ಕ್ಯಾಲ್ಗರಿ (ಐಎಎನ್‌ಎಸ್): ಭಾರತದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿಯು ಸೋಮವಾರ ಕೆನಡ ಓಪನ್ ಗ್ರ್ಯಾಂಡ್ ಪ್ರೀ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡಿತು.
ಫೈನಲ್ ಪಂದ್ಯದಲ್ಲಿ ಅಶ್ವಿನಿ–ಜ್ವಾಲಾ 21–19, 21–16ರಲ್ಲಿ ನೆದರ್‌ಲೆಂಡ್ಸ್‌ನ ಜೋಡಿ ಎಫ್ಜೆ ಮಸ್ಕೆನ್ಸ್ ಮತ್ತು ಸೆಲೆನಾ ಅವರನ್ನು ಪರಾಭವಗೊಳಿಸಿತು. ಒಟ್ಟು ₨ 35 ಲಕ್ಷ ಬಹುಮಾನ ಮೊತ್ತದ ಟೂರ್ನಿಯಲ್ಲಿ ತಾವು ಆಡಿದ ಪಂದ್ಯಗಳಲ್ಲೆಲ್ಲಾ ಜ್ವಾಲಾ–ಅಶ್ವಿನಿ ಪಾರಮ್ಯ ಮೆರೆದಿದ್ದಾರೆ.
ಹೈದರಾ ಬಾದಿನ ಎಡಗೈ ಆಟಗಾರ್ತಿ ಜ್ವಾಲಾ ಮತ್ತು ಕರ್ನಾಟಕದ ಬಲಗೈ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರ ಹೊಂದಾ ಣಿಕೆಯ ಆಟದ ಮುಂದೆ ಎದುರಾಳಿ ಜೋಡಿಯು ಹಲವು ತಪ್ಪುಗಳನ್ನು ಎಸಗಿತು. 35 ನಿಮಿಷ ನಡೆದ ಪಂದ್ಯದ ಮೊದಲ ಗೇಮ್‌ನಲ್ಲಿ ಭಾರತದ ಜೋಡಿಯು ಪ್ರಬಲ ಪೈಪೋಟಿ ಎದುರಿಸಿತು. ಜ್ವಾಲಾ ಜೋಡಿಯು 6–2ರಿಂದ ಮುನ್ನಡೆ ಸಾಧಿಸಿತ್ತು.
ಆಗ ಛಲದ ಆಟವಾಡಿದ ಎದುರಾಳಿ ವನಿತೆಯರು 7–7ರ ಸಮಬಲ ಸಾಧಿಸಿದರು. 17 ಅಂಕ ಗಳಿಸಿದ ಸಂದರ್ಭದಲ್ಲಿ ಜ್ವಾಲಾ ಚುರುಕಿನ ಆಟಕ್ಕೆ ಮುಂದಾದರು. ಇದರಿಂದಾಗಿ ಭಾರತಕ್ಕೆ 21–19ರಲ್ಲಿ ಗೇಮ್ ಒಲಿಯಿತು. ಎರಡನೇ ಗೇಮ್‌ನಲ್ಲಿ ಆರಂಭದಲ್ಲಿ ನೆದರ್‌ಲೆಂಡ್ಸ್‌ನ ಆಟಗಾರ್ತಿಯರು ಸ್ವಲ್ಪ ಸ್ಪರ್ಧೆ ಒಡ್ಡಿದರೂ ನಂತರ ಜ್ವಾಲಾ–ಅಶ್ವಿನಿ ಪ್ರಾಬಲ್ಯ ಮೆರೆದರು.
ಅಭಿನಂದನೆ: ಇವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.