ADVERTISEMENT

ಟೆನಿಸ್: ಜೈನ್ ವಿವಿ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ಬೆಳಗಾವಿ: ಬೆಂಗಳೂರಿನ ಜೈನ್ ವಿವಿ ತಂಡ, ನಿರೀಕ್ಷೆಯಂತೆ ದಕ್ಷಿಣ ವಲಯ ಅಂತರ ವಿವಿ ಮಹಿಳಾ ಟೆನಿಸ್ ಟೂರ್ನಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶನಿವಾರ ಮುಕ್ತಾಯಗೊಂಡ ಟೂರ್ನಿಯ ಏಕಪಕ್ಷೀಯವಾದ ಫೈನಲ್ ಪಂದ್ಯಗಳಲ್ಲಿ ಜೈನ್ ವಿವಿ ತಂಡ ಚೆನ್ನೈನ ಮದ್ರಾಸ್ ವಿವಿ ತಂಡವನ್ನು 2-0 ಅಂತರದಿಂದ ಮಣಿಸಿತು.

ಮಳೆಯ ಕಾರಣ ಫೈನಲ್ ಪಂದ್ಯಗಳನ್ನು ಸರಳೀಕರಿಸಲಾಯಿತು. ಆರ್. ಭವಾನಿ ವಿರುದ್ಧ ಶಲಾಕಾ ಯು 8-3 ಪಾಯಿಂಟ್‌ಗಳಿಂದ ಜಯ ಸಾಧಿಸಿ ತಂಡಕ್ಕೆ ಭರವಸೆ ನೀಡಿದರು.

ಡಬಲ್ಸ್ ವಿಭಾಗದಲ್ಲಿ ಪ್ರಾರ್ಥನಾ ಹಾಗೂ ಪ್ರೇರಣಾ ಜೋಡಿ 8-3ರ ಅಂತರದಿಂದ ಪ್ರೀತಿ ಹಾಗೂ ಭವಾನಿ ಜೋಡಿ ವಿರುದ್ಧ ಗೆಲುವು ಸಾಧಿಸಿ ಪ್ರಶಸ್ತಿಗೆ ಮುತ್ತಿಟ್ಟರು. ಆತಿಥೇಯ ವಿಟಿಯು ತಂಡ, ತಮಿಳುನಾಡಿನ ಕಟ್ಟಂಕುಲತ್ತೂರಿನ ಎಸ್‌ಆರ್‌ಎಂ ವಿವಿ ತಂಡವನ್ನು (2-0) ಸೋಲಿಸುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ಜೈನ್ ವಿವಿ,  ವಿಟಿಯು ತಂಡವನ್ನು  (2-0) ಸೋಲಿಸಿತು. ಸಿಂಗಲ್ಸ್‌ನಲ್ಲಿ ಶಲಾಕಾ 7-5, 6-3ರಿಂದ ಅಕ್ಷಿತಾ ಬಿ. ರಾಜ್ ವಿರುದ್ಧ, ಡಬಲ್ಸ್‌ನಲ್ಲಿ ಪ್ರಾರ್ಥನಾ ಹಾಗೂ ಪ್ರೇರಣಾ ಜೋಡಿ (6-2, 7-5) ಅಕ್ಷಿತಾ ಹಾಗೂ ಸ್ಫೂರ್ತಿ ಬಿರಾದಾರ ವಿರುದ್ಧ ಜಯ ಸಾಧಿಸಿದರು. ಮದ್ರಾಸ್ ವಿವಿ, 2-0ರಿಂದ ಕಟ್ಟಂಕುಲತ್ತೂರಿನ ಎಸ್‌ಆರ್‌ಎಂ ವಿವಿ ವಿರುದ್ಧ ಜಯ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.