ADVERTISEMENT

ದಕ್ಷಿಣ ಆಫ್ರಿಕಾಕ್ಕೆ ಇಂಗ್ಲೆಂಡ್ ಸವಾಲು

ಇಂದು ಮೊದಲ ಸೆಮಿಫೈನಲ್‌ ಪಂದ್ಯ

ಪಿಟಿಐ
Published 17 ಜುಲೈ 2017, 19:30 IST
Last Updated 17 ಜುಲೈ 2017, 19:30 IST
ಟಾಮಿ ಬೆಮಂಟ್ ಆಟದ ವೈಖರಿ.
ಟಾಮಿ ಬೆಮಂಟ್ ಆಟದ ವೈಖರಿ.   

ಬ್ರಿಸ್ಟಲ್‌: ಹೆದರ್‌ ನೈಟ್ ಸಾರಥ್ಯದ ಇಂಗ್ಲೆಂಡ್ ತಂಡ ಮಹಿಳೆಯರ ವಿಶ್ವಕಪ್ ಕ್ರಿಕೆಟ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.

ಆಸ್ಟ್ರೇಲಿಯಾ ತಂಡವನ್ನು ಬಿಟ್ಟರೆ ವಿಶ್ವಕಪ್‌ ಪ್ರಶಸ್ತಿ ಮೇಲೆ ಆಧಿಪತ್ಯ ಸಾಧಿಸಿರುವ ಎರಡನೇ ತಂಡ ಇಂಗ್ಲೆಂಡ್‌ ಎನಿಸಿದೆ.

ಇಂಗ್ಲೆಂಡ್ ಈಗಾಗಲೇ ಮೂರು ಬಾರಿ ವಿಶ್ವಕಪ್ ಎತ್ತಿಹಿಡಿದಿದೆ. ಆದರೆ ದಕ್ಷಿಣ ಆಫ್ರಿಕಾ ಒಮ್ಮೆಯೂ ಫೈನಲ್ ತಲುಪಿಲ್ಲ. ಎರಡನೇ ಬಾರಿ ಸೆಮಿಫೈನಲ್‌ ತಲುಪಿರುವುದು ಈ ತಂಡದ ಉತ್ತಮ ಸಾಧನೆ ಎನಿಸಿದೆ.

ADVERTISEMENT

ಲೀಗ್ ಪಂದ್ಯಗಳಲ್ಲೂ ಇಂಗ್ಲೆಂಡ್‌ ಮೇಲುಗೈ ಸಾಧಿಸಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಈ ತಂಡ ಪ್ರಶಸ್ತಿ ಜಯಿಸುವ ನೆಚ್ಚಿನ ತಂಡಗಳಲ್ಲಿ ಒಂದು.

ಆಡಿದ ಏಳು ಪಂದ್ಯದಲ್ಲಿ ಹೆದರ್ ನೈಟ್ ಪಡೆ ಕೇವಲ ಒಂದು ಪಂದ್ಯ ಮಾತ್ರ ಸೋತಿದೆ. ಭಾರತದ ವಿರುದ್ಧ 35 ರನ್‌ಗಳಿಂದ ಸೋಲು ಅನುಭವಿಸಿತ್ತು.

ದಕ್ಷಿಣ ಆಫ್ರಿಕಾ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. ಲೀಗ್‌ ಪಂದ್ಯದಲ್ಲಿಯೂ ಈ  ತಂಡ ಇಂಗ್ಲೆಂಡ್ ಎದುರು 68 ರನ್‌ಗಳಿಂದ ಸೋಲು ಕಂಡಿತ್ತು. ಡೇನ್‌ ವಾನ್‌ ನೀಕರ್ಕ್ ಮುಂದಾಳತ್ವದ ದಕ್ಷಿಣ ಆಫ್ರಿಕಾ ತಂಡ ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 373 ರನ್‌ಗಳ ಬೃಹತ್‌ ಮೊತ್ತದ ಎದುರು ದಿಟ್ಟ ಬ್ಯಾಟಿಂಗ್‌ ಸಾಮರ್ಥ್ಯ ತೋರಿತ್ತು. 50 ಓವರ್‌ಗಳಲ್ಲಿ 305 ರನ್‌ ದಾಖಲಿಸಿತ್ತು.

ಆರಂಭಿಕ ಆಟಗಾರ್ತಿಯರಾದ ಲೂರಾ ವೋಲ್ವರ್ದತ್ (67) ಹಾಗೂ ಲಿಜೆಲ್ಲೆ ಲೀ (72) ಉತ್ತಮ ಜತೆಯಾಟ ನೀಡಿದ್ದರು. ಟಾಮಿ ಬೆಮಂಟ್ (372) ಇಂಗ್ಲೆಂಡ್ ಪರ ಹೆಚ್ಚು ರನ್ ಕಲೆಹಾಕಿದ ಆಟಗಾರ್ತಿ ಎನಿಸಿದ್ದಾರೆ. ಡೇನಿಯಲ್ ಹೇಜಲ್ ಬೌಲಿಂಗ್‌ನಲ್ಲಿ ಮಿಂಚುವ ಗುಣ ಹೊಂದಿದ್ದಾರೆ.

‘ಗುಂಪು ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಜಯ ದಾಖಲಿಸಿದ್ದೇವೆ. ಆದರೆ ಸೆಮಿಫೈನಲ್ ಪಂದ್ಯದ ಸವಾಲುಗಳೇ ಬೇರೆ’ ಎಂದು ಇಂಗ್ಲೆಂಡ್‌ ತಂಡದ ಆರಂಭಿಕ ಬ್ಯಾಟ್ಸ್‌ವುಮನ್ ಟಾಮಿ ಬೆಮಂಟ್ ಹೇಳಿದ್ದಾರೆ.

‘ಇಲ್ಲಿ ಉತ್ತಮವಾಗಿ ಆಡಿದ ತಂಡ ಜಯಗಳಿಸಲಿದೆ . ಗೆಲುವಿಗಾಗಿ ಉತ್ತಮ ಪೈಪೋಟಿ ನಡೆಸುವುದು ನಮ್ಮ ಗುರಿ. ಭಾರತದ ವಿರುದ್ಧ ಸೋಲು ಕಂಡ ಬಳಿಕ ತಂಡದ ಕೊರತೆಯನ್ನು ಮನಗಂಡು ಅಭ್ಯಾಸ ನಡೆಸಿದ್ದೇವೆ’ ಎಂದು ಬೆಮಂಟ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.