ADVERTISEMENT

ಟೆನಿಸ್: ಸನಮ್ ಸಿಂಗ್‌ಗೆ ಆಘಾತ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 19:59 IST
Last Updated 19 ಡಿಸೆಂಬರ್ 2012, 19:59 IST

ಬೆಳಗಾವಿ: ದಾವಣಗೆರೆ ಹಾಗೂ ಧಾರವಾಡ ಐಟಿಎಫ್ ಟೂರ್ನಿಗಳ ಚಾಂಪಿಯನ್ ಹರಿಯಾಣದ ಸನಮ್ ಸಿಂಗ್ ಆಘಾತಕಾರಿ ಸೋಲು ಅನುಭವಿಸಿ ವಿಟಿಯು ಟೆನಿಸ್ ಅಂಕಣದಲ್ಲಿ ನಡೆಯುತ್ತಿರುವ ಬೆಳಗಾವಿ ಓಪನ್ ಐಟಿಎಫ್ ಟೆನಿಸ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಬುಧವಾರ ಒಂದು ಗಂಟೆ 42 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಅವರು 6-7(6), 3-6ರಲ್ಲಿ ಪೋರ್ಚುಗಲ್‌ನ ಆ್ಯಂಡ್ರೆ ಗಾಸ್ಪರ್ ಮೂರ್ತ ಎದುರು ಸೋಲು ಕಂಡರು. ಮೊದಲ ಸೆಟ್‌ನಲ್ಲಿ ಮೂರ್ತರ ಮೊದಲ ಹಾಗೂ ಮೂರನೇ ಗೇಮ್  ಮುರಿಯುವ ಮೂಲಕ 3-0ರಲ್ಲಿ ಮುನ್ನಡೆಯಲ್ಲಿದ್ದ ಸನಮ್ ನಂತರ ಪ್ರಬಲ ಪೈಪೋಟಿ ಎದುರಿಸಿದರು. ತಿರುಗೇಟು ನೀಡಿದ ಮೂರ್ತ ಸತತ ನಾಲ್ಕು ಗೇಮ್‌ಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ 4-3ರಲ್ಲಿ ಮುನ್ನಡೆ ಸಾಧಿಸಿದರು. 9ನೇ ಗೇಮ್ ಗೆಲ್ಲುವ ಮೂಲಕ ಸನಮ್ ಸೆಟ್ ಅನ್ನು ಟೈಬ್ರೇಕ್‌ರ್‌ವರೆಗೆ ಒಯ್ದರಾದರೂ ಅಲ್ಲಿ ಯಶ ಕಾಣಲಿಲ್ಲ. ಎರಡನೇ ಸೆಟ್‌ನ 3 ಹಾಗೂ 9ನೇ ಗೇಮ್‌ನಲ್ಲಿ ಸನಮ್‌ರ ಸರ್ವ್ ಮುರಿಯುವ ಮೂಲಕ ಮೂರ್ತ ಸೆಟ್ ಹಾಗೂ ಪಂದ್ಯವನ್ನು ತಮ್ಮದಾಗಿಸಿಕೊಂಡರು.

`ಕರ್ನಾಟಕದಲ್ಲಿ ಕಳೆದ ಎರಡು ವಾರಗಳ ಕಾಲ ಉತ್ತಮ ಪ್ರದರ್ಶನ ನೀಡಿದ್ದೇನೆ. ಮುಂದಿನ ವಾರ ಚೆನ್ನೈನಲ್ಲಿ ನಡೆಯಲಿರುವ ಎಟಿಪಿ ಟೂರ್ನಿಯತ್ತ ಗಮನ ಕೇಂದ್ರೀಕರಿಸುತ್ತೇನೆ' ಎಂದು ಡೇವಿಸ್ ಕಪ್ ಆಟಗಾರ ಸನಮ್ ಹೇಳಿದರು.

