ADVERTISEMENT

ಟೆನಿಸ್‌ ಅಂಗಳದಲ್ಲಿ ಬೆರಳೆಣಿಕೆಯಷ್ಟು ತಾರೆಯರು

ಜೈಕಾ ವೈರಸ್ ಭೀತಿ, ಶ್ರೇಯಾಂಕ, ನಗದು ಬಹುಮಾನವಿಲ್ಲದ ಕಾರಣ ಹಿಂದೆ ಸರಿದವರು ಹಲವರು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2016, 19:30 IST
Last Updated 2 ಆಗಸ್ಟ್ 2016, 19:30 IST
ಟೆನಿಸ್‌ ಅಂಗಳದಲ್ಲಿ ಬೆರಳೆಣಿಕೆಯಷ್ಟು ತಾರೆಯರು
ಟೆನಿಸ್‌ ಅಂಗಳದಲ್ಲಿ ಬೆರಳೆಣಿಕೆಯಷ್ಟು ತಾರೆಯರು   

ರಿಯೊ ಡಿ ಜನೈರೊ (ಎಎಫ್‌ಪಿ): ಈ ಬಾರಿಯ  ಒಲಿಂಪಿಕ್ಸ್‌ನ ಟೆನಿಸ್‌ ಅಂಗಳ ದಲ್ಲಿ ಬೆರಳೆಣಿಕೆಯಷ್ಟು ತಾರಾ ಮೌಲ್ಯದ ಆಟಗಾರರು ಕಣಕ್ಕಿಳಿಯಲಿದ್ದಾರೆ!

ಅಗ್ರಶ್ರೇಯಾಂಕದ ಟೆನಿಸ್ ಆಟಗಾರರಾದ ನೊವಾಕ್ ಜೊಕೊ ವಿಚ್, ಆ್ಯಂಡಿ ಮರ್ರೆ, ರಫೆಲ್ ನಡಾಲ್ ಮತ್ತು ಸೆರೆನಾ ವಿಲಿಯಮ್ಸ್  ಅವರು ಈ ಬಾರಿ ಒಲಿಂಪಿಕ್ಸ್‌ನ ಟೆನಿಸ್ ವಿಭಾಗದಲ್ಲಿ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಟೆನಿಸ್ ವಿಭಾಗವು ಕಳೆಗುಂದದಂತೆ ನೋಡಿಕೊಳ್ಳುವ ಹೊಣೆಯೂ ಇವರ ಮೇಲಿದೆ.

ವಿಶ್ವದ ಕೆಲವು ದೇಶಗಳ ಖ್ಯಾತ ನಾಮ ಆಟಗಾರರು ಒಲಿಂಪಿಕ್ಸ್‌ನಿಂದ ಹಿಂದೆ ಸರಿದಿದ್ದಾರೆ.  ಪುರುಷರ ವಿಭಾಗದಲ್ಲಿ ಒಟ್ಟು 20 ಆಟಗಾರರು ಹಿಂದೆ ಸರಿದಿದ್ದಾರೆ. 17 ಗ್ರ್ಯಾಂಡ್‌ಸ್ಲಾಮ್  ಪ್ರಶಸ್ತಿ ವಿಜೇತ   ಆಟ ಗಾರ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡ ರರ್, ಕೆನಡಾದ, ಮಿಲೊಸ್ ರವೊನಿಕ್, ಥಾಮಸ್ ಬರ್ಡಿಕ್, ಡಾಮ್ನಿಕ್ ಥೀಮ್, ರಿಚರ್ಡ್ ಗ್ಯಾಸ್ಕೆಟ್, ಜಾನ್ ಐಸ್ನರ್, ಫೆಲಿಸಿಯಾನೊ ಲೊಪೆಜ್  , ನಿಕ್ ಕಿರ್ಗಿಯೊಸ್, ಮೊಣಕಾಲಿನ ಗಾಯದಿಂದ ಬಳಲುತ್ತಿರುವ ರಫೆಲ್ ನಡಾಲ್, ಡಬಲ್ಸ್‌ನಲ್ಲಿ   ಅಮೆರಿಕದ ಡಬಲ್ಸ್‌ ಜೋಡಿ ಬ್ರಯನ್ ಸಹೋದ ರರು ಜೈಕಾ ವೈರಸ್ ಭೀತಿಯಿಂದ ಹಿಂದೆ ಸರಿದಿದ್ದಾರೆ.

