ADVERTISEMENT

ಡಬಲ್ಸ್‌ನಲ್ಲಿ ಗೆದ್ದ ಪೇಸ್-ಪುರವ

ಡೇವಿಸ್ ಕಪ್: ದಕ್ಷಿಣ ಕೊರಿಯಾ ವಿರುದ್ಧ ಗೆಲ್ಲಲು ಭಾರತಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2013, 19:59 IST
Last Updated 2 ಫೆಬ್ರುವರಿ 2013, 19:59 IST
ನವದೆಹಲಿಯಲ್ಲಿ ನಡೆಯುತ್ತಿರುವ ದಕ್ಷಿಣ ಕೊರಿಯಾ ವಿರುದ್ಧದ ಡೇವಿಸ್ ಕಪ್ ಟೆನಿಸ್ ಟೂರ್ನಿಯ ಡಬಲ್ಸ್ ಪಂದ್ಯದಲ್ಲಿ ಶನಿವಾರ ಗೆದ್ದ ಭಾರತದ ಲಿಯಾಂಡರ್ ಪೇಸ್ ಹಾಗೂ ಪುರವ ರಾಜಾ ಸಂಭ್ರಮಿಸಿದ ರೀತಿ
ನವದೆಹಲಿಯಲ್ಲಿ ನಡೆಯುತ್ತಿರುವ ದಕ್ಷಿಣ ಕೊರಿಯಾ ವಿರುದ್ಧದ ಡೇವಿಸ್ ಕಪ್ ಟೆನಿಸ್ ಟೂರ್ನಿಯ ಡಬಲ್ಸ್ ಪಂದ್ಯದಲ್ಲಿ ಶನಿವಾರ ಗೆದ್ದ ಭಾರತದ ಲಿಯಾಂಡರ್ ಪೇಸ್ ಹಾಗೂ ಪುರವ ರಾಜಾ ಸಂಭ್ರಮಿಸಿದ ರೀತಿ   

ನವದೆಹಲಿ (ಪಿಟಿಐ): ಅನುಭವಿ ಲಿಯಾಂಡರ್ ಪೇಸ್ ಹಾಗೂ ಯುವ ಆಟಗಾರ ಪುರವ ರಾಜಾ ಅವರು ಇಲ್ಲಿ ನಡೆಯುತ್ತಿರುವ ಡೇವಿಸ್ ಕಪ್ ಟೆನಿಸ್ ಟೂರ್ನಿಯಲ್ಲಿ ಭಾರತ ತಂಡದ ಆಸೆಯನ್ನು ಜೀವಂತವಾಗಿರಿಸಿದ್ದಾರೆ. ಏಕೆಂದರೆ ದಕ್ಷಿಣ ಕೊರಿಯಾ ವಿರುದ್ಧದ ಡಬಲ್ಸ್ ಹೋರಾಟದಲ್ಲಿ ಈ ಜೋಡಿ ಗೆಲುವು ಸಾಧಿಸಿದೆ. ಆ ಮೂಲಕ ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿದೆ.

ಆರ್.ಕೆ.ಖನ್ನಾ ಟೆನಿಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಏಷಿಯಾ ಒಸಿನಿಯಾ ಗುಂಪಿನ ಒಂದನೇ ಹಂತದ ಟೂರ್ನಿಯ ಡಬಲ್ಸ್ ಪಂದಲ್ಲಿ ಪೇಸ್ ಹಾಗೂ ಪುರವ 6-4, 7-5, 6-2ರಲ್ಲಿ ದಕ್ಷಿಣ ಕೊರಿಯಾದ ಜಿ ಸಂಗ್ ನಮ್-ಯೊಂಗ್ ಕ್ಯೂ ಲಿಮ್ ಎದುರು ಗೆದ್ದರು.

ಅಪಾರ ಅನುಭವ ಹೊಂದಿರುವ ಪೇಸ್ ಸಹ ಆಟಗಾರ ಪುರವಗೆ ಸ್ಫೂರ್ತಿ ತುಂಬಿದರು. ಭಾರತ ತಂಡ ಸ್ಪರ್ಧೆಯಲ್ಲಿ ಉಳಿಯಲು ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಆದರೆ ಈ ಜೋಡಿ ಆ ಒತ್ತಡವನ್ನು ಮೆಟ್ಟಿ ನಿಂತು ಆಡಿತು. ಈ ಹೋರಾಟ ಎರಡೂವರೆ ಗಂಟೆ ನಡೆಯಿತು.

