ದಾವಣಗೆರೆ: ಮೂರು ಸೆಟ್‌ಗಳ ಸೆಣಸಾಟದಲ್ಲಿ ಎರಡನೇ ಶ್ರೇಯಾಂಕದ ತ್ರಿಶಾ ಹೆಗ್ಡೆ ಮೇಲೆ ಅನಿರೀಕ್ಷಿತ ಜಯಪಡೆದ ಬೆಂಗಳೂರಿನ ಮೇಧಾ ಶಶಿಧರನ್, `ಲಿ-ನಿಂಗ್ 5 ಸ್ಟಾರ್' ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ 13 ವರ್ಷದೊಳಗಿನವರ ಸಿಂಗಲ್ಸ್ ಸೆಮಿಫೈನಲ್ ಪ್ರವೇಶಿಸಿದಳು.
ನಗರದ ಸುಭಾಷ್‌ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಮೇಧಾ ಶಶಿಧರನ್ 12-21, 21-19, 21-16ರಿಂದ ಜಯಗಳಿಸಿದಳು. ಆದರೆ ಇತರ ಶ್ರೇಯಾಂಕ ಆಟಗಾರ್ತಿಯರು ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸಿದರು.
ಅಗ್ರಶ್ರೇಯಾಂಕದ ಶಿವಾನಿ ಎ.ಪತಿ 21-9, 21-15ರಿಂದ ಕೀರ್ತನಾ ವಿರುದ್ಧ ಅನಾಯಾಸ ಗೆಲುವು ಸಾಧಿಸಿದರೆ, ಡಿ.ಶೀತಲ್ 21-11, 21-6ರಿಂದ ದೀತ್ಯಾ ಜಗದೀಶ್ ವಿರುದ್ಧ; ಧ್ರುತಿ ಯತೀಶ್ 21-13, 21-11ರಿಂದ ಪ್ರಾರ್ಥನಾ ವಾಸುದೇವನ್ ವಿರುದ್ಧ ಸುಲಭ ಜಯ ಗಳಿಸಿದರು.
ಅಪೇಕ್ಷಾ, ಅರ್ಚನಾ ಮುನ್ನಡೆ:17 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಅಗ್ರ ಶ್ರೇಯಾಂಕದ ಅಪೇಕ್ಷಾ ನಾಯಕ್ 21-12, 21-17ರಿಂದ ರೀನು ತಿರುಮಲ್ ವಿರುದ್ಧ; ಐದನೇ ಶ್ರೇಯಾಂಕದ ಶಿಖಾ ಗೌತಮ್ 21-10, 21-11ರಿಂದ ಆರ್.ಎನ್.ಸವಿತಾ ವಿರುದ್ಧ; ದ್ವಿತೀಯ ಶ್ರೇಯಾಂಕದ ಅರ್ಚನಾ ಪೈ 21-11, 21-11ರಿಂದ ಎಂಟನೇ ಶ್ರೇಯಾಂಕದ ಸರಯೂ ವ್ಯಾಕರಣಂ ವಿರುದ್ಧ ಗೆಲುವು ಸಾಧಿಸಿದರು.
ಸೈಯ್ಯದ್ ಅಲಿ ನಿರ್ಗಮನ: 17 ವರ್ಷದೊಳಗಿನವರ ಬಾಲಕರ ವಿಭಾಗದ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 2ನೇಶ್ರೇಯಾಂಕದ ಸೈಯದ್ ಎಸ್.ಅಲಿ ಆಘಾತ ಅನುಭವಿಸಿದನು. ತೀವ್ರ ಹೋರಾಟದ ಪಂದ್ಯದಲ್ಲಿ ಅಲಿ, ಅಕ್ಷಯ್ ಶ್ರೀನಿವಾಸ್ ಎದುರು 20-22, 19-21ರಲ್ಲಿ ಮಣಿದರು.
ಫಲಿತಾಂಶಗಳು: 13 ವರ್ಷದೊಳಗಿನವರ ವಿಭಾಗದ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಸಿ.ಎಸ್.ಸಾಕೇತ್ 21-19, 21-17ರಿಂದ ವಿ.ಶಶಾಂಕ್ ರೆಡ್ಡಿ ವಿರುದ್ಧ ಜಯಗಳಿಸಿದ. ಅಗ್ರ ಶ್ರೇಯಾಂಕದ ಕಾರ್ತಿಕ್ ವ್ಯಾಕರಣಂ, ಪ್ರಥ್ವಿ ಕೆ.ರಾಯ್, ಶ್ರೀಕರ್ ರಾಜೇಶ್, ಆರನೇ ಶ್ರೇಯಾಂಕದ ಅಜಿಂಕ್ಯ ಜೋಶಿ, ಶಾಮದೀಪ್ ಮಂಡಲ್, ಬೆಳಗಾವಿಯ ತೇಜಸ್ ಸಂಜಯ್ ಕಲ್ಲೋಳಕರ ಮತ್ತು ನರೇನ್ ಶಂಕರ್ ಅಯ್ಯರ್ ಎಂಟರ ಘಟ್ಟ ತಲುಪಿದರು.
15 ವರ್ಷದೊಳಗಿನವರ ವಿಭಾಗದಲ್ಲಿ ಸೈಫ್ ಅಲಿ 21-12, 22-20ರಿಂದ 4ನೇ ಶ್ರೇಯಾಂಕದ ನಿಖಿಲ್ ಶ್ಯಾಮ್‌ಶ್ರೀರಾಮ್ ವಿರುದ್ಧ ಗೆಲುವು ದಾಖಲಿಸಿದರು. ಉಳಿದಂತೆ ಅಗ್ರ ಶ್ರೇಯಾಂಕದ ಬಿ.ಎಂ.ರಾಹುಲ್ ಭಾರದ್ವಾಜ್, ಕೆವಿನ್ ಎಂ.ಎಲ್, ರೋಹನ್ ಕಾಮತ್, ಕೆ.ಸಾಯಿ ಪ್ರತೀಕ್, ಐದನೇ ಶ್ರೇಯಾಂಕದ ಅಕ್ಷಯ್ ಶ್ರೀನಿವಾಸ್, ಮೂರನೇ ಶ್ರೇಯಾಂಕದ ನಿಕಿತ್ ಲಕ್ಷ್ಮಣ್, ಏಳನೇ ಶ್ರೇಯಾಂಕದ ಅಭಿ ಅಮುಧನ್ ಕೂಡ ಕ್ವಾರ್ಟರ್ ಫೈನಲ್ ತಲುಪಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.