ADVERTISEMENT

ಟೆನಿಸ್: ಫೈನಲ್‌ಗೆ ಲಗ್ಗೆ ಇಟ್ಟ ಫೆಡರರ್

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 19:30 IST
Last Updated 6 ಜುಲೈ 2012, 19:30 IST

ಲಂಡನ್ (ರಾಯಿಟರ್ಸ್): ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಈ ಬಾರಿ ಯಾವುದೇ ಆಘಾತಕ್ಕೆ ಆಸ್ಪದ ನೀಡಲಿಲ್ಲ. ಕಾರಣ 16 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಫೆಡರರ್ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್ ಫೈನಲ್ ಪ್ರವೇಶಿಸಿದ್ದಾರೆ.

ಸೆಂಟರ್ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಅವರು 6-3, 3-6, 6-4, 6-3ರಲ್ಲಿ ಹಾಲಿ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಚ್‌ಗೆ ಆಘಾತ ನೀಡಿದರು.

ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ರೋಜರ್ ಈ ಹಿಂದೆ 2010 ಹಾಗೂ 2011ರ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿಯೇ ಸೋತು ನಿರಾಸೆ ಅನುಭವಿಸಿದ್ದರು. ಆದರೆ ಈ ಬಾರಿ ಐತಿಹಾಸಿಕ ಸಾಧನೆಯೊಂದಕ್ಕೆ ಸಾಕ್ಷಿಯಾಗುವ ಸನಿಹದಲ್ಲಿದ್ದಾರೆ.

ವಿಂಬಲ್ಡನ್‌ನಲ್ಲಿ ವಿಶ್ವ ದಾಖಲೆ ಸರಿಗಟ್ಟುವ ಏಳನೇ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆಲ್ಲಲು ಫೆಡರರ್ ಇನ್ನು ಒಂದು ಯಶಸ್ಸಿ ಹೆಜ್ಜೆ ಇಟ್ಟರೆ ಸಾಕು. ಟೆನಿಸ್ ದಂತಕತೆ ಅಮೆರಿಕದ ಪೀಟ್ ಸಾಂಪ್ರಾಸ್ (ಏಳು ಬಾರಿ ಸಿಂಗಲ್ಸ್ ಪ್ರಶಸ್ತಿ) ಅವರಂಥ ಶ್ರೇಷ್ಠರ ಸಾಲಿಗೆ ಸೇರಲಿದ್ದಾರೆ.

ಈಗಾಗಲೇ ಆರು ಬಾರಿ ಇಲ್ಲಿ ಟ್ರೋಫಿ ಎತ್ತಿ ಹಿಡಿದಿರುವ ರೋಜರ್‌ಗೆ ನಾಲ್ಕರ ಘಟ್ಟದ ಪಂದ್ಯದಲ್ಲಿ ಜೊಕೊವಿಚ್ ಅಷ್ಟೇನು ಸವಾಲಾಗಲಿಲ್ಲ. 

ಪಂದ್ಯ ವೀಕ್ಷಿಸಿದ ಸಚಿನ್: ಸಚಿನ್ ತೆಂಡೂಲ್ಕರ್ ಹಾಗೂ ಪತ್ನಿ ಅಂಜಲಿ ಅವರು ಫೆಡರರ್ ಹಾಗೂ ಜೊಕೊವಿಚ್ ನಡುವಿನ ಸೆಮಿಫೈನಲ್ ಪಂದ್ಯ ವೀಕ್ಷಿಸಿದರು. ಫೆಡರರ್ ಅಭಿಮಾನಿ ಕೂಡ ಆಗಿರುವ ಸಚಿನ್ ರಾಯಲ್ ಬಾಕ್ಸ್‌ನಲ್ಲಿ  ಕುಳಿತು ಈ ಪಂದ್ಯ ಸವಿದರು.

ಇಂದು ಸೆರೆನಾ-ರಾಡ್ವಾಂಸ್ಕಾ ಪೈಪೋಟಿ: ಶನಿವಾರ ನಡೆಯಲಿರುವ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಪೋಲೆಂಡ್‌ನ ಅಗ್ನಿಸ್ಕಾ ರಾಡ್ವಾಂಸ್ಕಾ ಹಾಗೂ ಅಮೆರಿಕದ ಸೆರೆನಾ ವಿಲಿಯಮ್ಸ ಪೈಪೋಟಿ ನಡೆಸಲಿದ್ದಾರೆ.

ರಾಡ್ವಾಂಸ್ಕಾ ಅವರಿಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್ ಫೈನಲ್. ಅವರು 73 ವರ್ಷಗಳ ಬಳಿಕ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಫೈನಲ್ ತಲುಪಿದ ಪೋಲೆಂಡ್‌ನ ಮೊದಲ ಆಟಗಾರ್ತಿ ಎನ್ನುವ ಗೌರವ ಪಡೆದಿದ್ದಾರೆ. ಆದರೆ ನಾಲ್ಕು ಬಾರಿಯ ವಿಂಬಲ್ಡನ್ ಚಾಂಪಿಯನ್ ಸೆರೆನಾ ಅವರಿಂದ ಪ್ರಬಲ ಸವಾಲು ಎದುರಿಸಬೇಕಾಗಿದೆ. ರಾಡ್ವಾಂಸ್ಕಾ ಗಂಟಲು ಸೋಂಕಿಗೆ ಒಳಗಾಗಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ.

ಸೆಮಿಫೈನಲ್‌ಗೆ ಪೇಸ್ ಜೋಡಿ: ಲಿಯಾಂಡರ್ ಪೇಸ್ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಮಿಶ್ರ ಡಬಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಅವರು 6-2, 6-2ರಲ್ಲಿ ಆಸ್ಟ್ರೇಲಿಯಾದ ಪಾಲ್ ಹನ್ಲಿ ಹಾಗೂ ರಷ್ಯಾದ ಅಲಾ ಕುದ್ರಿಯತ್ಸೆವಾ ಎದುರು ಗೆದ್ದರು.

ಪೇಸ್-ವೆಸ್ನಿನಾ ಮೂರನೇ ಸುತ್ತಿನ ಪಂದ್ಯದಲ್ಲಿ 7-6, 6-3ರಲ್ಲಿ ಬೆಲಾರಸ್‌ನ ಮ್ಯಾಕ್ಸ್ ಮಿರ್ನಿ ಹಾಗೂ ವಿಕ್ಟೋರಿ ಅಜರೆಂಕಾ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.