ADVERTISEMENT

ಟೋಕಿಯೊ ಓಪನ್ ಟೆನಿಸ್: ಸೋಮ್ ನಿರ್ಗಮನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST

ಟೋಕಿಯೊ (ಪಿಟಿಐ): ಭಾರತದ ಯುವ ಆಟಗಾರ ಸೋಮದೇವ್ ದೇವ್‌ವರ್ಮನ್ ಅವರು ಟೋಕಿಯೊ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿಯೇ ನಿರಾಸೆಗೊಂಡು ನಿರ್ಗಮಿಸಿದ್ದಾರೆ.

ವಿಶ್ವ 24ನೇ ಶ್ರೇಯಾಂಕದ ಜೆಕ್ ಗಣರಾಜ್ಯದ ಪ್ರತಿಭಾವಂತ ಟೆನಿಸ್ ತಾರೆ ರಾಡೆಕ್ ಸ್ಟೆಫನೆಕ್ ಎದುರು ಸೋಮ್ ನೇರ ಸೆಟ್‌ಗಳಲ್ಲಿ ಪರಾಭವಗೊಂಡರು. ಈ ಸಾಲಿನಲ್ಲಿ ಸೋಮ್ ಅನೇಕ ಎಟಿಪಿ ಟೂರ್ನಿಗಳ ಮೊದಲ ಸುತ್ತಿನಲ್ಲಿಯೇ ಆಘಾತ ಅನುಭವಿಸಿದ್ದಾರೆ. ಈ ಸೋಲಿನ ಸರಪಣಿಯ ಕೊಂಡಿಯನ್ನು ಕಳಚಿಕೊಳ್ಳಲು ಟೋಕಿಯೊದಲ್ಲಿಯೂ ವಿಫಲರಾದರು.

ವಿಲಿಯರ್ಸ್ ಬದಲು ವಾನ್ ಡೆರ್‌ವತ್
ಬೆಂಗಳೂರು:
ಗಾಯದ ಕಾರಣ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿರುವ ಎಬಿ ಡಿವಿಲಿಯರ್ಸ್ ಬದಲು ಜೊಹಾನ್ ವಾನ್ ಡೆರ್‌ವತ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ.

ಆರ್‌ಸಿಬಿ ತಂಡದಲ್ಲಿ ಉಂಟಾದ ಬದಲಾವಣೆಯನ್ನು ಟೂರ್ನಿಯ ತಾಂತ್ರಿಕ ಸಮಿತಿ ಖಚಿತಪಡಿಸಿದೆ ಎಂದು ಪ್ರಕಟಣೆ ತಿಳಿಸಿದೆ. ದಕ್ಷಿಣ ಆಫ್ರಿಕಾದ ವಿಲಿಯರ್ಸ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದ ಸಂದರ್ಭ ಕೈಬೆರಳಿಗೆ ಗಾಯಮಾಡಿಕೊಂಡಿದ್ದರು. ಈ ಕಾರಣ ತಂಡ ಅವರ ಸೇವೆಯಿಂದ ವಂಚಿತವಾಗಿದೆ.
ವಿಲಿಯರ್ಸ್ ಜಾಗದಲ್ಲಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ವಾನ್ ಡೆರ್‌ವತ್‌ಗೆ ತಂಡದಲ್ಲಿ ಸ್ಥಾನ ನೀಡಬೇಕೆಂದು ಆರ್‌ಸಿಬಿ ತಂಡದ ಆಡಳಿತ ಟೂರ್ನಿಯ ತಾಂತ್ರಿಕ ಸಮಿತಿಯಲ್ಲಿ ಕೇಳಿಕೊಂಡಿತ್ತು. ಅದಕ್ಕೆ ಒಪ್ಪಿಗೆ ಲಭಿಸಿದೆ.

ಪ್ರೀ ಕ್ವಾರ್ಟರ್ ಫೈನಲ್‌ಗೆ ಜೈ ಭಗವಾನ್
ನವದೆಹಲಿ (ಪಿಟಿಐ):
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚು ಜಯಿಸಿದ್ದ ಜೈ ಭಗವಾನ್ ಹಾಗೂ ಎಲ್. ದೇವಿಂದರ್ ಸಿಂಗ್ ಅವರು ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಸೋಮವಾರ ನಡೆದ ಎರಡನೇ ಸುತ್ತಿನ ಸ್ಪರ್ಧೆಯ 60 ಕೆ.ಜಿ. ವಿಭಾಗದಲ್ಲಿ ಭಗವಾನ್ 14-6ರಲ್ಲಿ ಜೆಕ್ ಗಣರಾಜ್ಯದ ಮಿರೊಸ್ಲೊವ್ ಸರ್ಬನ್ ವಿರುದ್ಧ ಜಯ ಪಡೆದು ಪ್ರೀ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ   ಇಟ್ಟರು. ಭಾರತದ ಇನ್ನೊಬ್ಬ ಸ್ಪರ್ಧಿ ದೇವಿಂದರ್ 49 ಕೆ.ಜಿ. ವಿಭಾಗದಲ್ಲಿ 40-19ರಲ್ಲಿ ಮೆಕ್ಸಿಕೊದ ಜೊಸ್‌ಲೈಟೊ ವೆಲಾಕುಜ್ ಎದುರು ಗೆಲುವು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.