ಬಂಡಾಯದಿಂದ ದೂರ ಉಳಿದಿರುವ ಪೇಸ್ ಈ ಮೂಲಕ ಭಾರತ ತಂಡಕ್ಕೆ ಆಧಾರಸ್ತಂಭವಾಗಿ ನಿಂತಿದ್ದಾರೆ. 40 ವರ್ಷ ವಯಸ್ಸಿನ ಸನಿಹದಲ್ಲಿರುವ ಅವರು ಅಮೋಘ ಪ್ರದರ್ಶನ ತೋರಿದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ಕೂಡ ಅವರು ಯುವ ಆಟಗಾರ ವಿಷ್ಣುವರ್ಧನ್ ಜೊತೆಗೂಡಿ ಆಡಿ ಗಮನ ಸೆಳೆದಿದ್ದರು.

ಮೊದಲ ಹಾಗೂ ಎರಡನೇ ಸೆಟ್‌ನಲ್ಲಿ ದಕ್ಷಿಣ ಕೊರಿಯಾ ಆಟಗಾರರಿಂದ ಕಠಿಣ ಪೈಪೋಟಿ ಮೂಡಿಬಂತು. ಆದರೆ ಅಂತಿಮ ಸೆಟ್‌ನಲ್ಲಿ ಭಾರತದ ಆಟಗಾರರ ಹಾದಿ ಸುಗಮವಾಯಿತು. ಒತ್ತಡಕ್ಕೆ ಒಳಗಾಗಿದ್ದ ಪ್ರವಾಸಿ ತಂಡದ ಜೋಡಿ ಸುಲಭವಾಗಿ ಸೆಟ್ ಕೈಚೆಲ್ಲಿತು.

ರಂಜಿತ್ ಮಲಿಕ್ ಹಾಗೂ ವಿಜಯಾಂತ್ ಮಲಿಕ್ ಅವರು ಭಾನುವಾರ ನಡೆಯಲಿರುವ ರಿವರ್ಸ್ ಸಿಂಗಲ್ಸ್ ಪಂದ್ಯದಲ್ಲಿ  ಕ್ರಮವಾಗಿ ಸುಕ್ ಯಂಗ್ ಜಿಯಾಂಗ್ (321ನೇ ರ‍್ಯಾಂಕ್) ಹಾಗೂ ಮಿನ್ ಯೇ ಹಿಯೋಕ್ ಚೊ ಎದುರು ಪೈಪೋಟಿ ನಡೆಸಲಿದ್ದಾರೆ. ಈ ಹೋರಾಟದಲ್ಲಿ ಗೆದ್ದರೆ ಭಾರತ ಡೇವಿಸ್ ಕಪ್ ಟೂರ್ನಿಯ ಎರಡನೇ ಹಂತಕ್ಕೆ ಮುನ್ನಡೆಯಲಿದೆ.

ಈಗಾಗಲೇ ರಂಜಿತ್ ಹಾಗೂ ಮಲಿಕ್ ಮೊದಲ ಸಿಂಗಲ್ಸ್ ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ರ‍್ಯಾಂಕ್ ಪಟ್ಟಿಯಲ್ಲಿ ಇಲ್ಲದ ಮಿನ್ ಯೇ ಹಿಯೋಕ್ ಚೊ ಎದುರು 517ನೇ ರ‍್ಯಾಂಕ್‌ನ ರಂಜಿತ್ ಪರಾಭವಗೊಂಡಿದ್ದರು. ಮತ್ತೊಂದು ಸಿಂಗಲ್ಸ್‌ನಲ್ಲಿ 321ನೇ ರ‍್ಯಾಂಕ್‌ನ ಸುಕ್ ಯಂಗ್ ಜಿಯಾಂಗ್ ಎದುರು ಮಲಿಕ್ ಸೋತಿದ್ದಾರೆ. ಈಗ ಆ ಸೇಡು ತೀರಿಸಿಕೊಳ್ಳಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.