ADVERTISEMENT

ಟೆನಿಸ್: ಕ್ವಾರ್ಟರ್‌ಗೆ ಪೇಸ್-ಭೂಪತಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ನ್ಯೂಯಾರ್ಕ್ (ಪಿಟಿಐ): ಅಮೋಘ ಪ್ರದರ್ಶನ ಮುಂದುವರಿಸಿರುವ ಭಾರತದ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಪೇಸ್-ಭೂಪತಿ 6-4, 7-5ರಲ್ಲಿ ಭಾರತದ ಸೋಮದೇವ್ ದೇವ್‌ವರ್ಮನ್ ಹಾಗೂ ಫಿಲಿಪ್ಪೀನ್ಸ್‌ನ ಟ್ರೀಟ್ ಕೊನ್ರಾಡ್ ಹ್ಯೂ ಅವರನ್ನು ಮಣಿಸಿದರು. ನಾಲ್ಕನೇ ಶ್ರೇಯಾಂಕದ ಭಾರತದ ಜೋಡಿಯನ್ನು ಪ್ರತಿ ಹಂತದಲ್ಲೂ ಸೋಮ್ ಹಾಗೂ ಟ್ರೀಟ್ ಕಾಡಿದರು. ಹಾಗಾಗಿ ಈ ಪಂದ್ಯ ಒಂದೂವರೆ ಗಂಟೆ ನಡೆಯಿತು.

ಮೊದಲ ಸೆಟ್‌ನಲ್ಲಿಯೇ ಆಕರ್ಷಕ ಏಸ್‌ಗಳನ್ನು ಸಿಡಿಸಿದ ಸೋಮ್ ಹಾಗೂ ಟ್ರೀಟ್ ಗೆಲುವಿನ ಸನಿಹ ಬಂದಿದ್ದರು. ಆದರೆ ಸ್ವಯಂಕೃತ ತಪ್ಪುಗಳನ್ನು ಎಸಗಿ ಎಡವಟ್ಟು ಮಾಡಿಕೊಂಡರು. ಅನುಭವಿ ಆಟಗಾರರಾದ ಪೇಸ್ ಹಾಗೂ ಭೂಪತಿ ಈ ಅವಕಾಶದ ಸದುಪಯೋಗ ಪಡೆದು 6-4ರಲ್ಲಿ ಸೆಟ್ ಜಯಿಸಿದರು.

ಎರಡನೇ ಸೆಟ್ ಗೆಲ್ಲಲು ಕೂಡ `ಇಂಡಿಯನ್ ಎಕ್ಸ್‌ಪ್ರೆಸ್~ ಜೋಡಿ ಖ್ಯಾತಿಯ ಪೇಸ್ ಹಾಗೂ ಭೂಪತಿ ಸಾಕಷ್ಟು ಕಷ್ಟಪಡಬೇಕಾಯಿತು. ಆದರೆ ಈ ಆಟಗಾರರು ತಮ್ಮ ಅನುಭವದ ನೆರವು ಪಡೆದು ಎದುರಾಳಿ ಆಟಗಾರರ ಮೇಲೆ ಒತ್ತಡ ಹೇರಿದರು.

ಭಾರತದ ಜೋಡಿ ಎಂಟರ ಘಟ್ಟದ ಪಂದ್ಯದಲ್ಲಿ ಪೋಲೆಂಡ್‌ನ ಮರಿಯುಸ್ ಫಿಸ್ಟೆನ್‌ಬರ್ಗ್ ಹಾಗೂ ಮಾರ್ಸಿನ್ ಮಟ್ಕೊಸ್ಕಿ ಎದುರುಆಡಲಿದೆ.

ಭಾರತ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಶಿ ಈಗಾಗಲೇ ಎಂಟರ ಘಟ್ಟ ತಲುಪಿದ್ದಾರೆ. 

ಮಿಶ್ರ ಡಬಲ್ಸ್‌ನಲ್ಲಿ ಪೇಸ್ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಸೆಮಿಫೈನಲ್ ತಲುಪಿದ್ದಾರೆ. ಅವರು 6-2, 6-4ರಲ್ಲಿ ಒಲ್ಗಾ ಗೊವರ್‌ಸೊವಾ ಹಾಗೂ ಮಾಟ್ಕೊಸ್ಕಿ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.