‘ನಗದು ಪ್ರಶಸ್ತಿ ಮತ್ತು ಶ್ರೇಯಾಂಕ ಗಳು ಸಿಗದ ಈ ಟೂರ್ನಿ  (ಒಲಿಂಪಿಕ್ಸ್) ಕೇವಲ ಟೆನಿಸ್ ಪ್ರವಾಸವಷ್ಟೆ’ ಎಂದು ಟೀಕಿಸಿರುವ ಲ್ಯಾಟವಿಯಾನಾದ ಆಟ ಗಾರ ಅರ್ನೆಸ್ಟ್ ಗುಲ್ಬಿಸ್ ಕೂಡ ಹಿಂದೆ ಸರಿದಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಯೂ ಕೆಲವು ಅಗ್ರಗಣ್ಯ ಆಟಗಾರ್ತಿಯರು ಕಣಕ್ಕೆ ಇಳಿಯುತ್ತಿಲ್ಲ. ಗರ್ಭಿಣಿಯಾಗಿ ರುವ ವಿಕ್ಟೋರಿಯಾ ಅಜರೆಂಕಾ (ಬೆಲಾ ರೂಸ್), ಗಾಯಗೊಂಡಿರುವ ಬೆಲಿಂಡಾ ಬೆನ್ಸಿಕ್, ಕರೋಲಿನಾ ಪ್ಲಿಸ್ಕೊವಾ, ಜೈಕಾ ವೈರಸ್‌ ಭೀತಿಯಿಂದಾಗಿ ರುಮೇ ನಿಯಾದ ಸಿಮೊನಾ ಹೆಲೆಪ್  ರಿಯೊದಲ್ಲಿ ಆಡುತ್ತಿಲ್ಲ.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಪದಕ ಜಯಿಸಿದ್ದ ರಷ್ಯಾದ ಮರಿಯಾ ಶೆರಪೊವಾ ಆಟವನ್ನು ನೋಡುವ ಅವಕಾಶವೂ ಈ ಬಾರಿ ಇಲ್ಲ. ಕೆಲವು ತಿಂಗಳ ಹಿಂದೆ ಅವರು ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು.  ಇದರಿಂದಾಗಿ ಅವರ ಮೇಲೆ ನಿಷೇಧ ಶಿಕ್ಷೆ ವಿಧಿಸಲಾಗಿದೆ.

ನನಗೆ ಯಾವ ಭೀತಿಯೂ ಇಲ್ಲ: ನೊವಾಕ್ ಜೊಕೊವಿಚ್
‘ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ನನಗೆ ಯಾವುದೇ ಅಡ್ಡಿ ಆಂತಕ ಇಲ್ಲ’ ಎಂದು ವಿಶ್ವದ ಅಗ್ರಶ್ರೇಯಾಂಕದ ಆಟಗಾರ ನೊವಾಕ್ ಜೊಕೊವಿಚ್  ಹೇಳಿದ್ದಾರೆ.  ಅಲ್ಲದೇ ಅವರು ಈ ಬಾರಿ ಚಿನ್ನದ ಪದಕ ಜಯಿಸುವ ವಿಶ್ವಾಸದಲ್ಲಿದ್ದಾರೆ. ಜೂನ್‌ನಲ್ಲಿ ನಡೆದಿದ್ದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಅವರು ಚಾಂಪಿಯನ್ ಆಗಿದ್ದರು. 

‘ಜೈಕಾ ವೈರಸ್ ಸಮಸ್ಯೆ ಇದೆ. ಅದರ ಸೋಂಕು ತಗಲುವ ಅಪಾಯವೂ ಇದೆ. ಆದರೆ, ಅದನ್ನು ತಡೆಯಲು ಕ್ರಮಗಳೂ ಇವೆ. ಈ ಸಮಸ್ಯೆಯನ್ನು ಕೆಲವರು ದುರುದ್ದೇಶದಿಂದ ಅತಿರಂಜಿತವಾಗಿ ಬಿಂಬಿಸುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ.  ಆ ಬಗ್ಗೆ ಹೆಚ್ಚಿನ ಚರ್ಚೆ ಬೇಡ’ ಎಂದು ಸರ್ಬಿಯಾದ 29 ವರ್ಷದ ನೊವಾಕ್ ಹೇಳಿದ್ದಾರೆ. 

