ADVERTISEMENT

ಟೆನಿಸ್: ಇತಿಹಾಸ ಬರೆದ ನಡಾಲ್

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 19:30 IST
Last Updated 11 ಜೂನ್ 2012, 19:30 IST
ಟೆನಿಸ್: ಇತಿಹಾಸ ಬರೆದ ನಡಾಲ್
ಟೆನಿಸ್: ಇತಿಹಾಸ ಬರೆದ ನಡಾಲ್   

ಪ್ಯಾರಿಸ್ (ಎಎಫ್‌ಪಿ/ರಾಯಿಟರ್ಸ್): ಮತ್ತೆ ರೋಲಂಡ್ ಗ್ಯಾರೋಸ್‌ನ ದೊರೆಯಾಗಿ ಹೊರಹೊಮ್ಮಿದ್ದು ರಫೆಲ್ ನಡಾಲ್. ಆವೆ ಮಣ್ಣಿನ ಅಂಗಳದಲ್ಲಿ ತಮಗೆ ಸರಿಸಾಟಿಯಾಗಿ ನಿಲ್ಲಬಲ್ಲ ಮತ್ತೊಬ್ಬ ಆಟಗಾರ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಸ್ಪೇನ್‌ನ ಈ ಅಸಾಮಾನ್ಯ ಆಟಗಾರ ಸೋಮವಾರ ಹಲವು ದಾಖಲೆಗಳನ್ನು ಪುಡಿಗಟ್ಟಿದರು.

ಫ್ರೆಂಚ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರನ್ನು ಸೋಲಿಸುತ್ತಿದ್ದಂತೆ ನಡಾಲ್ ಕಂಗಳಲ್ಲಿ ಆನಂದಭಾಷ್ಪ ಹರಿಯಿತು. ರಾಕೆಟ್ ಎಸೆದು ಮಂಡಿಯೂರಿ ಫಿಲಿಪ್ ಚಾಟ್ರಿಯರ್ ಕೋರ್ಟ್‌ಗೆ ಮುತ್ತು ನೀಡಿದ ಅವರು ಬಳಿಕ ಗ್ಯಾಲರಿಯ ಕಂಬಿಗಳನ್ನು ಜಿಗಿದು ಕೋಚ್ ಕೂಡ ಆಗಿರುವ ಚಿಕ್ಕಪ್ಪ ಟೋನಿ ನಡಾಲ್ ಅವರನ್ನು ತಬ್ಬಿಕೊಂಡರು. ಮತ್ತೊಮ್ಮೆ ಖುಷಿಯ ಕಣ್ಣೀರಿಟ್ಟರು.

ಮಳೆಯ ಕಾರಣ ಸೋಮವಾರಕ್ಕೆ ಮುಂದೂಡಲಾಗಿದ್ದ ಈ ಫೈನಲ್ ಪಂದ್ಯವನ್ನು ನಡಾಲ್ 6-4, 6-3, 2-6, 7-5ರಲ್ಲಿ ಗೆದ್ದು ಟ್ರೋಫಿ ಎತ್ತಿ ಹಿಡಿದರು. ಇದು ಅವರಿಗೆ ಲಭಿಸಿದ ಏಳನೇ ಫ್ರೆಂಚ್ ಓಪನ್ ಸಿಂಗಲ್ಸ್ ಕಿರೀಟ. ಈ ಮೂಲಕ ಸ್ವೀಡನ್‌ನ ಬೋರ್ನ್ ಬೋರ್ಗ್  (6 ಫ್ರೆಂಚ್ ಓಪನ್ ಸಿಂಗಲ್ಸ್) ಅವರ ದಾಖಲೆಯನ್ನು ಮೀರಿ ನಿಂತರು.

