ADVERTISEMENT

ಟೈಟಾನ್ಸ್‌ಗೆ ರೋಚಕ ಗೆಲುವು

ಕ್ರಿಕೆಟ್‌: ಮಿಂಚಿದ ಮರ್ಚೆಂಟ್‌, ಡೇವಿಡ್ಸ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 19:59 IST
Last Updated 24 ಸೆಪ್ಟೆಂಬರ್ 2013, 19:59 IST
ಗೆಲುವು ಪಡೆದ ನಂತರ ಟೈಟಾನ್ಸ್‌ ತಂಡದವರು ಸಂಭ್ರಮಿಸಿದ ಕ್ಷಣ
ಗೆಲುವು ಪಡೆದ ನಂತರ ಟೈಟಾನ್ಸ್‌ ತಂಡದವರು ಸಂಭ್ರಮಿಸಿದ ಕ್ಷಣ   

ಮೊಹಾಲಿ (ಪಿಟಿಐ, ಐಎಎನ್‌ಎಸ್‌):  ಮರ್ಚೆಂಟ್‌ ಡಿ ಲಾನ್ಜ್‌ (13ಕ್ಕೆ3) ಅವರ ಪ್ರಭಾವಿ ಬೌಲಿಂಗ್‌ ದಾಳಿ ನೆರವಿನಿಂದ ಟೈಟಾನ್ಸ್‌ ತಂಡದವರು ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ ಬ್ರಿಸ್ಬೇನ್‌ ಹೀಟ್‌ ಎದುರು 4 ರನ್‌ಗಳ ರೋಚಕ ಗೆಲುವು ಸಾಧಿಸಿದರು.

ಮಂಗಳವಾರ ಪಂಜಾಬ್‌ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಟೈಟಾನ್ಸ್‌ 18.5 ಓವರ್‌ಗಳಲ್ಲಿ 123 ರನ್‌ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಬ್ರಿಸ್ಬೇನ್‌ ಹೀಟ್‌ 20 ಓವರ್‌ಗಳಲ್ಲಿ 119 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡಿತು.

ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡಲು ಅವಕಾಶ ಪಡೆದ ದಕ್ಷಿಣ ಆಫ್ರಿಕಾದ ಟೈಟಾನ್ಸ್‌ ತಂಡಕ್ಕೆ ಹೆನ್ರಿ ಡೇವಿಡ್ಸ್‌ ಹಾಗೂ ಹೀನೊ ಕುನ್‌ ಆಸರೆಯಾದರು. ಇವರಿಬ್ಬರು ಎರಡನೇ ವಿಕೆಟ್‌ಗೆ 50 ಎಸೆತಗಳಲ್ಲಿ 69 ರನ್‌ ಗಳಿಸಿದರು. ನಂತರ ಬಂದ ಎಬಿ ಡಿವಿಲಿಯರ್ಸ್‌ (28; 19 ಎ.) ಕೂಡ ಮಿಂಚಿದರು. ಆದರೆ ಈ ತಂಡದವರು ಏಳು ವಿಕೆಟ್‌ಗಳನ್ನು 33 ರನ್‌ಗಳ ಅಂತರದಲ್ಲಿ ಕಳೆದುಕೊಂಡರು. ಮ್ಯಾಥ್ಯೂ ಗೇಲ್‌ (10ಕ್ಕೆ4) ಪ್ರಭಾವಿ ದಾಳಿ ನಡೆಸಿದರು.

ಈ ಸುಲಭದ ಗುರಿ ಎದುರು ಆಸ್ಟ್ರೇಲಿಯಾದ ಬ್ರಿಸ್ಬೇನ್‌ ಕುಂಟುತ್ತಲೇ ಸಾಗಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಭರವಸೆ ಮೂಡಿಸಿದ್ದರು. ಆದರೆ ಟೈಟಾನ್ಸ್‌ನ ರೊವನ್‌ ರಿಚರ್ಡ್ಸ್ ಹಾಗೂ ಮರ್ಚೆಂಟ್‌ ಎದುರಾಳಿ ಮೇಲೆ ಕಡಿವಾಣ ಹಾಕಿದರು.

ಸಂಕ್ಷಿಪ್ತ ಸ್ಕೋರ್‌:
ಟೈಟಾನ್ಸ್‌:
18.5 ಓವರ್‌ಗಳಲ್ಲಿ 123 (ಹೆನ್ರಿ ಡೇವಿಡ್ಸ್‌ 39, ಹೀನೊ ಕುನ್‌31, ಎಬಿ ಡಿವಿಲಿಯರ್ಸ್‌ 28; ಮ್ಯಾಥ್ಯೂ ಗೇಲ್‌ 10ಕ್ಕೆ4); ಬ್ರಿಸ್ಬೇನ್‌ ಹೀಟ್‌: 20 ಓವರ್‌ಗಳಲ್ಲಿ 119 (ಜೇಮ್ಸ್‌ ಹೋಪ್ಸ್‌ 37, ಡೇನಿಯಲ್‌ ಕ್ರಿಸ್ಟಿಯಾನ್‌ 21, ಕ್ರಿಸ್‌ ಸ್ಯಾಬರ್ಗ್‌ 19; ರೊವನ್‌ ರಿಚರ್ಡ್ಸ್ 20ಕ್ಕೆ2, ಮರ್ಚೆಂಟ್‌ ಡಿ ಲಾನ್ಜ್‌ 13ಕ್ಕೆ3). ಫಲಿತಾಂಶ: ಟೈಟಾನ್ಸ್‌ಗೆ 4 ರನ್‌ ಜಯ. ಪಂದ್ಯ ಶ್ರೇಷ್ಟ: ಮರ್ಚೆಂಟ್‌ ಡಿ ಲಾನ್ಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.