ADVERTISEMENT

ದಕ್ಷಿಣ ಆಫ್ರಿಕಾ ತಂಡದ ಜಯಭೇರಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 18:50 IST
Last Updated 15 ಫೆಬ್ರುವರಿ 2011, 18:50 IST

ಬೆಂಗಳೂರು: ಸತತ ನಾಲ್ಕನೇ ವಿಶ್ವಕಪ್ ಟ್ರೋಫಿ ಗೆಲ್ಲುವ ಕನಸಿನೊಂದಿಗೆ ಆಗಮಿಸಿರುವ ಆಸ್ಟ್ರೇ ಲಿಯಾ ತಂಡ ಈಗ ದಿಕ್ಕುತಪ್ಪಿದ ಹಡಗಿನಂತಾ ಗಿದೆ. ಆಡಿದ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ರಿಕಿ ಪಾಂಟಿಂಗ್ ಬಳಗ ಆತ್ಮವಿಶ್ವಾಸವನ್ನು ಕಳೆದುಕೊಂಡೇ ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸೀಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆ ಯಿತು.
ಮೊದಲ ಅಭ್ಯಾಸ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಮಣಿಸಿದ್ದ ಗ್ರೇಮ್ ಸ್ಮಿತ್ ಬಳಗ ಹೊಸ ಹುಮ್ಮಸ್ಸಿನೊಂದಿಗೆ ವಿಶ್ವಕಪ್ ಟೂರ್ನಿ ಯ ಮೊದಲ ಪಂದ್ಯ ಆಡಲಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ 47.1 ಓವರ್‌ಗಳಲ್ಲಿ 217 ರನ್‌ಗಳಿಗೆ ಆಲೌಟಾಯಿತು. ಮೈಕಲ್ ಕ್ಲಾರ್ಕ್ (73) ಮತ್ತು ರಿಕಿ ಪಾಂಟಿಂಗ್ (55) ತಂಡದ ಇನಿಂಗ್ಸ್‌ಗೆ ಜೀವ ತುಂಬಿದರು. ದಕ್ಷಿಣ ಆಫ್ರಿಕಾ ತಂಡ 44.2 ಓವರ್‌ಗಳಲ್ಲಿ 3 ವಿಕೆಟ್‌ಗೆ 218 ರನ್ ಗಳಿಸಿ ಗೆಲುವಿನ ನಗು ಬೀರಿತು. ಸ್ಮಿತ್ (65) ಮತ್ತು ಆಮ್ಲಾ (60) ಅವರು ದಕ್ಷಿಣ ಆಫ್ರಿಕಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸಾಧಾರಣ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಆರಂಭ ಲಭಿಸಿತು.  ಸ್ಮಿತ್ ಹಾಗೂ ಆಮ್ಲಾ ಮೊದಲ ವಿಕೆಟ್‌ಗೆ 24 ಓವರ್‌ಗಳಲ್ಲಿ 131 ರನ್‌ಗಳನ್ನು ಸೇರಿಸಿದರು. ಆಸ್ಟ್ರೇಲಿಯಾದ ವೇಗದ ಬೌಲಿಂಗ್ ದಾಳಿಯನ್ನು ಇವರು ಸಮರ್ಥವಾಗಿ ಮೆಟ್ಟಿನಿಂತರು. ಇತರ ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಇಬ್ಬರೂ ಸ್ವಯಂ ನಿವೃತ್ತಿಯಾಗಿ ಪೆವಿಲಿಯನ್‌ಗೆ ಮರಳಿದರು. 81 ಎಸೆತಗಳನ್ನು ಎದುರಿಸಿದ ಸ್ಮಿತ್ 10 ಬೌಂಡರಿ ಗಳಿಸಿದರು. 76 ಎಸೆತಗಳನ್ನು ಎದುರಿಸಿದ ಆಮ್ಲಾ ಅವರ ಇನಿಂಗ್ಸ್‌ನಲ್ಲಿ ಏಳು ಬೌಂಡರಿಗಳಿದ್ದವು.