‘ಶ್ರೇಯಾಂಕಗಳು ಮತ್ತು ನಗದು ಬಹುಮಾನ ಸಿಗದೇ ಇರುವುದನ್ನು ನೇರವಾಗಿ ಹೇಳದವರು ಜೈಕಾ ವೈರಸ್ ನೆಪವೊಡ್ಡುತ್ತಿದ್ದಾರೆ’ ಎಂದೂ ಇತ್ತೀಚೆಗೆ ಟೊರಾಂಟೊ ಮಾಸ್ಟರ್ಸ್‌ ಪ್ರಶಸ್ತಿಯನ್ನು ಗೆದ್ದ ಜೊಕೊವಿಚ್ ಹೇಳಿದ್ದಾರೆ. ಒಲಿಂಪಿಕ್ಸ್‌ ಮುಗಿದ ಒಂದು ವಾರದ ನಂತರ ಅಮೆರಿಕ ಓಪನ್ ಟೆನಿಸ್ ಟೂರ್ನಿ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಅದಕ್ಕಾಗಿ ತಯಾರಿ ನಡೆಸುವ ಆಟಗಾರರು ರಿಯೊಗೆ ಬರುತ್ತಿಲ್ಲ ಎನ್ನಲಾಗಿದೆ.

ಒಲಿಂಪಿಕ್ಸ್ ಮತ್ತು ಟೆನಿಸ್‌ನ ಸಂಬಂಧ ಮೊದಲಿನಿಂದಲೂ ಹೊಂದಾಣಿಕೆಯ ಕೊರತೆ ಅನುಭವಿಸುತ್ತಿದೆ. ಒಲಿಂಪಿಕ್ಸ್‌ ಕೂಟ ವನ್ನು ವೃತ್ತಿಪರರು ಯಾವಾಗಲೂ ಅಮೆಚೂರ್ ಕ್ರೀಡೆಯಂದೇ ಪರಿ ಗಣಿಸಿದ್ದಾರೆ. 1924 ರಿಂದ 1984ರವರೆಗೆ ಟೆನಿಸ್‌ ಕ್ರೀಡೆಯನ್ನು ಒಲಿಂಪಿಕ್ಸ್‌ನಿಂದ ಕೈಬಿಡಲಾಗಿತ್ತು. 1988ರ ಸೋಲ್ ಒಲಿಂಪಿಕ್ಸ್‌ನಲ್ಲಿ ಮರು ಸೇರ್ಪಡೆಯಾಗಿತ್ತು.

2012ರ ಚಿನ್ನದ ಪದಕ ವಿಜೇತ ಆ್ಯಂಡಿ ಮರ್ರೆ ಕೂಡ ರಿಯೊದಲ್ಲಿ ತಮ್ಮ ಸಾಮರ್ಥ್ಯ ಪಣಕ್ಕೊಡ್ಡಲು ಸಿದ್ಧರಾಗಿದ್ದಾರೆ. ಇತ್ತೀಚೆಗಷ್ಟೆ ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವ ಬ್ರಿಟನ್‌ನ ಮರ್ರೆ ಗೆ ಸತತಎರಡನೇ ಬಾರಿ ಚಿನ್ನದ ಪದಕಕ್ಕೆ ಕೊರಳೊಡ್ಡುವ ವಿಶ್ವಾಸದಲ್ಲಿದ್ದಾರೆ. 22 ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗ ಳನ್ನು ಗೆದ್ದು ಸ್ಟೆಫಿ ಗ್ರಾಫ್ ದಾಖಲೆ ಸರಿಗಟ್ಟಿರುವ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರೂ ಮಹಿಳೆಯರ ವಿಭಾಗದಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದಾರೆ.

ಲಂಡನ್ ಒಲಿಂಪಿಕ್ಸ್‌ನಲ್ಲಿ ಅವರು ಸಿಂಗಲ್ಸ್‌ ಮತ್ತು ಡಬಲ್ಸ್‌ನಲ್ಲಿ ತಮ್ಮ ಸಹೋದರಿ ವೀನಸ್ ಜೊತೆಗೂಡಿ ಚಿನ್ನ ಗೆದ್ದಿದ್ದರು.
ರಿಯೊದ ಬರ್ರಾ ಒಲಿಂಪಿಕ್ ಪಾರ್ಕ್‌ನಲ್ಲಿ ಆಗಸ್ಟ್ 6 ರಿಂದ 14ರವರೆಗೆ    ಟೆನಿಸ್ ಟೂರ್ನಿ ನಡೆಯಲಿದೆ. ಬ್ರೆಜಿಲ್‌ನ ಹಿರಿಯ ಟೆನಿಸ್ ಆಟಗಾರ್ತಿ ಮರಿಯಾ ಬುನೊ ಅವರ ಹೆಸರನ್ನು ಈ ಕ್ರೀಡಾಂಗಣಕ್ಕೆ ಇಡಲಾಗಿದೆ. ಹತ್ತು ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವ ಗ್ಯಾಲರಿಯನ್ನು ಇಲ್ಲಿ ನಿರ್ಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT