ADVERTISEMENT

ದಾದಾ ಪಡೆಗೆ ಮಹಿ ಬಳಗದ ಸವಾಲು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 19:30 IST
Last Updated 13 ಏಪ್ರಿಲ್ 2012, 19:30 IST

 ಪುಣೆ (ಪಿಟಿಐ): ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಆಘಾತದ ನಂತರ ಬ್ಯಾಟಿಂಗ್ ಬಗ್ಗೆ ಆತಂಕಗೊಂಡಿರುವ ಪುಣೆ ವಾರಿಯರ್ಸ್‌ಗೆ ಶನಿವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಸುಲಭದ ಎದುರಾಳಿಯಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅಚ್ಚರಿ ಪಡುವ ರೀತಿಯಲ್ಲಿ ಸೋಲಿಸಿದ ನಂತರ ವಿಶ್ವಾಸದ ಅಲೆಯ ಮೇಲೆ ತೇಲುತ್ತಿದೆ ಸೂಪರ್ ಕಿಂಗ್ಸ್. ಆದರೆ ಸೌರವ್ ಗಂಗೂಲಿ ನಾಯಕತ್ವದ ಪುಣೆ ವಾರಿಯರ್ಸ್ ಸ್ಥಿತಿ ಹಾಗಿಲ್ಲ. ಅದು ಬ್ಯಾಟಿಂಗ್ ದೌರ್ಬಲ್ಯದಿಂದಾಗಿ ಕಳೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಎದುರು ಏಳು ವಿಕೆಟ್‌ಗಳ ಅಂತರದಿಂದ ನಿರಾಸೆ ಅನುಭವಿಸಿದೆ. ಸೋಲಿನಿಂದಾಗಿ `ದಾದಾ~ ಮುಖದಲ್ಲಿನ ಮಂದಹಾಸ ಮಾಯವಾಗಿದೆ.

ಇನಿಂಗ್ಸ್‌ಗೆ ಭದ್ರ ಬುನಾದಿ ಹಾಕುವಂಥ ಆಟವಾಡಲು ವಾರಿಯರ್ಸ್ ಪಟ್ಟ ಕಷ್ಟವನ್ನು ನೆನೆದರೆ ಆತಂಕ ಮೂಡುವುದು ಸಹಜ. ಜೆಸ್ಸಿ ರೈಡರ್ ಮತ್ತು ಸ್ವತಃ ಸೌರವ್ ಕೂಡ ಇನಿಂಗ್ಸ್ ಕಟ್ಟುವ ಕೆಲಸ ಮಾಡಲಿಲ್ಲ.

ಮರ್ಲಾನ್ ಸ್ಯಾಮುಯಲ್ಸ್ ಹಾಗೂ ರಾಬಿನ್ ಉತ್ತಪ್ಪ ಅವರಂಥ ಬ್ಯಾಟ್ಸ್‌ಮನ್‌ಗಳಿದ್ದರೂ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಅದೇ ರೀತಿಯ ಸಂಕಷ್ಟವು ಸ್ವಂತ ಅಂಗಳದಲ್ಲಿ ಆಡುವಾಗ ಪುಣೆ ವಾರಿಯರ್ಸ್‌ಗೆ ಎದುರಾದರೆ ಅದು ಅಭಿಮಾನಿಗಳಿಗೆ ಅಸಹನೀಯವಾಗುತ್ತದೆ. ಆದ್ದರಿಂದ ಗಂಗೂಲಿ ಹಿಂದಿನ ಪಂದ್ಯದಲ್ಲಿನ ತಪ್ಪುಗಳನ್ನು ತಿದ್ದಿಕೊಳ್ಳಲು ಒತ್ತು ನೀಡಿದ್ದಾರೆ.

ಮಹೇಂದ್ರ ಸಿಂಗ್ ದೋನಿ ನೇತೃತ್ವದ ತಂಡಕ್ಕೆ ಸದ್ಯ ಅಂಥ ಸಮಸ್ಯೆಗಳು ಕಾಡುತ್ತಿಲ್ಲ. ರಾಯಲ್ ಚಾಲೆಂಜರ್ಸ್ ವಿರುದ್ಧ ಪಡೆದ ಜಯದ ನಂತರ ಅದು ಅಸಾಧ್ಯ ಎನಿಸಿದ್ದೆಲ್ಲವನ್ನೂ ಸಾಧಿಸುವ ಹುಮ್ಮಸ್ಸು ಪಡೆದುಕೊಂಡಿದೆ. ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿಯೂ ಗೆಲವಿನ ಸಂಭ್ರಮ ಪಡೆಯುವ ಕನಸು ಕಂಡಿದೆ `ಮಹಿ~ ಪಡೆ.

ಬ್ಯಾಟಿಂಗ್ ವಿಭಾಗದಲ್ಲಿ ವಾರಿಯರ್ಸ್‌ಗಿಂತ ಸೂಪರ್ ಕಿಂಗ್ಸ್ ಹೆಚ್ಚು ಬಲಶಾಲಿ ಎಂದು ಈವರೆಗೆ ನಡೆದಿರುವ ಪಂದ್ಯಗಳ ಲೆಕ್ಕಾಚಾರದ ಮೇಲೆ ಹೇಳಲು ಸಾಧ್ಯವಿಲ್ಲ. ಆದರೂ ಅದು ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಗಂಗೂಲಿ ಬಳಗಕ್ಕಿಂತ ಉತ್ತಮವೆಂದು ಒಪ್ಪಲೇಬೇಕು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯಲ್ಲಿಯೂ ಚಾಂಪಿಯನ್ ಪಟ್ಟ ಪಡೆಯುವ ಕನಸು ಕಂಡಿರುವ ಸೂಪರ್ ಕಿಂಗ್ಸ್ ತಂಡವು ಲೀಗ್ ಹಂತದಲ್ಲಿ ಗೆಲುವಿನ ಸಂಖ್ಯೆಯನ್ನು      ಹೆಚ್ಚಿಸಿಕೊಳ್ಳುವತ್ತ ಗಮನ ಕೇಂದ್ರೀಕರಿಸಿದೆ.

ಈವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಅದಕ್ಕೆ ಜಯ       ಸಿಕ್ಕಿದೆ. ಈ ಕಾರಣಕ್ಕಾಗಿಯೇ ಮುಂದಿನ ಪಂದ್ಯಗಳಲ್ಲಿ ಲೆಕ್ಕಾಚಾರ ತಪ್ಪದಂತೆ ಆಡುವುದು ದೋನಿ ಯೋಚನೆ ಹಾಗೂ ಯೋಜನೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.