ಬಳಿಕ ಫಾಫ್ ಡು ಪ್ಲೆಸಿಸ್ (12) ಔಟಾದರೂ ಜೆಪಿ ಡುಮಿನಿ (ಅಜೇಯ 47, 62 ಎಸೆತ, 3 ಬೌಂ, 1 ಸಿಕ್ಸರ್) ಮತ್ತು ಎಬಿ ಡಿವಿಲಿಯರ್ಸ್ (ಅಜೇಯ 16) ತಂಡವನ್ನು ಸುಲಭ ಗೆಲುವಿನತ್ತ ಮುನ್ನಡೆಸಿದರು. 

ಕ್ಲಾರ್ಕ್, ಪಾಂಟಿಂಗ್ ಆಸರೆ: ಭಾರತದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಆಸ್ಟ್ರೇಲಿಯಾ ಎಚ್ಚರಿಕೆಯ ಆಟವಾಡುವ ಉದ್ದೇಶದಲ್ಲಿ ಕಣಕ್ಕಿಳಿದಿತ್ತು. ಆದರೆ ತಂಡದ ಲೆಕ್ಕಾಚಾರ ಮೊದಲ ಓವರ್‌ನಲ್ಲೇ ತಲೆಕೆಳಗಾಯಿತು. ಶೇನ್ ವ್ಯಾಟ್ಸನ್ ಇನಿಂಗ್ಸ್‌ನ ನಾಲ್ಕನೇ ಎಸೆತದಲ್ಲಿ ಡೇಲ್ ಸ್ಟೇನ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದು ಪೆವಿಲಿಯನ್ ಕಡೆ ಮರಳಿದರು.

ನಾಲ್ಕನೇ ಓವರ್‌ನಲ್ಲಿ ಬ್ರಾಡ್ ಹಡಿನ್ ರನೌಟಾದಾಗ ತಂಡದ ಮೊತ್ತ ಕೇವಲ ಆರು. ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರೂ ಖಾತೆ ತೆರೆಯದೆ ಮರಳಿದ್ದು ಆಸೀಸ್‌ಗೆ ಆಘಾತ ಉಂಟುಮಾಡಿತು. ಈ ಹಂತದಲ್ಲಿ ಜೊತೆಯಾದ ರಿಕಿ ಪಾಂಟಿಂಗ್ ಮತ್ತು ಮೈಕಲ್ ಕ್ಲಾರ್ಕ್ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು.
ಮೂರನೇ ವಿಕೆಟ್‌ಗೆ 122 ರನ್‌ಗಳ ಜೊತೆಯಾಟ ಮೂಡಿಬಂತು. ದಕ್ಷಿಣ ಆಫ್ರಿಕಾದ ಪ್ರಭಾವಿ ಬೌಲಿಂಗ್ ದಾಳಿಯನ್ನು ಎದುರಿಸಿ ನಿಲ್ಲಲು ಇವರು ತಕ್ಕಮಟ್ಟಿಗೆ ಯಶಸ್ವಿಯಾದರು. ಉತ್ತಮವಾಗಿ ಆಡುತ್ತಿದ್ದ ಪಾಂಟಿಂಗ್ ಅವರನ್ನು ಪೆವಿಲಿಯನ್‌ಗಟ್ಟಿದ ರಾಬಿನ್ ಪೀಟರ್‌ಸನ್ ದಕ್ಷಿಣ ಆಫ್ರಿಕಾ ತಂಡಕ್ಕೆ ‘ಬ್ರೇಕ್’ ನೀಡಿದರು. 84 ಎಸೆತಗಳನ್ನು ಎದುರಿಸಿದ ಆಸೀಸ್ ನಾಯಕ ಏಳು ಬೌಂಡರಿ ಗಳಿಸಿದರು. ಅಲ್ಪ ಸಮಯದ ಬಳಿಕ ಕ್ಲಾರ್ಕ್ ಕೂಡಾ ಪೀಟರ್‌ನಸ್‌ಗೆ ವಿಕೆಟ್ ಒಪ್ಪಿಸಿದರು. 96 ಎಸೆತಗಳನ್ನು ಎದುರಿಸಿದ ಕ್ಲಾರ್ಕ್ ಆರು ಬೌಂಡರಿ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT