ADVERTISEMENT

ದಕ್ಷಿಣ ಆಫ್ರಿಕಾಕ್ಕೆ ಭಾರಿ ಜಯ

ಏಜೆನ್ಸೀಸ್
Published 17 ಜುಲೈ 2017, 19:30 IST
Last Updated 17 ಜುಲೈ 2017, 19:30 IST
ವೆರ್ನಾನ್ ಫಿಲಾಂಡರ್‌ ಬೌಲಿಂಗ್ ವೈಖರಿ.
ವೆರ್ನಾನ್ ಫಿಲಾಂಡರ್‌ ಬೌಲಿಂಗ್ ವೈಖರಿ.   

ನಾಟಿಂಗ್‌ಹ್ಯಾಂ: ಮೂವರು ವೇಗಿಗಳು ಮತ್ತು ಎಡಗೈ ಸ್ಪಿನ್ನರ್‌ ದಾಳಿಗೆ ನಲುಗಿದ ಆತಿಥೇಯ ಬ್ಯಾಟ್ಸ್‌ಮನ್‌ಗಳು ಬೇಗನೇ ಪೆವಿಲಿಯನ್ ಸೇರಿದರು. ಇದರ ಪರಿಣಾಮ ದಕ್ಷಿಣ ಆಫ್ರಿಕಾ ಇಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರಿ ಜಯ ಸಾಧಿಸಿತು.

474 ರನ್‌ಗಳ ಜಯದ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ನಾಲ್ಕನೇ ದಿನ ಕೇವಲ 44.2 ಓವರ್‌ಗಳಲ್ಲಿ 133 ರನ್‌ಗಳಿಗೆ ಪತನ ಕಂಡಿತು. ದಕ್ಷಿಣ ಆಫ್ರಿಕಾ 340 ರನ್‌ಗಳ ಜಯ ಸಾಧಿಸಿ ನಾಲ್ಕು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.

ಇಂಗ್ಲೆಂಡ್‌ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 205 ರನ್‌ಗಳಿಗೆ ಆಲೌಟ್‌ ಮಾಡಿದ ದಕ್ಷಿಣ ಆಫ್ರಿಕಾ 130 ರನ್‌ಗಳ ಮುನ್ನಡೆ ಗಳಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ 343 ರನ್‌ ಗಳಿಸಿ ಆತಿಥೇಯರ ಮುಂದೆ 474 ರನ್‌ಗಳ ಜಯದ ಗುರಿ ಇರಿಸಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ ಅಲೆಸ್ಟರ್ ಕುಕ್‌ ಅವರನ್ನು ಹೊರತುಪಡಿಸಿದರೆ ಮತ್ತೆ ಯಾರಿಗೂ ಆಫ್ರಿಕನ್ನರ ಬೌಲಿಂಗ್ ದಾಳಿ ಮೆಟ್ಟಿ ನಿಲ್ಲಲು ಆಗಲಿಲ್ಲ.

ADVERTISEMENT

ನಾಲ್ಕು ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ತಂಡ 55 ರನ್‌ ಗಳಿಸುವಷ್ಟರಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿತು. 42 ರನ್‌ ಗಳಿಸಿದ್ದ ಕುಕ್‌ ಕೂಡ ಔಟಾದಾಗ ತಂಡ ಆಘಾತಕ್ಕೆ ಒಳಗಾಯಿತು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಕಡೆ ನಡೆದರು. 49 ರನ್‌ಗಳಿಗೆ ತಂಡದ ಕೊನೆಯ ಐದು ವಿಕೆಟ್‌ಗಳು ಉರುಳಿದವು.

ಕೀಟನ್‌ ಜೆನಿಂಗ್ಸ್‌ ಮೂರು ರನ್ ಗಳಿಸಿದರೆ ಗ್ಯಾರಿ ಬಲಾನ್ಸ್‌ ನಾಲ್ಕು ರನ್‌ ಗಳಿಸಿದರು. ಕಳೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿ ಮಿಂಚಿದ್ದ ನಾಯಕ ಜೋ ರೂಟ್‌ 20 ಎಸೆತಗಳಲ್ಲಿ ಕೇವಲ ಎಂಟು ರನ್‌ ಗಳಿಸಿ ಔಟಾದರು. ಪ್ರಮುಖ ಬ್ಯಾಟ್ಸ್‌ಮನ್‌ಗಳ ಪೈಕಿ ಜಾನಿ ಬೇಸ್ಟೊ ಮತ್ತು ಬೆನ್ ಸ್ಟೋಕ್ಸ್ ಮಾತ್ರ ಎರಡಂಕಿ ಮೊತ್ತ ತಲುಪಿದರು.

ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ನಾಲ್ಕು ವಿಕೆಟ್ ಕಬಳಿಸಿ ಮಿಂಚಿದ್ದ ಸ್ಪಿನ್ನರ್ ಮೊಯಿನ್ ಅಲಿ ಮಧ್ಯಮ ಕ್ರಮಾಂಕದಲ್ಲಿ ಇಂಗ್ಲೆಂಡ್ ಇನಿಂಗ್ಸ್‌ಗೆ ಬಲ ತುಂಬಲು ಪ್ರಯತ್ನಿಸಿ 27 ರನ್‌ ಗಳಿಸಿದರು. ಆದರೆ ಅವರಿಗೆ ಇತರರಿಂದ ಸಹಕಾರ ಸಿಗಲಿಲ್ಲ. ಲಿಯಾಮ್ ಡೇವ್‌ಸನ್‌ ಮತ್ತು ಸ್ಟುವರ್ಟ್ ಬ್ರಾಡ್ ತಲಾ ಐದು ರನ್ ಗಳಿಸಿ ಮರಳಿದರೆ ಮಾರ್ಕ್‌ ವುಡ್‌ ಮತ್ತು ಜೇಮ್ಸ್ ಆಂಡರ್ಸನ್‌ ಶೂನ್ಯಕ್ಕೆ ಔಟಾದರು. ವೇಗಿಗಳಾದ ವೆರ್ನಾನ್ ಫಿಲಾಂಡರ್‌, ಡ್ವಾನೆ ಓಲಿವರ್‌ ಮತ್ತು ಕ್ರಿಸ್ ಮೋರಿಸ್‌ ಒಟ್ಟು ಏಳು ವಿಕೆಟ್‌ಗಳನ್ನು ಹಂಚಿಕೊಂಡರು. ಮೂರು ವಿಕೆಟ್‌ಗಳು ಸ್ಪಿನ್ನರ್ ಕೇಶವ್ ಮಹಾರಾಜ ಅವರ ಪಾಲಾದವು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ, ಮೊದಲ ಇನಿಂಗ್ಸ್‌: 335, ಇಂಗ್ಲೆಂಡ್: 205; ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್: 104 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 343ಕ್ಕೆ ಡಿಕ್ಲೇರ್‌ (ವೆರ್ನಾನ್‌ ಫಿಲಾಂಡರ್‌ 42; ಜೇಮ್ಸ್ ಆ್ಯಂಡರ್ಸನ್ 45ಕ್ಕೆ2, ಮೊಯಿನ್ ಅಲಿ 78ಕ್ಕೆ4, ಬೆನ್‌ ಸ್ಟೋಕ್ಸ್‌ 34ಕ್ಕೆ2); ಇಂಗ್ಲೆಂಡ್‌: 44.2 ಓವರ್‌ಗಳಲ್ಲಿ 133ಕ್ಕೆ ಆಲೌಟ್‌ (ಅಲೆಸ್ಟರ್ ಕುಕ್‌ 42, ಮೊಯಿನ್ ಅಲಿ 27; ವೆರ್ನಾನ್‌ ಫಿಲಾಂಡರ್‌ 24ಕ್ಕೆ3, ಡ್ವಾನೆ ಒಲಿವರ್‌ 25ಕ್ಕೆ2, ಕ್ರಿಸ್ ಮೋರಿಸ್‌ 7ಕ್ಕೆ2, ಕೇಶವ ಮಹಾರಾಜ್‌ 42ಕ್ಕೆ3). ಫಲಿತಾಂಶ–ದಕ್ಷಿಣ ಆಫ್ರಿಕಾಕ್ಕೆ 340 ರನ್‌ಗಳ ಜಯ; 4 ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ. ಪಂದ್ಯಶ್ರೇಷ್ಠ–ವೆರ್ನಾನ್ ಫಿಲಾಂಡರ್‌ (ದಕ್ಷಿಣ ಆಫ್ರಿಕಾ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.