ADVERTISEMENT

ದಕ್ಷಿಣ್ ಡೇರ್ಗೆ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2012, 19:30 IST
Last Updated 8 ಏಪ್ರಿಲ್ 2012, 19:30 IST

ಮೈಸೂರು: `ಅರಮನೆನಗರಿ~ಯ ಕ್ರೀಡಾ ಇತಿಹಾಸದ ಪುಟಗಳಲ್ಲಿ ಸೋಮವಾರ (ಏ.9) ಸಂಜೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸ್ಪರ್ಧೆಯೊಂದಕ್ಕೆ ಚಾಲನೆ ದೊರೆಯಲಿದೆ.

ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ದಕ್ಷಿಣ್ ಡೇರ್ ಮೋಟಾರ್ ರ‌್ಯಾಲಿಯ ನಾಲ್ಕನೇ ಆವೃತ್ತಿಗೆ ಚಾಲನೆ ದೊರೆಯಲಿದೆ. ದಕ್ಷಿಣ ಭಾರತದ ಅತ್ಯಂತ ದೊಡ್ಡ ಮೋಟಾರ್ ರ‌್ಯಾಲಿಯು ಸೋಮವಾರ ಸಂಜೆ 4.30ಕ್ಕೆ ಮೈಸೂರು ಅರಮನೆಯ ಉತ್ತರ ದ್ವಾರದಿಂದ ಆರಂಭವಾಗಲಿದೆ.
 
ಮಾರುತಿ ಸುಜುಕಿ ಮತ್ತು ಮೋಟಾರ್ ಸ್ಪೋರ್ಟ್ಸ್ ಇಂಕ್ ಸಹಯೋಗದಲ್ಲಿ ಈ ರ‌್ಯಾಲಿ ನಡೆಯುತ್ತಿದೆ.ದಕ್ಷಿಣ ಭಾರತದ ಪ್ರಮುಖ ಸ್ಥಳಗಳ ಮೂಲಕ ಸಾಗಲಿರುವ ರ‌್ಯಾಲಿ ಏಪ್ರಿಲ್ 14ರಂದು ಬೆಂಗಳೂರಿನಲ್ಲಿ ಮುಕ್ತಾಯವಾಗಲಿದೆ.

ಒಟ್ಟು 1800 ಕಿಲೋಮೀಟರ್ ಅಂತರದ ಈ ರ‌್ಯಾಲಿಯು ಕೊಡಗು, ಕೊಯಿಮತ್ತೂರ, ಊಟಿ, ಕೊಡೈಕೆನಾಲ್ ಮತ್ತು ಕೇರಳದ ವೈನಾಡು ಮೂಲಕ ಬೆಂಗಳೂರು ತಲುಪಲಿದೆ.

ದೇಶದ ಒಂದನೂರಕ್ಕೂ ಹೆಚ್ಚು ರೇಸಿಂಗ್ ಚಾಲಕರು ತಮ್ಮ ಅದೃಷ್ಟ ಪಣಕ್ಕೊಡ್ಡಲಿದ್ದಾರೆ. ಈ ಬಾರಿಯ  ಮತ್ತೊಂದು ವಿಶೇಷವೆಂದರೆ ರ‌್ಯಾಲಿಯ ಮೂರನೇ ದಿವಸದ ರಾತ್ರಿ ಕಾರುಗಳು ಊಟಿಯ ಚಹಾ ತೋಟಗಳ ಮೂಲಕ  ಸಾಗಲಿವೆ.

ಸಮಯ, ವೇಗ ಮತ್ತು ಅಂತರ (ಟಿಎಸ್‌ಡಿ) ಆಧಾರದ ಮೇಲೆ ನಡೆಯುವ ಮತ್ತು ಸ್ಟೇಜ್ ರೇಸ್ ಮಾದರಿಗಳಲ್ಲಿ ಈ ರ‌್ಯಾಲಿಯು ನಡೆಯಲಿದೆ.

`ಈ ರ‌್ಯಾಲಿಯಲ್ಲಿ 100 ಜನರು ಭಾಗವಹಿಸಲಿದ್ದಾರೆ. ಅದರಲ್ಲಿ 30 ಬೈಕ್‌ಗಳ ರ‌್ಯಾಲಿಯೂ ಸೇರಿದೆ. ದೇಶದ ಪ್ರಮುಖ ರೈಡರ್‌ಗಳು ಇದರಲ್ಲಿ ಭಾಗವಹಿಸಲಿದ್ದು, ಕಾರು ಮತ್ತು ಬೈಕ್ ರೇಸ್ ಸ್ಪರ್ಧಿಗಳಿಗೆ ಈ ಸ್ಪರ್ಧೆಯು ಉತ್ತಮ ವೇದಿಕೆಯಾಗಿದೆ~ ಎಂದು ಸಂಘಟನೆಯ ಉಸ್ತುವಾರಿ ಅಧಿಕಾರಿ ಜಯದಾಸ್ ಮೆನನ್ ಹೇಳುತ್ತಾರೆ. ಈ ರ‌್ಯಾಲಿಯಲ್ಲಿ ದೇಶದ ಅಗ್ರಮಾನ್ಯ ಚಾಲಕರಾದ ಗೌರವ್ ಗಿಲ್, ಸುರೇಶ್ ರಾಣಾ ಭಾಗವಹಿಸಲಿದ್ದಾರೆ.

ಲೋಹಿತ್-ಚುಪಾಂಗ್ ಜೋಡಿ: ಮೈಸೂರಿನ ಪ್ರತಿಭೆ ಲೋಹಿತ್ ಅರಸ್ ಈ ಬಾರಿ ಥೈಲ್ಯಾಂಡ್‌ನ ಚುಪಾಂಗ್ ಚೈ ವ್ಯಾನ್ ಅವರೊಂದಿಗೆ ಸ್ಪರ್ಧೆಗಿಳಿಯಲ್ಲಿದ್ದಾರೆ. ಸುಮಾರು 100 ರ‌್ಯಾಲಿಗಳಲ್ಲಿ ಪ್ರಶಸ್ತಿ ಗಳಿಸಿರುವ ಲೋಹಿತ್ ತಮ್ಮ ವಿಶೇಷ ಸ್ಪೋರ್ಟಿಂಗ್ ಕಾರ್‌ನಲ್ಲಿ ದಕ್ಷಿಣ್ ಡೇರ್‌ನಲ್ಲಿ ಛಾಪು ಮೂಡಿಸುವ ಉಮೇದಿನಲ್ಲಿದ್ದಾರೆ.

ಭಾನುವಾರ ಸಂಜೆಯವರೆಗೆ ರ‌್ಯಾಲಿಯ ಮಾರ್ಗಗಳ ಗುರುತು ಹಾಕುವ ಕಾರ್ಯ ಮುಗಿದಿತ್ತು.  ಮೈಸೂರಿನಲ್ಲಿ ಈಗಾಗಲೇ ಹಲವು ರೇಸಿಂಗ್ ಚಾಲಕರು ಬಂದು ಬೀಡುಬಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.