ಬೆಂಗಳೂರು: `ಅಂಗಳಕ್ಕಿಳಿಯಲು ಕಾತರದಿಂದ ಕಾಯುತ್ತಿದ್ದೇನೆ. ಮತ್ತೆ ಭಾರತ ತಂಡದಲ್ಲಿ ಆಡುವುದು ನನ್ನ ಮುಖ್ಯ ಗುರಿ~
-ಈ ರೀತಿ ಹೇಳಿ ಸ್ವಲ್ಪ ಹೊತ್ತು ಮೌನಕ್ಕೆ ಶರಣಾದ ಯುವರಾಜ್ ಸಿಂಗ್ ಅವರ ಕಂಗಳಲ್ಲಿ ಅದೇ ವಿಶ್ವಾಸ, ಅದೇ ಉತ್ಸಾಹ ಮತ್ತೆ ಎದ್ದು ಕಾಣುತಿತ್ತು. ಹಿಂದಿನ ತಮ್ಮ ಆಟವನ್ನು ಪುನರಾವರ್ತಿಸುವ ಭರವಸೆಯೂ ಅವರ ಧ್ವನಿಯಲ್ಲಿ ಅಡಗಿತ್ತು.
`ಆದರೆ ಆ ಗುರಿ ಸಾಧಿಸಲು ನಾನು ಅವಸರಪಡುವುದಿಲ್ಲ. ಮುಂಬರುವ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಗುರಿ ಇಟ್ಟುಕೊಂಡಿದ್ದೇನೆ. ಅದಕ್ಕೂ ಮೊದಲು ಸ್ಥಳೀಯ ಕೆಲ ಟೂರ್ನಿಗಳಲ್ಲಿ ಆಡಬೇಕು~ ಎಂದು ಎಡಗೈ ಬ್ಯಾಟ್ಸ್‌ಮನ್ ಯುವರಾಜ್ ಹೇಳಿದರು.
ಕ್ಯಾನ್ಸರ್‌ನಿಂದ ಪೂರ್ಣವಾಗಿ ಚೇತರಿಸಿಕೊಂಡಿರುವ ಯುವಿ ಸೋಮವಾರ ಬೆಳಿಗ್ಗೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ಆಗಮಿಸಿ ದೈಹಿಕ ಕಸರತ್ತು ನಡೆಸಿದರು. ಮರುಚೈತನ್ಯ ಶಿಬಿರದಲ್ಲಿ ಅವರು ಪಾಲ್ಗೊಂಡಿದ್ದಾರೆ.
`ನನ್ನ ದೇಹ ತುಂಬಾ ಸಮಸ್ಯೆಗೆ ಸಿಲುಕಿದೆ. ಆಘಾತಕ್ಕೆ ಒಳಗಾಗಿದೆ. ಈ ಆಘಾತದಿಂದ ಹೊರಬರುವುದು ಅಷ್ಟು ಸುಲಭವಲ್ಲ. ಈ ದೇಹವೀಗ ನಿಧಾನವಾಗಿ ಬಲಿಷ್ಠವಾಗುತ್ತಿದೆ. ನಾನೀಗ ನೆಟ್ಸ್‌ನಲ್ಲಿ ಬ್ಯಾಟಿಂಗ್ ಕೂಡ ಶುರು ಮಾಡಿದ್ದೇನೆ~ ಎಂದೂ ಅವರು ವಿವರಿಸಿದರು.
`ಯಾವಾಗ ಅಂಗಳಕ್ಕಿಳಿಯಬೇಕು ಎಂಬುದನ್ನು ನಾನು ಇನ್ನೂ ನಿರ್ಧರಿಸಿಲ್ಲ. ಆದರೆ ಆಗಸ್ಟ್‌ನಲ್ಲಿ ದೇಶಿ ಟೂರ್ನಿಗಳಲ್ಲಿ ಆಡಬೇಕು ಎಂಬ ಯೋಜನೆ ಇದೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಹಿಂತಿರುಗುವ ಮೊದಲು ಪೂರ್ಣ ಫಿಟ್‌ನೆಸ್ ಕಂಡುಕೊಳ್ಳಬೇಕು. ಅದಕ್ಕೆ ಇನ್ನೂ ಒಂದೆರಡು ತಿಂಗಳು ಬೇಕು. ಶೇಕಡಾ ನೂರರಷ್ಟು ಸಾಮರ್ಥ್ಯದೊಂದಿಗೆ ಕ್ರೀಡಾಂಗಣಕ್ಕೆ ಇಳಿಯಬೇಕು. ಹಾಗಾಗಿ ಅವಸರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ.~ ಎಂದು ಯುವರಾಜ್ ನುಡಿದರು.
ಎನ್‌ಸಿಎನಲ್ಲಿ ವೀರೂ: ಎನ್‌ಸಿಎನಲ್ಲಿ ಸೋಮವಾರ ವೀರೇಂದ್ರ ಸೆಹ್ವಾಗ್, ಇಶಾಂತ್ ಶರ್ಮ, ಇರ್ಫಾನ್ ಪಠಾಣ್ ಹಾಗೂ ಆರ್.ಪಿ.ಸಿಂಗ್ ಕೂಡ ಕಾಣಿಸಿಕೊಂಡರು. ಇರ್ಫಾನ್ ಸ್ವಲ್ಪ ಹೊತ್ತು ಅಭ್ಯಾಸ ಕೂಡ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.