`ಕಿಂಗ್ ಆಫ್ ಕ್ಲೇ~ ಖ್ಯಾತಿಯ ರಫೆಲ್ ಎರಡನೇ ಬಾರಿಗೆ ಹ್ಯಾಟ್ರಿಕ್ ಚಾಂಪಿಯನ್ ಆದ ಸಾಧನೆ ಮಾಡಿದರು. 2010, 2011ರಲ್ಲಿ ಈ ಮುನ್ನ ರೋಲಂಡ್ ಗ್ಯಾರೋಸ್‌ನಲ್ಲಿ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು. ಅದಕ್ಕೂ ಮೊದಲು 2005, 06, 07, 08ರಲ್ಲಿ ಸತತ ನಾಲ್ಕು ಬಾರಿ ಚಾಂಪಿಯನ್ ಆಗಿದ್ದರು. ಒಟ್ಟಾರೆಯಾಗಿ ರಫೆಲ್‌ಗೆ ಲಭಿಸಿದ 11ನೇ ಗ್ರ್ಯಾಂಡ್‌ಸ್ಲಾಮ್ ಸಿಂಗಲ್ಸ್ ಕಿರೀಟವಿದು.

ಅವರು 2008, 2010ರಲ್ಲಿ ವಿಂಬಲ್ಡನ್, 2009ರಲ್ಲಿ ಆಸ್ಟ್ರೇಲಿಯಾ ಓಪನ್, 2010ರಲ್ಲಿ ಅಮೆರಿಕ ಓಪನ್ ಗೆದ್ದಿದ್ದರು. ನಡಾಲ್‌ಗಿಂತ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ (16), ಅಮೆರಿಕದ ಪೀಟ್ ಸಾಂಪ್ರಾಸ್ (14) ಹಾಗೂ ಆಸ್ಟ್ರೇಲಿಯಾದ ರಾಯ್ ಎಮರ್ಸನ್ (12) ಮುಂದಿದ್ದಾರೆ.

ಭಾನುವಾರ ಮಳೆ ಬಂದು ಪಂದ್ಯ ಸ್ಥಗಿತಗೊಂಡಾಗ ನಡಾಲ್ 6-4, 6-3, 2-6, 1-2ರಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ ಮರುದಿನ ಪಂದ್ಯ ಮುಂದುವರಿದಾಗ ಅಗ್ರ ರ‌್ಯಾಂಕ್‌ನಆಟಗಾರ ಡೊಕೊವಿಕ್ ಅವರಿಗೆ ಸೋಲುಣಿಸಲು ಹೆಚ್ಚು ಹೊತ್ತು ಬೇಕಾಗಲಿಲ್ಲ.

ನಾಲ್ಕನೇ ಸೆಟ್‌ನಲ್ಲಿ ನೊವಾಕ್ 2-1 ಗೇಮ್‌ಗಳಿಂದ ಮುಂದಿದ್ದರು. ಆದರೆ ಅವರ ಸರ್ವ್ ಬ್ರೇಕ್ ಮಾಡಿದ ನಡಾಲ್ 2-2 ಸಮಬಲಕ್ಕೆ ಕಾರಣರಾದರು. ಅಲ್ಲಿಂದ ಎದುರಾಳಿಗೆ ಯಾವುದೇ ಅವಕಾಶ ನೀಡದ ಅವರು 7-5ರಲ್ಲಿ ಆ ಸೆಟ್ ಗೆದ್ದೇಬಿಟ್ಟರು. ಕೊನೆಯ ಸೆಟ್ 70 ನಿಮಿಷ ನಡೆಯಿತು.

ಆದರೆ ಅಗ್ರ ಶ್ರೇಯಾಂಕದ ಆಟಗಾರ ಜೊಕೊವಿಚ್ ನಿರಾಶೆ ಅನುಭವಿಸಿದರು. 2011ರಲ್ಲಿ ವಿಂಬಲ್ಡನ್, ಅಮೆರಿಕ ಓಪನ್, 2012ರ ಆರಂಭದಲ್ಲಿ ಆಸ್ಟ್ರೇಲಿಯಾ ಓಪನ್ ಗೆದ್ದಿದ್ದ ಅವರು ಫ್ರೆಂಚ್ ಓಪನ್ ಜಯಿಸಿ ದಾಖಲೆ ನಿರ್ಮಿಸುವ ಹಂತದಲ್ಲಿದ್ದರು.

ಆದರೆ ಅದಕ್ಕೆ ಎರಡನೇ ಶ್ರೇಯಾಂಕದ ನಡಾಲ್ ಅವಕಾಶ ನೀಡಲಿಲ್ಲ. ನೊವಾಕ್ 53 ಬಾರಿ ಸ್ವಯಂಕೃತ ತಪ್ಪು ಎಸಗಿದ್ದು ಮುಳುವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.