ADVERTISEMENT

ದರೋಡೆ ಪ್ರಕರಣ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 19:30 IST
Last Updated 4 ಸೆಪ್ಟೆಂಬರ್ 2011, 19:30 IST

ಬೆಂಗಳೂರು:ಪ್ರವಾಸಿಗರ ಸೋಗಿನಲ್ಲಿ ಟ್ರಾವೆಲ್ಸ್ ಏಜೆನ್ಸಿಯಿಂದ ಕಾರು ಬಾಡಿಗೆಗೆ ಪಡೆದು ಚಾಲಕನ ಮೇಲೆ ಹಲ್ಲೆ ನಡೆಸಿ ವಾಹನ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಜೆ.ಪಿ.ನಗರದ ಧನರಾಜ್ ಉರುಫ್ ಗಣೇಶ (26) ಮತ್ತು ಬಿಟಿಎಂ ಲೇಔಟ್ ಎರಡನೇ ಹಂತದ ಸಲೀಂ (27) ಬಂಧಿತರು. ಆರೋಪಿಗಳು ಹುಬ್ಬಳ್ಳಿಯ ಗಣೇಶ ಟೂರ್ಸ್‌ ಅಂಡ್ ಟ್ರಾವೆಲ್ಸ್ ಏಜೆನ್ಸಿಯಲ್ಲಿ ಜುಲೈ 31ರಂದು ಕಾರೊಂದನ್ನು ಬಾಡಿಗೆಗೆ ಪಡೆದು ಮುರ್ಡೇಶ್ವರಕ್ಕೆ ಪ್ರವಾಸ ಹೋಗಿದ್ದರು.

ಮುರ್ಡೇಶ್ವರದಿಂದ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಮೂತ್ರ ವಿಸರ್ಜನೆಗೆಂದು ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ ಬಳಿ ಕಾರು ನಿಲ್ಲಿಸಿದ ದುಷ್ಕರ್ಮಿಗಳು ಚಾಲಕನಿಗೆ ಮಾರಕಾಸ್ತ್ರಗಳಿಂದ ಹೊಡೆದು ಕೆಳಗೆ ತಳ್ಳಿ ವಾಹನ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರನ್ನು ಬೆಂಗಳೂರಿಗೆ ತಂದಿದ್ದ ಆರೋಪಿಗಳು ಅದರ ನೋಂದಣಿ ಫಲಕ ಬದಲಿಸಿದ್ದರು. ಅಲ್ಲದೇ ಆ ಕಾರಿಗೆ ಬೇರೊಂದು ನೋಂದಣಿ ಫಲಕ ಅಳವಡಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಮೂಲತಃ ಅಂಕೋಲಾ ವಾಸಿಯಾದ ಧನರಾಜ್ ಹುಬ್ಬಳ್ಳಿಯಲ್ಲಿ ಹಳೆ ಕಾರುಗಳ ವ್ಯವಹಾರ ಮಾಡುತ್ತಿದ್ದ. ವ್ಯವಹಾರದಲ್ಲಿ ನಷ್ಟವಾದ ಕಾರಣ ಆತ ಬೆಂಗಳೂರಿನ ಜೆ.ಪಿ.ನಗರಕ್ಕೆ ಬಂದು ನೆಲೆಸಿದ್ದ.

ಜೆ.ಪಿ.ನಗರದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಸಲೀಂನನ್ನು ಪರಿಚಯ ಮಾಡಿಕೊಂಡ ಆತ, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದ. ವಾಹನ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿತನಾಗಿ ಶಿವಮೊಗ್ಗ ಜಿಲ್ಲಾ ಕಾರಾಗೃಹದಲ್ಲಿರುವ ನೇಹಾಲ್ ಎಂಬಾತನ ಜತೆ ಧನರಾಜ್ ಸಂಪರ್ಕ ಇಟ್ಟುಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸಿಸಿಬಿ ಎಸಿಪಿ ಬಿ.ಎನ್.ನ್ಯಾಮೇಗೌಡ, ಇನ್‌ಸ್ಪೆಕ್ಟರ್ ಕೆ.ಸಿ.ಅಶೋಕನ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸರಗಳ್ಳನ ಬಂಧನ
ಮಹದೇವಪುರ ಸಮೀಪದ ಎಇಸಿಎಸ್ ಲೇಔಟ್‌ನಲ್ಲಿ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ ದುಷ್ಕರ್ಮಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಹೂಡಿ ಸಮೀಪದ ಕುಂದಲಹಳ್ಳಿಯ ಗೋಪಿನಾಥ್ ಅಲಿಯಾಸ್ ವಿಶ್ವಾಸ್ (22) ಸಿಕ್ಕಿ ಬಿದ್ದ ಆರೋಪಿ. ಆತ ಮಾರತ್‌ಹಳ್ಳಿಯ ಲಕ್ಷ್ಮಿನಾರಾಯಣ ಲೇಔಟ್ ನಿವಾಸಿ ನೇತ್ರಾವತಿ ಎಂಬುವರ ಸರವನ್ನು ಕಳವು ಮಾಡಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ನೇತ್ರಾವತಿ ಅವರು ಸಹೋದರನ ಜತೆ ಮನೆಗೆ ನಡೆದು ಬರುತ್ತಿದ್ದಾಗ ಆರೋಪಿಯು ಅವರನ್ನು ಹಿಂಬಾಲಿಸಿ ಬಂದು ಸರ ಕಿತ್ತುಕೊಂಡು ಪರಾರಿಯಾಗಲೆತ್ನಿಸಿದ. ಇದರಿಂದ ಆತಂಕಗೊಂಡ ನೇತ್ರಾವತಿ ಅವರು ನೆರವಿಗೆ ಕೂಗಿಕೊಂಡಾಗ ಸ್ಥಳೀಯರು ಗೋಪಿನಾಥ್‌ನನ್ನು ಬೆನ್ನಟ್ಟಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಠಾಣೆಗೆ ಕರೆದುಕೊಂಡು ಬಂದರು ಎಂದು ಪೊಲೀಸರು ಹೇಳಿದ್ದಾರೆ.

ಕೋಲ್ಕತ್ತಾ ಮೂಲದ ಗೋಪಿನಾಥ್ ಬಡಗಿ ಕೆಲಸ ಮಾಡುತ್ತಿದ್ದ. ಸಾಕಷ್ಟು ಸಾಲ ಮಾಡಿಕೊಂಡಿದ್ದ ಆತ ಸಾಲದ ಹಣ ತೀರಿಸುವ ಉದ್ದೇಶಕ್ಕಾಗಿ ಈ ಕೃತ್ಯ ಎಸಗಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಹದೇವಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.