ಚೆನ್ನೈ: ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್ ಬಳಿಕ ನಾಯಕತ್ವ ತ್ಯಜಿಸಲು ನಾನು ಮಾಡಿರುವ ನಿರ್ಧಾರ ಈಗ ತಂಡದ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ ಎಂದು ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ನುಡಿದಿದ್ದಾರೆ. 22ನೇ ವಯಸ್ಸಿಗೆ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸಿಕೊಂಡಿದ್ದ ಸ್ಮಿತ್ ವಿಶ್ವಕಪ್ ಬಳಿಕ ಕೆಳಗಿಳಿಯುವುದಾಗಿ ತಿಳಿಸಿದ್ದರು. ಎಂಟು ವರ್ಷಗಳಿಂದ ಅವರು ತಂಡದ ನಾಯಕರಾಗಿದ್ದಾರೆ.
‘ನನ್ನ ನಿರ್ಧಾರ ತಂಡದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಎಲ್ಲವೂ ಸುಗಮವಾಗಿ ಸಾಗುತ್ತಿದೆ. ನಾಯಕತ್ವ ತ್ಯಜಿಸುವುದು ನನ್ನ ವೈಯಕ್ತಿಕ ನಿರ್ಧಾರ. ಇಷ್ಟು ವರ್ಷ ತಂಡದ ನಾಯಕತ್ವ ವಹಿಸಿಕೊಂಡ ನಾನೇ ಅದೃಷ್ಟವಂತ. ಶ್ರೇಷ್ಠ ಆಟಗಾರರಿರುವ ತಂಡವನ್ನು ಮುನ್ನಡೆಸಿದ್ದೇನೆ’ ಎಂದು ಸ್ಮಿತ್ ಹೇಳಿದ್ದಾರೆ. ಆದರೆ ಸ್ಮಿತ್ ಈ ಚಾಂಪಿಯನ್‌ಷಿಪ್‌ನಲ್ಲಿ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಸ್ಕೋರ್ ಗಳಿಸಲು ವಿಫಲರಾಗಿದ್ದಾರೆ. ‘ಉತ್ತಮ ಆರಂಭ ಸಿಕ್ಕಿದೆ. ಆದರೆ ಅದನ್ನು ದೊಡ್ಡ ಮೊತ್ತವನ್ನಾಗಿ ಮಾರ್ಪಡಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಮುಂದೆ ಪ್ರಮುಖ ಪಂದ್ಯಗಳಿವೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಭಾನುವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದ ಬಗ್ಗೆ ಮಾತನಾಡಿದ ಅವರು, ‘ಆ ತಂಡ ಯಾವುದೇ ಸಂದರ್ಭದಲ್ಲಿ ಪುಟಿದೇಳುವ ಸಾಮರ್ಥ್ಯ ಹೊಂದಿದೆ. ಐರ್ಲೆಂಡ್ ವಿರುದ್ಧ ಸೋಲು ಕಂಡ ಮಾತ್ರಕ್ಕೆ ನಾವು ಅವರನ್ನು ಸುಲಭವಾಗಿ ಪರಿಗಣಿಸಬಾರದು. ಆ ಸೋಲಿನ ನೋವು ಆ ತಂಡದಲ್ಲಿ ಮತ್ತಷ್ಟು ರೋಷ ತುಂಬಿರಬಹುದು. ಆದರೆ ಯಾವುದೇ ತಂಡ ಈ ರೀತಿ ಏರುಪೇರು ಕಾಣುವುದು ಸಹಜ’ ಎಂದರು.
ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಬಗ್ಗೆ ಪ್ರತಿಕ್ರಿಯಿಸಿದ ಸ್ಮಿತ್, ‘ತಾಹಿರ್ ಒಬ್ಬ ಪ್ರತಿಭಾವಂತ ಸ್ಪಿನ್ನರ್. ಅವರು ಈಗ ತಂಡದಲ್ಲಿರುವುದರಿಂದ ನಮ್ಮಲ್ಲಿ ತುಂಬಾ ಆಯ್ಕೆಗಳಿವೆ’ ಎಂದು ಹೇಳಿದರು. ‘ವಿಶ್ವಕಪ್‌ನಲ್ಲಿ 300ಕ್ಕೂ ಅಧಿಕ ರನ್ ಗಳಿಸಿದರೂ ಅದನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವುದು ನಿಜ. ಪ್ರತಿ ಪಿಚ್‌ಗಳು ವಿಭಿನ್ನವಾಗಿವೆ. ಬೆಂಗಳೂರಿನ ಪಿಚ್ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿದೆ’ ಎಂದರು.
