ADVERTISEMENT

ಡೆವಿಲ್ಸ್‌ಗೆ ಮೊದಲ ಗೆಲುವಿನ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2011, 19:00 IST
Last Updated 17 ಏಪ್ರಿಲ್ 2011, 19:00 IST
ಡೆವಿಲ್ಸ್‌ಗೆ ಮೊದಲ ಗೆಲುವಿನ ಸಂಭ್ರಮ
ಡೆವಿಲ್ಸ್‌ಗೆ ಮೊದಲ ಗೆಲುವಿನ ಸಂಭ್ರಮ   

ಮುಂಬೈ (ಪಿಟಿಐ): ಬ್ಯಾಟ್ಸ್‌ಮನ್‌ಗಳ ಮೇಲಾಟ ಕಂಡುಬಂದ ಪಂದ್ಯದಲ್ಲಿ ಪುಣೆ ವಾರಿಯರ್ಸ್ ತಂಡವನ್ನು ಮೂರು ವಿಕೆಟ್‌ಗಳಿಂದ ಮಣಿಸಿದ ದೆಹಲಿ ಡೇರ್‌ಡೆವಿಲ್ಸ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಗೆಲುವಿನ ಸಿಹಿ ಅನುಭವಿಸಿತು.

ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಚಕ ಹೋರಾಟದಲ್ಲಿ ಒತ್ತಡವನ್ನು ಯಶಸ್ವಿಯಾಗಿ ಮೆಟ್ಟಿನಿಂತ ವೀರೇಂದ್ರ ಸೆಹ್ವಾಗ್ ಬಳಗ ಅಂತಿಮ ನಗು ಬೀರಿತು.
ಮೊದಲು ಬ್ಯಾಟ್ ಮಾಡಿದ ಯುವರಾಜ್ ಸಿಂಗ್ ನೇತೃತ್ವದ ಪುಣೆ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 187 ರನ್ ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ದೆಹಲಿ ತಂಡ ಕೆಲವೊಂದು ಆತಂಕದ ಕ್ಷಣಗಳನ್ನು ಎದುರಿಸಿತಾದರೂ, 19.2 ಓವರ್‌ಗಳಲ್ಲಿ 7 ವಿಕೆಟ್‌ಗೆ 190 ರನ್ ಗಳಿಸಿ ಜಯ ತನ್ನದಾಗಿಸಿತು.

ಪುಣೆ ತಂಡದ ನಾಯಕ ಯುವರಾಜ್ ಸಿಂಗ್ ಅವರ ಅದ್ಭುತ ಆಲ್‌ರೌಂಡ್ ಆಟ ವ್ಯರ್ಥವಾಯಿತು. ಮೊದಲು 32 ಎಸೆತಗಳಲ್ಲಿ 4 ಬೌಂಡರಿ ಹಾಗೂ ಐದು ಸಿಕ್ಸರ್‌ಗಳ ನೆರವಿನಿಂದ ಅಜೇಯ 66 ರನ್‌ಗಳಿಸಿದ ‘ಯುವಿ’ ಬಳಿಕ ಬೌಲಿಂಗ್‌ನಲ್ಲೂ ಕೈಚಳಕ ಪ್ರದರ್ಶಿಸಿದರು. ನಾಲ್ಕು ಓವರ್‌ಗಳಲ್ಲಿ 29 ರನ್ ನೀಡಿ 4 ವಿಕೆಟ್ ಕಿತ್ತರು. ಯುವರಾಜ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು.

