ಹೈದರಾಬಾದ್ (ಪಿಟಿಐ/ಐಎಎನ್‌ಎಸ್): `ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದು 2016ರಲ್ಲಿ ಬ್ರೆಜಿಲ್‌ನ ರಯೋ ಡಿ ಜನೈರೊನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಮತ್ತಷ್ಟು ಉತ್ತಮ ಸಾಧನೆ ಮಾಡಲು ಸ್ಫೂರ್ತಿಯಾಗಲಿದೆ. ಆ ಒಲಿಂಪಿಕ್ಸ್‌ನಲ್ಲಿ ನಾನು ಚಿನ್ನದ ಪದಕ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇನೆ~ ಎಂದು ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ನುಡಿದಿದ್ದಾರೆ.
ಮಂಗಳವಾರ ತವರಿಗೆ ಆಗಮಿಸಿದ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ಅವರು ಬೆಳಿಗ್ಗೆ ನವದೆಹಲಿಗೆ ಆಗಮಿಸಿದರು. ಅಲ್ಲಿಂದ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಎರಡನೇ ಮಹಿಳೆ ಎನಿಸಿರುವ ಸೈನಾ ಜೊತೆ ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ, ಪಿ.ಕಶ್ಯಪ್ ಹಾಗೂ ಕೋಚ್ ಪಿ. ಗೋಪಿಚಂದ್ ಕೂಡ ಇದ್ದರು. ಬಳಿಕ ಸೈನಾ ಅವರನ್ನು ಸನ್ಮಾನಿಸಲಾಯಿತು.
ಸೈನಾ ನೆಹ್ವಾಲ್ ಅವರ ಈ ಸಾಧನೆ ಅದ್ಭುತ. ಅವರ ಈ ಸಾಧನೆಯಿಂದ ನನ್ನ ಬಹುದಿನಗಳ ಕನಸೊಂದು ನನಸಾಗಿದೆ. ಏಕೆಂದರೆ ನಾನು ಆಟಗಾರರಾಗಿ ಎಲ್ಲಾ ರೀತಿಯ ಸಾಧನೆ ಮಾಡಿದ್ದೆ. ಆದರೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಕೋಚ್ ಆಗಿ ಆ ಗೌರವ ನನಗೆ ಈಗ ಒಲಿದಿದೆ. ಈ ಕಾರಣ ನಾನೀಗ ಪರಿಪೂರ್ಣ ವ್ಯಕ್ತಿ -ಪಿ.ಗೋಪಿಚಂದ್ |
`ಈ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ. ಪದಕ ಗೆಲ್ಲುವ ನಂಬಿಕೆಯೊಂದಿಗೆ ನಾನು ಲಂಡನ್‌ಗೆ ತೆರಳಿದ್ದೆ. ಆ ನಂಬಿಕೆಯನ್ನು ಉಳಿಸಿಕೊಂಡು ಯಶಸ್ವಿಯಾಗಿದ್ದೇನೆ. ಒಲಿಂಪಿಕ್ಸ್‌ನಲ್ಲಿ ಒಂದು ದಿನ ಪದಕ ಗೆಲ್ಲಬೇಕು ಎಂಬ ಉದ್ದೇಶ ಇಟ್ಟುಕೊಂಡೇ ನಾನು 9 ವರ್ಷ ವಯಸ್ಸಿನಲ್ಲಿ ಬ್ಯಾಡ್ಮಿಂಟನ್ ಶುರು ಮಾಡಿದ್ದೆ~ ಎಂದು ವಿಶ್ವ ಐದನೇ ರ‌್ಯಾಂಕ್‌ನ ಆಟಗಾರ್ತಿ ನೆಹ್ವಾಲ್ ಹೇಳಿದರು.
`ಈ ವರ್ಷ ನಾನು ಅಗ್ರಮಾನ್ಯ ಆಟಗಾರ್ತಿಯರನ್ನು ಮಣಿಸಿದ್ದೇನೆ. ಉತ್ತಮ ಫಾರ್ಮ್‌ನಲ್ಲಿ ಕೂಡ ಇದ್ದೆ. ಇಂಡೊನೇಷ್ಯಾದಲ್ಲಿ ನಾನು ಚೀನಾದ ಲಿ ಕ್ಸುಯೇರುಯಿ ಅವರನ್ನು ಮಣಿಸಿದ್ದೆ. ಆದರೆ ಕ್ಸುಯೇರುಯಿ ಲಂಡನ್‌ನಲ್ಲಿ ವಾಂಗ್ ಯಿಹಾನ್ ಅವರನ್ನು ಸೋಲಿಸಿ ಚಿನ್ನ ಗೆದ್ದರು. ಈ ಎಲ್ಲಾ ಕಾರಣದಿಂದ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ನನಗೂ ಅವಕಾಶವಿದೆ ಎಂಬ ವಿಷಯ ನನ್ನ ಮನಸ್ಸಿನಲ್ಲಿತ್ತು~ ಎಂದು 22 ವರ್ಷ ವಯಸ್ಸಿನ ಸೈನಾ ತಿಳಿಸಿದರು.
ಲಂಡನ್‌ನ ವಿಜಯ ವೇದಿಕೆ ಮೇಲೆ ನಿಂತಾಗ ಆದ ಅನುಭವದ ಬಗ್ಗೆ ಪ್ರತಿಕ್ರಿಯಿಸಿದ ನೆಹ್ವಾಲ್, `ಇದೊಂದು ನಂಬಲಾಗದ ಅನುಭವ. ಒಮ್ಮೆಲೇ ಭಾವುಕಳಾದೆ. ಇಷ್ಟು ವರ್ಷಗಳ ಕಠಿಣ ಅಭ್ಯಾಸ ಹಾಗೂ ಕಠಿಣ ಪ್ರಯತ್ನ ಹಾಕಿದ್ದರ ಬಗ್ಗೆ ನಾನು ಯೋಚಿಸಿದೆ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.