ADVERTISEMENT

ಟೀಕೆಗೆ ರಾಮ್ದಿನ್ ಶತಕದ ಉತ್ತರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2012, 19:30 IST
Last Updated 10 ಜೂನ್ 2012, 19:30 IST

ಬರ್ಮಿಂಗ್‌ಹ್ಯಾಮ್ (ಪಿಟಿಐ): ದೆನೇಶ್ ರಾಮ್ದಿನ್ (ಅಜೇಯ 107) ಹಾಗೂ ಟಿನೊ ಬೆಸ್ಟ್ (95) ಅವರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ವೆಸ್ಟ್‌ಇಂಡೀಸ್ ತಂಡದವರು ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದಾರೆ.

ವಿಂಡೀಸ್ ತನ್ನ ಮೊದಲ ಇನಿಂಗ್ಸ್ ನಲ್ಲಿ 426 ರನ್ ಕಲೆಹಾಕಿತು. ಮೊದಲ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ನಾಲ್ಕನೇ ದಿನದಾಟದಲ್ಲಿ ಚಹಾ ವಿರಾಮದ ವೇಳೆಗೆ 31 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತ್ತು. ಮೊದಲ ಎರಡು ದಿನದ ಆಟಕ್ಕೆ ಮಳೆ ಅಡ್ಡಿಯಾಗಿತ್ತು. ಈ ಪಂದ್ಯದಲ್ಲಿ ರಾಮ್ದಿನ್ ಶತಕ ಗಳಿಸುತ್ತಿದ್ದಂತೆ ತಮ್ಮ ಜೇಬಿನಿಂದ ಚೀಟಿಯೊಂದನ್ನು ತೆಗೆದು ಪ್ರೇಕ್ಷಕರತ್ತ ತೋರಿಸಿದರು. `ಹೇಯ್... ವಿವ್ ಈಗ ಮಾತಾಡು~ ಎಂದು ಅದರಲ್ಲಿ ಬರೆದಿತ್ತು.
 
ಕೆಲ ದಿನಗಳ ಹಿಂದೆ ರಾಮ್ದಿನ್ ಆಟದ ಬಗ್ಗೆ ಮಾಜಿ ಆಟಗಾರ ಸರ್ ವಿವಿಯನ್ ರಿಚರ್ಡ್ಸ್ ಟೀಕೆ ಮಾಡಿದ್ದರು. ಈ ಪಂದ್ಯದಲ್ಲಿ ವಿಶ್ವದಾಖಲೆಯೊಂದು ಮೂಡಿಬಂತು. 11ನೇ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ಗೆ ಬಂದ ವಿಂಡೀಸ್‌ನ ಟಿನೊ ಬೆಸ್ಟ್ 95 ರನ್ ಗಳಿಸಿದರು. ಇದು ಈ ಕ್ರಮಾಂಕದಲ್ಲಿ ಬಂದ ವೈಯಕ್ತಿಕ ಅತಿ ಹೆಚ್ಚು ರನ್. ಈ ಹಿಂದೆ 2004ರಲ್ಲಿ ಭಾರತದ ಜಹೀರ್ ಖಾನ್ ಬಾಂಗ್ಲಾದೇಶ ವಿರುದ್ಧ 75 ರನ್ ಗಳಿಸಿದ್ದರು.

ಸಂಕ್ಷಿಪ್ತ ಸ್ಕೋರ್: ವೆಸ್ಟ್‌ಇಂಡೀಸ್ ಮೊದಲ ಇನಿಂಗ್ಸ್: 129.3 ಓವರ್‌ಗಳಲ್ಲಿ 426 (ಆ್ಯಡ್ರಿಯನ್ ಭರತ್ 41, ಮಾರ್ಲೊನ್ ಸ್ಯಾಮೂಯೆಲ್ಸ್ 76, ದೆನೇಶ್ ರಾಮ್ದಿನ್ ಅಜೇಯ 107, ಟಿನೊ ಬೆಸ್ಟ್ 95; ಗ್ರಹಾಮ್ ಆನಿಯನ್ಸ್ 88ಕ್ಕೆ4); ಇಂಗ್ಲೆಂಡ್ ಮೊದಲ ಇನಿಂಗ್ಸ್: 31 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 113 (ಕೇವಿನ್ ಪೀಟರ್ಸನ್ ಬ್ಯಾಟಿಂಗ್ 46).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.