ಕಠಿಣ ಗುರಿ ಬೆನ್ನಟ್ಟಿದ ದೆಹಲಿ ತಂಡಕ್ಕೆ ಡೇವಿಡ್ ವಾರ್ನರ್ (46, 28 ಎಸೆತ, 6 ಬೌಂ, 2 ಸಿಕ್ಸರ್) ಮತ್ತು ಸೆಹ್ವಾಗ್ (37, 23 ಎಸೆತ, 6 ಬೌಂ) ಅಬ್ಬರದ ಆರಂಭ ನೀಡಿದರು. ಇವರಿಬ್ಬರು   ಮೊದಲ ವಿಕೆಟ್‌ಗೆ 7 ಓವರ್‌ಗಳಲ್ಲಿ 75 ರನ್ ಕಲೆಹಾಕಿದರು. ದೆಹಲಿ ತಂಡ 13ನೇ ಓವರ್‌ನಲ್ಲಿ ಎರಡು ವಿಕೆಟ್‌ಗೆ 113 ರನ್ ಗಳಿಸಿತ್ತು.

ಈ ಹಂತದಲ್ಲಿ ಯುವರಾಜ್ ಅವರು ಸತತ ಎರಡು ಎಸೆತಗಳಲ್ಲಿ ಇರ್ಫಾನ್ ಪಠಾಣ್ ಮತ್ತು ನಮನ್ ಓಜಾ ಅವರ ವಿಕೆಟ್ ಪಡೆದರು. ಮ್ಯಾಥ್ಯೂ ವೇಡ್ ಕೂಡಾ ಔಟಾದ ಕಾರಣ ದೆಹಲಿ 120ಕ್ಕೆ 5 ವಿಕೆಟ್ ಕಳೆದುಕೊಂಡು ಸೋಲಿನ ಭೀತಿ ಎದುರಿಸಿತ್ತು. ಆದರೆ ವೈ. ವೇಣುಗೋಪಾಲ ರಾವ್ (31, 20 ಎಸೆತ, 1 ಬೌಂ, 3 ಸಿಕ್ಸರ್) ಮತ್ತು ಆ್ಯರೊನ್ ಫಿಂಚ್ (25, 12 ಎಸೆತ, 1 ಬೌಂ, 2 ಸಿಕ್ಸರ್) ಮಿಂಚಿನ ಅಟವಾಡಿ ಪಂದ್ಯದ ಚಿತ್ರಣವನ್ನೇ    ಬದಲಿಸಿದರು.

ದೆಹಲಿ ತಂಡದ ಗೆಲುವಿಗೆ ಕೊನೆಯ ಮೂರು ಓವರ್‌ಗಳಲ್ಲಿ 41 ರನ್‌ಗಳು ಬೇಕಿದ್ದವು. ಫಿಂಚ್ ಮತ್ತು ವೇಣುಗೋಪಾಲ ರಾವ್ ಹಾಗೂ ಜೇಮ್ಸ್ ಹೋಪ್ಸ್ (4 ಎಸೆತಗಳಲ್ಲಿ 13) ಅವರು ಅಬ್ಬರಿಸಿ ತಂಡದ ರೋಚಕ ಗೆಲುವಿಗೆ ಕಾರಣರಾದರು. ಯುವರಾಜ್ ಅವರಿಗೆ ಇತರ ಬೌಲರ್‌ಗಳಿಂದ ಹೆಚ್ಚಿನ ಬೆಂಬಲ ಲಭಿಸಲಿಲ್ಲ. ಈ ಕಾರಣ ಪುಣೆ ತಂಡದ ‘ಹ್ಯಾಟ್ರಿಕ್’ ಗೆಲುವಿನ ಕನಸು ಈಡೇರಲಿಲ್ಲ.

