‌ಗಳು ಔಟ್ ಆಗಿದ್ದರ ಬಗ್ಗೆ ನನಗೆ ಅಸಮಾಧಾನವಿದೆ. ಟೆಸ್ಟ್ ಕ್ರಿಕೆಟ್ ಎಂದರೆ ಕಲಿಯಲು ಇರುವ ತಾಣವಲ್ಲ. ಸ್ಥಾನ ಪಡೆದ ಮೇಲೆ ಉತ್ತಮ ಪ್ರದರ್ಶನ ನೀಡಬೇಕು. ಅದು ಅನುಭವಿ ಬ್ಯಾಟ್ಸ್‌ಮನ್‌ಗಳಾಗಿರಬಹುದು, ಅನನುಭವಿಗಳಾಗಿರಬಹುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.