ADVERTISEMENT

ದೋನಿಗೆ ಒಂದು ಪಂದ್ಯ ನಿಷೇಧ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ಪರ್ತ್ (ಪಿಟಿಐ): ಆಸ್ಟ್ರೇಲಿಯಾ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತ ನಿಧಾನ ಗತಿಯಲ್ಲಿ ಬೌಲಿಂಗ್ ಮಾಡಿದ ಕಾರಣ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿಗೆ ಒಂದು ಪಂದ್ಯದ ನಿಷೇಧ ಶಿಕ್ಷೆ ಹೇರಲಾಗಿದೆ.

ಭಾರತ ತಂಡ ನಿಗದಿತ ಅವಧಿಯಲ್ಲಿ ಎರಡು ಓವರ್‌ಗಳನ್ನು ಕಡಿಮೆ ಎಸೆದಿತ್ತು. ಕಳೆದ ವರ್ಷದಲ್ಲಿಯೂ ದೋನಿ ಇದೇ ತಪ್ಪನ್ನು ಮಾಡಿದ್ದರು. ಆಗ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ಈಗ ಮತ್ತದೇ ತಪ್ಪನ್ನು ಮಾಡಿದ್ದಾರೆ. ದೋನಿ ಪಂದ್ಯ ಶುಲ್ಕದ ಶೇ. 40ರಷ್ಟು ಹಾಗೂ ಇತರ ಆಟಗಾರರು ಶೇ 20 ರಷ್ಟು ಮೊತ್ತವನ್ನು `ದಂಡ~ದ ರೂಪದಲ್ಲಿ ಕಟ್ಟಬೇಕು ಎಂದು ಮ್ಯಾಚ್ ರೆಫ್ರಿ ರಂಜನ್ ಮದುಗಲ್ ಸೂಚಿಸಿದ್ದಾರೆ.

ದೋನಿ ಜನವರಿ 24ರಿಂದ ಆರಂಭವಾಗಲಿರುವ ನಾಲ್ಕನೇ ಹಾಗೂ ಕೊನೆಯ ಟೆಸ್ಟ್‌ನಲ್ಲಿ ಆಡುವಂತಿಲ್ಲವಾದ ಕಾರಣ, ವೀರೇಂದ್ರ ಸೆಹ್ವಾಗ್ ನಾಯಕ ಸ್ಥಾನ ನಿಭಾಯಿಸಲಿದ್ದಾರೆ. ಈ ಸಲದ ಆಸೀಸ್ ಪ್ರವಾಸದಲ್ಲಿ ಒಂದೂ ಪಂದ್ಯವನ್ನಾಡದ ವೃದ್ಧಿಮನ್ ಸಹಾಗೆ ವಿಕೆಟ್ ಕೀಪಿಂಗ್ ಮಾಡುವ ಅವಕಾಶ ಲಭಿಸಲಿದೆ.

ಸತತ ಸೋಲಿನ ಸಂಕಷ್ಟದಲ್ಲಿರುವ ಪ್ರವಾಸಿ ಭಾರತಕ್ಕೆ ಈ `ಕಷ್ಟ~ವೂ ಸಹ ಪೆಟ್ಟು ನೀಡಿದೆ. ಭಾರತ ಮೂರನೇ ಟೆಸ್ಟ್‌ನಲ್ಲೂ ಇನಿಂಗ್ಸ್ ಹಾಗೂ 37 ರನ್‌ಗಳ ಸೋಲು ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.