ರೈಡರ್, ಯುವಿ ಮಿಂಚು: ಪುಣೆ ತಂಡ ದೊಡ್ಡ ಮೊತ್ತ ಪೇರಿಸಲು ಕಾರಣರಾದದ್ದು ಯುವರಾಜ್ ಮತ್ತು ಜೆಸ್ಸಿ ರೈಡರ್ (60, 27 ಎಸೆತ, 5 ಬೌಂ, 5 ಸಿಕ್ಸರ್). ಗ್ರೇಮ್ ಸ್ಮಿತ್ ಜೊತೆ ಇನಿಂಗ್ಸ್ ಆರಂಭಿಸಿದ ರೈಡರ್ ಅಬ್ಬರದ ಆಟವಾಡಿದರು. ಗ್ರೇಮ್ ಸ್ಮಿತ್ (12) ಮತ್ತೆ ವಿಫಲರಾದರು. ಆದರೆ ರೈಡರ್ ಅವರು ಮಿಥುನ್ ಮನ್ಹಾಸ್ (18 ಎಸೆತಗಳಲ್ಲಿ 20) ಜೊತೆ ಎರಡನೇ ವಿಕೆಟ್‌ಗೆ 54 ರನ್‌ಗಳನ್ನು ಸೇರಿಸಿದರು. ಮೊದಲ 10 ಓವರ್‌ಗಳಲ್ಲಿ ತಂಡ 98 ರನ್ ಪೇರಿಸಿತ್ತು.

ರೈಡರ್ ಔಟಾದ ಬಳಿಕ ಯುವರಾಜ್ ಆಕ್ರಮಣಕಾರಿ ಆಟಕ್ಕಿಳಿದರು. ಅವರ ಬಿರುಸಿನ ಆಟದ ನೆರವಿನಿಂದ ಕೊನೆಯ ಐದು ಓವರ್‌ಗಳಲ್ಲಿ ಪುಣೆ ತಂಡ 59 ರನ್‌ಗಳನ್ನು ಕಲೆಹಾಕಿತು. ಅಶೋಕ್ ದಿಂಡಾ ಎಸೆದ ಅಂತಿಮ ಓವರ್‌ನಲ್ಲಿ ಯುವರಾಜ್ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿದರು. ಈ ಓವರ್‌ನಲ್ಲಿ ಒಟ್ಟು 26 ರನ್‌ಗಳು ಬಂದವು. ದೆಹಲಿ ತಂಡದ ಅಶೋಕ್ ದಿಂಡಾ ಮತ್ತು ಶಾಬಾಜ್ ನದೀಮ್ ತಲಾ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಸ್ಕೋರು ವಿವರ
ಪುಣೆ ವಾರಿಯರ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 187
ಜೆಸ್ಸಿ ರೈಡರ್ ಸಿ ಫಿಂಚ್ ಬಿ ಶಾಬಾಜ್ ನದೀಮ್  60
ಗ್ರೇಮ್ ಸ್ಮಿತ್ ಸಿ ಪಠಾಣ್ ಬಿ ಅಶೋಕ್ ದಿಂಡಾ  12
ಮಿಥುನ್ ಮನ್ಹಾಸ್ ಸಿ ವಾರ್ನರ್ ಬಿ ಜೇಮ್ಸ್ ಹೋಪ್ಸ್  20
ಯುವರಾಜ್ ಸಿಂಗ್ ಔಟಾಗದೆ  66
ರಾಬಿನ್ ಉತ್ತಪ್ಪ ಸಿ ವಾರ್ನರ್ ಬಿ ಶಾಬಾಜ್ ನದೀಮ್  04
ಮೋನಿಶ್ ಮಿಶ್ರಾ ಸಿ ಸೆಹ್ವಾಗ್ ಬಿ ಅಶೋಕ್ ದಿಂಡಾ  07
ವೇಯ್ನಾ ಪಾರ್ನೆಲ್ ಔಟಾಗದೆ  10
ಇತರೆ: (ಬೈ-1, ಲೆಗ್‌ಬೈ-1, ವೈಡ್-5, ನೋಬಾಲ್-1)  08
ವಿಕೆಟ್ ಪತನ: 1-28 (ಸ್ಮಿತ್; 3.6), 2-82 (ಮನ್ಹಾಸ್; 8.3), 3-98 (ರೈಡರ್; 9.6), 4-117 (ರಾಬಿನ್ ಉತ್ತಪ್ಪ; 13.3), 5-146 (ಮಿಶ್ರಾ; 17.2)
ಬೌಲಿಂಗ್: ವೈ ವೇಣುಗೋಪಾಲ ರಾವ್ 1-0-14-0, ಅಶೋಕ್ ದಿಂಡಾ 4-0-42-2, ಇರ್ಫಾನ್ ಪಠಾಣ್ 3-0-28-0, ಉಮೇಶ್ ಯಾದವ್ 4-0-36-0, ಜೇಮ್ಸ್ ಹೋಪ್ಸ್ 4-0-26-1, ಶಾಬಾಜ್ ನದೀಮ್ 4-0-39-2