ಮತ್ತೊಂದು ಕುತೂಹಲಕಾರಿ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಶ್ರೀರಾಮ್ ಬಾಲಾಜಿ ಮೊದಲ ಸೆಟ್ ನಿರಾಸೆಯ ನಡುವೆಯೂ ಪಂದ್ಯ ಗೆದ್ದರು. ಅವರು 6-7 (2), 6-1, 6-1ರಲ್ಲಿ ಮೋಹಿತ್ ಮಯೂರ್ ಅವರನ್ನು ಮಣಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಬಾಲಾಜಿ ಹಾಲೆಂಡ್‌ನ ಕೊಲಿನ್ ವ್ಯಾನ್‌ಬೀಮ್ ಅವರನ್ನು ಎದುರಿಸಲಿದ್ದಾರೆ.

ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ವಿಜಯಸುಂದರ್ ಪ್ರಕಾಶ್-ಅರುಣ್ ಪ್ರಕಾಶ್ ರಾಜಗೋಪಾಲನ್ ಜೋಡಿ 6-4, 3-6 (10-7) ಅಂತರದಲ್ಲಿ ಕುನಾಲ್ ಆನಂದ್-ರೋನಾಕ್ ಮಂಜುಳಾ ಜೋಡಿಯನ್ನು ಮಣಿಸಿತು. ಅಮೆರಿಕಾದ ಅಮೃತ್ ನರಸಿಂಹನ್-ಮೈಕಲ್ ಶಬಾಜ್ ಜೋಡಿ 5-7, 6-4 (10-6)ರಲ್ಲಿ ಥಿಯೊಡೊರಸ್ ಏಂಜಲೀನೊಸ್-ಸನಮ್ ಸಿಂಗ್ ಜೋಡಿಯನ್ನು ಪರಾಭವಗೊಳಿಸಿತು.

ಸೆರ್ಗೈ ಕ್ರೊಟಿಯೊಕ್-ಲುಕಾ ಮಾರ್ಗರೋಲಿ ಜೋಡಿ 6-4, 6-4ರಿಂದ ಜತಿನ್ ದಹಿಯಾ-ಶಹಬಾಸ್ ಖಾನ್ ವಿರುದ್ಧ ಹಾಗೂ ರೂಪೇಶ್ ರಾಯ್-ವಿವೇಕ್ ಶೋಕಿನ್ ಜೋಡಿ 7-6(3), 6-3ರಿಂದ ಪಿ. ವಿಘ್ನೇಶ್-ಸನಮ್ ಸಿಂಗ್ ಎದುರು ಜಯ ಪಡೆದು ಸೆಮಿಫೈನಲ್‌ಗೆ ಮುನ್ನಡೆದರು.

ಸಿಂಗಲ್ಸ್ ವಿಭಾಗದ ಇತರ ಫಲಿತಾಂಶಗಳು:  ಗ್ರೀಕ್‌ನ ಥಿಯೊಡೊರಸ್ ಏಂಜಲೀನೊಸ್‌ಗೆ  4-6, 7-6(1), 6-4ರಿಂದ ರಾಮ್‌ಕುಮಾರ್ ರಾಮನಾಥನ್ ವಿರುದ್ಧವೂ, ಮೈಕಲ್ ಶಬಾಜ್‌ಗೆ 6-3, 6-4ರಿಂದ ಲುಕಾ ಮಾರ್ಗರೋಲಿ ಮೇಲೂ, ಹಾಲೆಂಡ್‌ನ ಜೊರೊಯಿನ್ ಬರ್ನಾಡ್‌ಗೆ 6-4, 6-4ರಿಂದ ಅಭಿಜಿತ್ ತಿವಾರಿ ವಿರುದ್ಧವೂ. ಜರ್ಮನಿಯ ಟಾರ್ಸ್ಟನ್ ವಿಟೊಸ್ಕಾಗೆ 5-7, 6-1, 6-1ರಿಂದ ಜತಿನ್ ದಹಿಯಾ ಮೇಲೂ, ಅಶ್ವಿನ್ ವಿಜಯರಾಘವನ್‌ಗೆ 6-4, 6-4ರಿಂದ ಸುರೋಜ್ ಪ್ರಬೋಧ್ ವಿರುದ್ಧವೂ,  ಕೊಲಿನ್ ವ್ಯಾನ್‌ಬೀಮ್‌ಗೆ 6-0, 6-3ರಿಂದ ರೋಹನ್ ಜಿಡೆ ಮೇಲೂ ಗೆಲುವು ಸಾಧಿಸಿ ಮುಂದಿನ ಸುತ್ತಿನ ಮುನ್ನಡೆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.