ಕಾರ್ಡಿಫ್ (ಪಿಟಿಐ): ನಿಗದಿತ ಸಮಯಕ್ಕೆ ಆರಂಭವಾಗಬೇಕಿದ್ದ ಆಟಕ್ಕೆ ಮಳೆಯ ಕಾಟ. ಅದಾದ ನಂತರ ನಡೆದಿದ್ದು ಆರಂಭಿಕ ಬ್ಯಾಟ್ಸ್‌ಮನ್ ಕಾಲಿನ್ ಇನ್‌ಗ್ರಾಮ್ ಭರ್ಜರಿ ಆಟ. ಇದರ ಪರಿಣಾಮ ದಕ್ಷಿಣ ಆಫ್ರಿಕಾ ತಂಡ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಸವಾಲಿನ ಮೊತ್ತ ಕಲೆ ಹಾಕಿದೆ.
ಸೋಫಿಯಾ ಗಾರ್ಡನ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡ್ವೇನ್ ಬ್ರಾವೊ ಸಾರಥ್ಯದ ವಿಂಡೀಸ್ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತು. ಈ ಅವಕಾಶವನ್ನು ಬಳಸಿಕೊಂಡ ದಕ್ಷಿಣ ಆಫ್ರಿಕಾ 31 ಓವರ್‌ಗಳಲ್ಲಿ ಅರು ವಿಕೆಟ್ ಕಳೆದುಕೊಂಡು 230 ರನ್‌ಗಳನ್ನು ಕಲೆ ಹಾಕಿ ವಿಂಡೀಸ್ ಗೆಲುವಿಗೆ ಕಠಿಣ ಗುರಿ ನೀಡಿದೆ.
ಈ ಗುರಿಯನ್ನು ಬೆನ್ನು ಹತ್ತಿರುವ ವಿಂಡೀಸ್ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 11 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿತ್ತು. ಮಳೆ ಅಡ್ಡಿಯಾದ ಕಾರಣ ಪಂದ್ಯ ತಡವಾಗಿ ಆರಂಭವಾಯಿತು. ಆದ್ದರಿಂದ ಓವರ್‌ಗಳ ಸಂಖ್ಯೆಯಲ್ಲಿ ಕಡಿತ ಮಾಡಲಾಯಿತು.
ಮಿಂಚಿದ ಇನ್‌ಗ್ರಾಮ್: ಎಡಗೈ ಬ್ಯಾಟ್ಸ್‌ಮನ್ ಇನ್‌ಗ್ರಾಮ್ ಹಾಗೂ ಹಾಶೀಮ್ ಆಮ್ಲಾ (23, 27ಎಸೆತ, 2 ಬೌಂಡರಿ) ಮೊದಲ ವಿಕೆಟ್ ಜೊತೆಯಾಟದಲ್ಲಿ 80 ರನ್‌ಗಳನ್ನು ಕಲೆ ಹಾಕಿ ಬುನಾದಿ ಗಟ್ಟಿಗೊಳಿಸಿದರು. 63 ಎಸೆತಗಳನ್ನು ಎದುರಿಸಿದ ಇನ್‌ಗ್ರಾಮ್ ಆರು ಬೌಂಡರಿ ಮತ್ತು ಎರಡು ಸಿಕ್ಸರ್ ಸೇರಿದಂತೆ 73 ರನ್ ಕಲೆ ಹಾಕಿದರು.
ಆರಂಭಿಕ ಜೋಡಿ ಉತ್ತಮ ಆರಂಭ ಒದಗಿಸಿದರೆ, ಡೇವಿಡ್ ಮಿಲ್ಲರ್ ( 38, 29ಎಸೆತ, 1ಬೌಂಡರಿ, 3 ಸಿಕ್ಸರ್) ಮತ್ತು ಫ್ಲಾಪ್ ಡು ಪ್ಲೆಸಿಸ್ (35, 32ಎಸೆತ, 3ಬೌಂಡರಿ, 1ಸಿಕ್ಸರ್) ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ವಿಂಡೀಸ್ ಬೌಲರ್‌ಗಳ ಬೆವರಿಳಿಸಿದ ಈ ಜೋಡಿ ಐದನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 48 ಎಸೆತಗಳಲ್ಲಿ 68 ರನ್‌ಗಳನ್ನು ಕಲೆ ಹಾಕಿತು.
ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಸೆಮಿಫೈನಲ್ ಪ್ರವೇಶಿಸಲಿದೆ. ಆದ್ದರಿಂದ ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ.
ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ 31 ಓವರ್‌ಗಳಲ್ಲಿ 6 ವಿಕೆಟ್‌ಗೆ 230. (ಕಾಲಿನ್ ಇನ್‌ಗ್ರಾಮ್ 73, ಹಾಶಿಮ್ ಆಮ್ಲಾ 23, ಡಿವಿಲಿಯರ್ಸ್ 37, ಫ್ಲಾಪ್ ಡು ಪ್ಲೆಸಿಸ್ 35, ಡೇವಿಡ್ ಮಿಲ್ಲರ್ 38; ರವಿ ರಾಂಪಾಲ್ 37ಕ್ಕೆ1, ಡ್ವೇನ್ ಬ್ರಾವೊ 43ಕ್ಕೆ2, ಮರ್ಲಾನ್ ಸ್ಯಾಮುಯೆಲ್ಸ್ 14ಕ್ಕೆ1, ಪೊಲಾರ್ಡ್ 30ಕ್ಕೆ1)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.