ದೆಹಲಿ ಡೇರ್‌ಡೆವಿಲ್ಸ್: 19.2 ಓವರ್‌ಗಳಲ್ಲಿ 7 ವಿಕೆಟ್‌ಗೆ 190
ಡೇವಿಡ್ ವಾರ್ನರ್ ರನೌಟ್  46
ವೀರೇಂದ್ರ ಸೆಹ್ವಾಗ್ ಬಿ ಜೆಸ್ಸಿ ರೈಡರ್  37
ಇರ್ಫಾನ್ ಪಠಾಣ್ ಸಿ ವಾಗ್ ಬಿ ಯುವರಾಜ್ ಸಿಂಗ್  14
ನಮನ್ ಓಜಾ ಸ್ಟಂಪ್ ಉತ್ತಪ್ಪ ಬಿ ಯುವರಾಜ್ ಸಿಂಗ್  11
ಮ್ಯಾಥ್ಯೂ ವೇಡ್ ಎಲ್‌ಬಿಡಬ್ಲ್ಯು ಬಿ ರಾಹುಲ್ ಶರ್ಮಾ  03
ವೇಣುಗೋಪಾಲ ರಾವ್ ಸಿ ಜುಂಜುನ್‌ವಾಲ ಬಿ ಯುವರಾಜ್ ಸಿಂಗ್  31
ಆ್ಯರೊನ್ ಫಿಂಚ್ ಸಿ ಮತ್ತು ಬಿ ಯುವರಾಜ್ ಸಿಂಗ್  25
ಜೇಮ್ಸ್ ಹೋಪ್ಸ್ ಔಟಾಗದೆ  13
ಶಾಬಾಜ್ ನದೀಮ್ ಔಟಾಗದೆ  00
ಇತರೆ: (ಬೈ-1, ವೈಡ್-9)  10
ವಿಕೆಟ್ ಪತನ: 1-75 (ವಾರ್ನರ್; 6.6), 2-97 (ಸೆಹ್ವಾಗ್; 9.5), 3-116 (ಪಠಾಣ್; 12.3), 4-116 (ಓಜಾ; 12.4), 5-120 (ವೇಡ್; 13.6), 6-167 (ಫಿಂಚ್; 18.1), 7-180 (ವೇಣುಗೋಪಾಲ ರಾವ್; 18.6)
ಬೌಲಿಂಗ್: ಅಲ್ಫೊನ್ಸೊ ಥಾಮಸ್ 2-0-22-0, ಶ್ರೀಕಾಂತ್ ವಾಗ್ 3-0-38-0, ವೇಯ್ನೊ ಪಾರ್ನೆಲ್ 2-0-26-0, ರಾಹುಲ್ ಶರ್ಮಾ 4-0-29-1, ಜೆಸ್ಸಿ ರೈಡರ್ 3.2-0-34-1, ಅಭಿಷೇಕ್ ಜುನ್‌ಜುನ್‌ವಾಲ 1-0-11-0, ಯುವರಾಜ್ ಸಿಂಗ್ 4-0-29-4
ಫಲಿತಾಂಶ: ದೆಹಲಿ ಡೇರ್‌ಡೆವಿಲ್ಸ್‌ಗೆ 3 ವಿಕೆಟ್ ಜಯ
ಪಂದ್ಯಶ್ರೇಷ್ಠ: ಯುವರಾಜ್ ಸಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.