ADVERTISEMENT

ಟೆನಿಸ್: ಸೆಮಿಫೈನಲ್‌ಗೆ ವಶಿಷ್ಠ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 19:59 IST
Last Updated 26 ಡಿಸೆಂಬರ್ 2012, 19:59 IST

ಬೆಂಗಳೂರು: ಎರಡೂ ಸೆಟ್‌ಗಳಲ್ಲಿ ಅಲ್ಪ ಪ್ರತಿರೋಧ ಎದುರಿಸಿ ಗೆಲುವು ಸಾಧಿಸಿದ ವಶಿಷ್ಠ ವಿ. ಚೆರುಕು, ಎಐಟಿಎ ಟ್ಯಾಲೆಂಟ್ ಸೀರಿಸ್ ರಾಷ್ಟ್ರೀಯ ರ‌್ಯಾಂಕಿಂಗ್ ಟೆನಿಸ್ ಟೂರ್ನಿಯ ಬಾಲಕರ 18 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಮಹಿಳಾ ಸೇವಾ ಸಮಾಜ ಟೆನಿಸ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಬುಧವಾರ ನಡೆದ ಎಂಟರ ಘಟ್ಟದ ಹಣಾಹಣಿಯಲ್ಲಿ ವಶಿಷ್ಠ 6-3, 6-4ರಲ್ಲಿ ಮೂರನೇ ಶ್ರೇಯಾಂಕದ ಅಲೋಕ್ ಆರಾಧ್ಯ ಅವರನ್ನು ಸೋಲಿಸಿದರು.ಇದೇ ಆಟಗಾರ 16 ವರ್ಷದೊಳಗಿನ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ವಶಿಷ್ಠ 6-3, 6-4ರಲ್ಲಿ ಮಯೂಖ್ ರಾವತ್ ಎದುರು ಜಯ ಪಡೆದರು. ಪ್ರಶಸ್ತಿ ಘಟ್ಟದ ಪಂದ್ಯದಲ್ಲಿ ವಶಿಷ್ಠ ಅವರು ವಿಘ್ನೇಶ್ ಸುಬ್ರಮಣಿಯಮ್ ಸವಾಲನ್ನು ಎದುರಿಸಲಿದ್ದಾರೆ. ಈ ಆಟಗಾರ  ಗೋಕುಲ್ ವಿರುದ್ಧ `ವಾಕ್ ಓವರ್' ಪಡೆದು ಫೈನಲ್ ಪ್ರವೇಶಿಸಿದ್ದಾರೆ.

ಫೈನಲ್‌ಗೆ ಸೋಹಾ-ರಷ್ಮಿಕಾ: ಸೋಹಾ ಮತ್ತು ರಷ್ಮಿಕಾ ರಂಜನ್ ಬಾಲಕಿಯರ 16 ವರ್ಷದೊಳಗಿನವರ ವಿಭಾಗದ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ. ನಾಲ್ಕರ ಘಟ್ಟದ ಪಂದ್ಯದಲ್ಲಿ ಸೋಹಾ 7-6, 6-4ರಲ್ಲಿ ಮಧುಮಿತಾ ಮೀನಾಕ್ಷಿ ಮೇಲೂ, ರಷ್ಮಿಕಾ 6-2, 3-6, 6-2ರಲ್ಲಿ ಸಿ.ಎಸ್. ಪ್ರಣಿತಾ ಅವರನ್ನು ಮಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.