ADVERTISEMENT

ಟ್ರ್ಯಾಕ್‌ನಲ್ಲಿ ಓಡಿದ ನಾಯಿ, ಮಾಧ್ಯಮ ಕೇಂದ್ರದಲ್ಲಿ ಬಾವಲಿ...

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ಗ್ರೇಟರ್ ನೋಯ್ಡಾ (ಪಿಟಿಐ): ಚೊಚ್ಚಲ ಇಂಡಿಯನ್ ಗ್ರ್ಯಾನ್ ಪ್ರಿ ರೇಸ್‌ನ್ನು ಅದ್ಭುತ ರೀತಿಯಲ್ಲಿ ಸಂಘಟಿಸಲು ಸಕಲ ಸಿದ್ಧತೆ ನಡೆಸಿರುವ ಸಂಘಟಕರು ಅಲ್ಪ ಮುಜುಗರ ಅನುಭವಿಸಿದ್ದಾರೆ. ಶುಕ್ರವಾರದ ಅಭ್ಯಾಸದೊಂದಿಗೆ ಇದೀಗ ಫಾರ್ಮುಲಾ-1 ರೇಸ್‌ಗೆ ಕ್ಷಣಗಣನೆ ಆರಂಭವಾಗಿದೆ.

ಬೆಳಿಗ್ಗಿನ ಅಭ್ಯಾಸದ ಅವಧಿಯಲ್ಲಿ ಬೀದಿನಾಯಿಯೊಂದು ಬುದ್ಧ ಇಂಟರ್‌ನ್ಯಾಷನಲ್ ಟ್ರ್ಯಾಕ್‌ನಲ್ಲಿ ಓಡಿದ್ದು ಸಮಸ್ಯೆಗೆ ಕಾರಣವಾಯಿತು. ಇದರಿಂದ ಸುಮಾರು ಐದು ನಿಮಿಷಗಳ ಕಾಲ ಅಭ್ಯಾಸಕ್ಕೆ ಅಡ್ಡಿ ಉಂಟಾಯಿತು. ಸಿಬ್ಬಂದಿ ನಾಯಿಯನ್ನು ಟ್ರ್ಯಾಕ್‌ನಿಂದ ದೂರ ಓಡಿಸಿದ ಬಳಿಕ ಅಭ್ಯಾಸ ಮುಂದುವರಿಯಿತು.

ಸಂಘಟಕರಿಗೆ ಮುಜುಗರ ಉಂಟುಮಾಡಿದ ಘಟನೆ ಗುರುವಾರ ಕೂಡಾ ನಡೆದಿತ್ತು. ವಿಲಿಯಮ್ಸ ಚಾಲಕ ರೂಬೆನ್ಸ್ ಬಾರಿಶೆಲೊ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭ ವಿದ್ಯುತ್ ಕೈಕೊಟ್ಟಿತ್ತು.

ಇದರಿಂದ ಎಲ್ಲರೂ ಅಲ್ಪ ಸಮಸ್ಯೆ ಎದುರಿಸಿದ್ದರು. ಅದೇ ರೀತಿ ಮಾಧ್ಯಮ ಕೇಂದ್ರದಲ್ಲಿ ಬಾವಲಿಯೊಂದು ಕಾಣಿಸಿಕೊಂಡದ್ದು ಕೂಡಾ ಮುಜುಗರಕ್ಕೆ ಕಾರಣವಾಗಿದೆ.

ಅಪಘಾತ: ಶುಕ್ರವಾರ ಬೆಳಿಗ್ಗಿನ ಅಭ್ಯಾಸದ ವೇಳೆ ವಿಲಿಯಮ್ಸ ತಂಡದ ಪಾಸ್ಟರ್ ಮಲ್ಡೊನಾಡೊ ಹಾಗೂ ವರ್ಜಿನ್ ತಂಡದ ಜೆ. ಡಿ. ಅಂಬ್ರೋಸಿಯೊ ಅವರ ಕಾರುಗಳು ಅಪಘಾತಕ್ಕೆ ಒಳಗಾದವು. ಫೆರ್ನಾಂಡೊ ಅಲೊನ್ಸೊ ಕಾರಿನ `ಪವರ್ ಡ್ರೈವ್~ ವೈಫಲ್ಯದಿಂದ ಬೆಳಿಗ್ಗಿನ ಅವಧಿಯಲ್ಲಿ ಅಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಿದರು.

ಟ್ರ್ಯಾಕ್‌ನಲ್ಲಿ ದೂಳು ಇದ್ದ ಕಾರಣ ಹೆಚ್ಚಿನ ಚಾಲಕರು ಕಾರಿನ ಮೇಲೆ ನಿಯಂತ್ರಣ ಸಾಧಿಸಲು ಕಷ್ಟಪಟ್ಟರು. ಟೊರೊ ರೊಸೊ ತಂಡದ ಜೇಮಿ ಅಗುರ್‌ಸುವಾರಿ ಅವರ ಕಾರು ತಡೆಗೋಡೆಗೆ ಅಪ್ಪಳಿಸಿತು.

ಟ್ರೋಫಿ ಅನಾವರಣ: ಭಾನುವಾರ ನಡೆಯುವ ರೇಸ್‌ನಲ್ಲಿ ಗೆಲ್ಲುವ ಚಾಲಕನಿಗೆ ನೀಡುವ ಟ್ರೋಫಿಯನ್ನು ಶುಕ್ರವಾರ ರಾತ್ರಿ ನಡೆದ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು.

ಫಾರ್ಮುಲಾ ಒನ್ ಮುಖ್ಯಸ್ಥ ಬೆರ್ನಿ ಎಕ್ಸೆಲ್‌ಸ್ಟೋನ್ ಟ್ರೋಫಿಯನ್ನು ಮಾಧ್ಯಮದವರ ಮುಂದೆ ಪ್ರದರ್ಶಿಸಿದರು.
ಮಿರುಗುವ ಟ್ರೋಫಿಯನ್ನು 24 ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿಯಿಂದ ನಿರ್ಮಿಸಲಾಗಿದೆ.

`ಬುದ್ಧ ಟ್ರ್ಯಾಕ್ ವಿಶ್ವದ ಅತ್ಯುತ್ತಮ ಟ್ರ್ಯಾಕ್‌ಗಳಲ್ಲಿ ಒಂದಾಗಿದೆ. ಚಾಲಕರು ಈ ಟ್ರ್ಯಾಕ್ ಬಗ್ಗೆ ಯಾವುದೇ ದೂರು ನೀಡಿಲ್ಲ~ ಎಂದು ಬೆರ್ನಿ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.