ADVERTISEMENT

ಡ್ರೆಸ್ಸಿಂಗ್ ಕೊಠಡಿಯ ಬಾಗಿಲು ಮುರಿದ ವಲ್ತಾಟಿ!

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಐಪಿಎಲ್ ಕ್ರಿಕೆಟ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಾಲ್ ವಲ್ತಾಟಿ ಡ್ರೆಸ್ಸಿಂಗ್ ಕೊಠಡಿಯ ಬಾಗಿಲು ಮುರಿದಿದ್ದಾರೆ. ಆದ್ದರಿಂದ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಅವರಿಗೆ ದೂರು ನೀಡಿದೆ.

ಪುಣೆ ವಾರಿಯರ್ಸ್ ವಿರುದ್ಧದ ಈ ಪಂದ್ಯದಲ್ಲಿ `ಪಂಜಾಬ್ ತಂಡದ ನಾಯಕ ಆ್ಯಡಮ್ ಗಿಲ್‌ಕ್ರಿಸ್ಟ್ ಡ್ರೆಸ್ಸಿಂಗ್ ಕೊಠಡಿಯ ಬಾಗಿಲು ಮುರಿದಿದ್ದಾರೆ~ ಎಂದು ಮೊದಲು ಎಂಸಿಎ ಮೂಲಗಳು ತಿಳಿಸಿದ್ದವು. ಅವರು ಈ ಪಂದ್ಯದಲ್ಲಿ ಕೇವಲ ಆರು ರನ್‌ಗೆ ಔಟಾಗಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶುಕ್ಲಾ ಪಂದ್ಯದ ರೆಫರಿಗೆ ತಿಳಿಸಿದ್ದರು. ಆದರೆ, ಪ್ರಾಥಮಿಕ ತನಿಖೆಯ  ನಂತರ ಈ ಘಟನೆಗೆ ಕಾರಣವಾಗಿದ್ದು, ಗಿಲ್‌ಕ್ರಿಸ್ಟ್ ಅಲ್ಲ, ವಲ್ತಾಟಿ ಎಂಬುದು ಗೊತ್ತಾಗಿದೆ ಎಂದು ಐಪಿಎಲ್ ಮೂಲಗಳು ಹೇಳಿವೆ. ವಲ್ತಾಟಿ ಸಹ ಈ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿದ್ದರು.

ಪುಣೆಯಲ್ಲಿ ನಡೆದ ಈ ಪಂದ್ಯದಲ್ಲಿ ಪಂಜಾಬ್ 22 ರನ್‌ಗಳ ಸೋಲು ಅನುಭವಿಸಿತ್ತು. ಈ ಘಟನೆ ಆಕಸ್ಮಿಕ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.