‘ಸ್ಮಿತ್ ಪಡೆ ನಮ್ಮನ್ನು ಲಘುವಾಗಿ ಪರಿಗಣಿಸಲಿ’: ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ನಾವು ಸೋಲು ಕಂಡಿರುವುದರಿಂದ ದಕ್ಷಿಣ ಆಫ್ರಿಕಾ ತಂಡದವರು ನಮ್ಮನ್ನು ಲಘುವಾಗಿ ಪರಿಗಣಿಸಬಹುದು. ಹಾಗೇ ತೀರ್ಮಾನಿಸಿ ಅವರು ಆಡಲು ಇಳಿದರೆ ಅದು ನಮಗೆ ಒಳ್ಳೆಯದು ಎಂದು ಇಂಗ್ಲೆಂಡ್ ತಂಡದ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ತಿಳಿಸಿದ್ದಾರೆ. ‘ಹಿಂದೆ ನಾವು ಅತ್ಯುತ್ತಮ ಪ್ರದರ್ಶನ ನೀಡಿದ ಉದಾಹರಣೆ ಇದೆ. ಒಮ್ಮೊಮ್ಮೆ ಕೆಟ್ಟ ಪ್ರದರ್ಶನ ತೋರಿ ಮತ್ತೆ ತಿರುಗಿಬಿದ್ದ ನಿದರ್ಶನವಿದೆ.
ಈಗ ಐರ್ಲೆಂಡ್ ವಿರುದ್ಧ ಸೋತಿರುವುದರಿಂದ ನಮ್ಮನ್ನು ದಕ್ಷಿಣ ಆಫ್ರಿಕಾ ತಂಡದವರು ಲಘುವಾಗಿ ಪರಿಗಣಿಸಲಿ’ ಎಂದು ಅವರು ನುಡಿದಿದ್ದಾರೆ. ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಗ್ರೇಮ್ ಸ್ಮಿತ್ ಪಡೆ ವಿರುದ್ಧ ಭಾನುವಾರ ಆಡಲು ಕಣಕ್ಕಿಳಿಯಲಿರುವ ಇಂಗ್ಲಿಷ್ ಆಟಗಾರರಿಗೆ ಈಗ ಬೌಲಿಂಗ್‌ನದ್ದೇ ದೊಡ್ಡ ಸಮಸ್ಯೆಯಾಗಿದೆ. ಆಡಿದ ಮೂರೂ ಪಂದ್ಯಗಳಲ್ಲಿ ಈ ಬೌಲರ್‌ಗಳು ದುಬಾರಿಯಾಗಿದ್ದಾರೆ.
ಇಂಗ್ಲೆಂಡ್
ಆ್ಯಂಡ್ರ್ಯೂ ಸ್ಟ್ರಾಸ್ (ನಾಯಕ), ಕೆವಿನ್ ಪೀಟರ್‌ಸನ್, ಜೊನಾಥನ್ ಟ್ರಾಟ್, ಇಯಾನ್ ಬೆಲ್, ರವಿ ಬೋಪಾರ, ಪಾಲ್ ಕಾಲಿಂಗ್‌ವುಡ್, ಮ್ಯಾಟ್ ಪ್ರಿಯೊರ್, ಟಿಮ್ ಬ್ರೆಸ್ನನ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್‌ಸನ್, ಗ್ರೇಮ್ ಸ್ವಾನ್, ಅಜ್ಮಲ್ ಶಹ್ಜಾದ್, ಲ್ಯೂಕ್ ರೈಟ್, ಮೈಕಲ್ ಯಾರ್ಡಿ ಹಾಗೂ ಜೇಮ್ಸ್ ಟ್ರೆಡ್‌ವೆಲ್.
ದಕ್ಷಿಣ ಆಫ್ರಿಕಾ
ಗ್ರೇಮ್ ಸ್ಮಿತ್ (ನಾಯಕ), ಹಾಶಿಮ್ ಆಮ್ಲಾ, ಜಾಕ್ ಕಾಲಿಸ್, ಜೋಹಾನ್ ಬೋಥಾ, ಎಬಿ ಡಿವಿಲಿಯರ್ಸ್, ಜೀನ್ ಪಾಲ್ ಡುಮಿನಿ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಕಾಲಿನ್ ಇನ್‌ಗ್ರಾಮ್, ಜಾಕ್ ಕಾಲಿಸ್, ಮಾರ್ನ್ ಮಾರ್ಕೆಲ್, ವೇಯ್ನಾ ಪಾರ್ನೆಲ್, ರಾಬಿನ್ ಪೀಟರ್‌ಸನ್, ಡೇಲ್ ಸ್ಟೇನ್, ಲೊನ್‌ವಾಬೊ ತ್ಸೊತ್ಸೊಬೆ ಹಾಗೂ ಮಾರ್ನ್ ವಾನ್ ವಿಕ್.
ಅಂಪೈರ್‌ಗಳು: ಸೈಮನ್ ಟಫೆಲ್ ಹಾಗೂ ಅಮೀಶ್ ಸಾಹೇಬಾ. ಮೂರನೇ ಅಂಪೈರ್: ಅಶೋಕ ಡಿ ಸಿಲ್ವಾ. ಮ್ಯಾಚ್ ರೆಫರಿ: ಜೆಫ್ ಕ್ರೋವ್
ಪಂದ್ಯ ಆರಂಭ: ಬೆಳಿಗ್ಗೆ 9.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.