ADVERTISEMENT

ಡ್ರಾ ಪಂದ್ಯದಲ್ಲಿ ಆನಂದ್

​ಪ್ರಜಾವಾಣಿ ವಾರ್ತೆ
Published 11 ಮೇ 2012, 19:30 IST
Last Updated 11 ಮೇ 2012, 19:30 IST

ಮಾಸ್ಕೊ (ಪಿಟಿಐ): ಭಾರತದ ವಿಶ್ವನಾಥನ್ ಆನಂದ್ ಶುಕ್ರವಾರ ಇಲ್ಲಿ ಆರಂಭವಾದ ಇಸ್ರೇಲ್‌ನ ಬೋರಿಸ್ ಗೆಲ್ಫಾಂಡ್ ವಿರುದ್ಧದ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿದ್ದಾರೆ.

ಟ್ರೆತ್ಯಾಕೋವ್ ಗ್ಯಾಲರಿಯಲ್ಲಿ ನಡೆದ ಈ ಪಂದ್ಯದಲ್ಲಿ ಗೆಲ್ಫಾಂಡ್ ರಕ್ಷಣಾತ್ಮಕ ಆಟಕ್ಕೆ ಮುಂದಾದ ಕಾರಣ ಚಾಂಪಿಯನ್ ಆನಂದ್‌ಗೆ ಡ್ರಾ ಬಿಟ್ಟು ಬೇರೆ ಹಾದಿಯೇ ಇರಲಿಲ್ಲ. ಜೊತೆಗೆ ಗೆಲ್ಫಾಂಡ್ ಈ ಪಂದ್ಯದಲ್ಲಿ ಅಚ್ಚರಿ ನಡೆ ಇಟ್ಟಿದ್ದು ಭಾರತದ ಆಟಗಾರನ ಗೆಲುವಿನ ಶುಭಾರಂಭಕ್ಕೆ ಅಡ್ಡಿಯಾಯಿತು.

ತಮ್ಮ ಫೇವರಿಟ್ ಬಿಳಿಯ ಕಾಯಿಗಳಿಂದ ಆಡಿದರೂ ವಿಶಿಗೆ ಸಕಾರಾತ್ಮಕ ಫಲಿತಾಂಶ ಪಡೆಯಲು ಸಾಧ್ಯವಾಗಲಿಲ್ಲ. ಹಾಗಾಗಿ 24ನೇ ನಡೆಯ ಅಂತ್ಯಕ್ಕೆ ಉಭಯ ಆಟಗಾರರು ಡ್ರಾ ಮಾಡಿಕೊಳ್ಳಲು ಸಮ್ಮತಿ ಸೂಚಿಸಿದರು. ಈ ಕಾರಣ ಇವರಿಬ್ಬರು ಪಾಯಿಂಟ್ ಹಂಚಿಕೊಳ್ಳಬೇಕಾಯಿತು.

ಈ ಚಾಂಪಿಯನ್‌ಷಿಪ್‌ನಲ್ಲಿ ಆನಂದ್ ಹಾಗೂ ಗೆಲ್ಫಾಂಡ್ ಒಟ್ಟು 12 ಪಂದ್ಯಗಳಲ್ಲಿ ಪೈಪೋಟಿ ನಡೆಸಲಿದ್ದಾರೆ. ಪಾಯಿಂಟ್‌ನಲ್ಲಿ ಸಮಬಲ ಸಾಧಿಸಿದರೆ ಟೈಬ್ರೇಕರ್ ಮೊರೆ ಹೋಗಲಾಗುವುದು. ಇದು 13.5 ಕೋಟಿ ರೂ. ಮೊತ್ತದ ಬಹುಮಾನ ಹೊಂದಿದೆ. ಚಾಂಪಿಯನ್ ಆದವರು ಶೇ.60ರಷ್ಟು ಹಣ ಪಡೆಯಲಿದ್ದಾರೆ.
ಆನಂದ್ ಪಾಲಿಗೆ ಇದು ಐದನೇ ವಿಶ್ವ ಚಾಂಪಿಯನ್‌ಷಿಪ್ ಆಗಿದೆ.

ಈಗಾಗಲೇ ಆನಂದ್ ಎಲ್ಲಾ ಮಾದರಿಯ ಚಾಂಪಿಯನ್‌ಷಿಪ್‌ಗಳಲ್ಲಿ ಗೆದ್ದಿದ್ದಾರೆ. 2010ರಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ವೆಸೆಲಿನ್ ಟೊಪಲೊವ್ ಅವರನ್ನು ಮಣಿಸಿ ಆನಂದ್ ಚಾಂಪಿಯನ್ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.