ಚಿತ್ತಗಾಂಗ್: ಮೊದಲ ಪಂದ್ಯದಲ್ಲಿ ಗೆಲುವಿನ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಂದು ಸವಾಲು ಎದುರಾಗಿದೆ.
ಚಿತ್ತಗಾಂಗ್‌ನಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಈ ತಂಡ ನ್ಯೂಜಿಲೆಂಡ್ ವಿರುದ್ಧ ಪೈಪೋಟಿ ನಡೆಸಲಿದೆ. ದ. ಆಫ್ರಿಕಾ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಕೈಯಲ್ಲಿ ಸೋಲು ಅನುಭವಿಸಿತ್ತು. ಆದ್ದರಿಂದ ಇನ್ನೊಂದು ಸೋಲು ಎದುರಾದರೆ ಸೆಮಿಫೈನಲ್ ಪ್ರವೇಶದ ಹಾದಿ ದುರ್ಗಮವಾಗುವುದು ಖಚಿತ.
ನಾಯಕ ಫಾಫ್ ಡು ಪ್ಲೆಸಿಸ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಇದು ದ. ಆಫ್ರಿಕಾ ತಂಡದ ಚಿಂತೆಗೆ ಕಾರಣವಾಗಿದೆ. ಮೊದಲ ಪಂದ್ಯದಲ್ಲಿ ಪ್ಲೆಸಿಸ್ ಅನುಪಸ್ಥಿತಿಯಲ್ಲಿ ಎಬಿ ಡಿವಿಲಿಯರ್ಸ್ ತಂಡವನ್ನು ಮುನ್ನಡೆಸಿದ್ದರು.
ಪ್ಲೆಸಿಸ್ ಭಾನುವಾರ ಸಹ ಆಟಗಾರರ ಜೊತೆ ಅಲ್ಪ ಹೊತ್ತು ಅಭ್ಯಾಸ ನಡೆಸಿದರು. ಆದರೆ ಅವರು ಆಡುವರೇ ಎಂಬುದು ಖಚಿತವಾಗಿಲ್ಲ. ದ. ಆಫ್ರಿಕಾ ತಂಡ ಬ್ಯಾಟಿಂಗ್‌ನಲ್ಲಿ ಹಾಶಿಮ್ ಆಮ್ಲಾ, ಎಬಿ ಡಿವಿಲಿಯರ್ಸ್ ಮತ್ತು ಜೆಪಿ ಡುಮಿನಿ ಅವರನ್ನು ನೆಚ್ಚಿಕೊಂಡಿದೆ.
ನ್ಯೂಜಿಲೆಂಡ್ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿತ್ತು. ಮಳೆಯಿಂದ ತೊಂದರೆಗೊಳಗಾದ ಪಂದ್ಯದಲ್ಲಿ ಕಿವೀಸ್ ತಂಡ ಡಕ್ವರ್ಥ್ ಲೂಯಿಸ್ ನಿಯಮದಂತೆ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಕಿವೀಸ್ ಕೇವಲ 5.2 ಓವರ್‌ಗಳನ್ನು ಮಾತ್ರ ಆಡಿತ್ತು.
ಬ್ರೆಂಡನ್ ಮೆಕ್ಲಮ್ ಮತ್ತು ಕೋರಿ ಆ್ಯಂಡರ್‌ಸನ್ ಅವರು ಡೇಲ್ ಸ್ಟೇನ್ ಒಳಗೊಂಡ ದ. ಆಫ್ರಿಕಾದ ಬೌಲಿಂಗ್ ವಿಭಾಗಕ್ಕೆ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ.
ಶ್ರೀಲಂಕಾ ಎದುರಾಳಿ ಹಾಲೆಂಡ್: ದಿನದ ಮತ್ತೊಂದು ಪಂದ್ಯದಲ್ಲಿ ಶ್ರೀಲಂಕಾ ತಂಡ ಹಾಲೆಂಡ್‌ನ ಸವಾಲನ್ನು ಎದುರಿಸಲಿದೆ. ಅರ್ಹತಾ ಹಂತದಲ್ಲಿ ಆಡಿ ಗೆದ್ದು ಬಂದಿರುವ ಹಾಲೆಂಡ್ ಎದುರಾಳಿ ತಂಡಕ್ಕೆ ಎಷ್ಟರಮಟ್ಟಿಗೆ ಪೈಪೋಟಿ ನೀಡಲಿದೆ ಎಂಬುದನ್ನು ನೋಡಬೇಕು.
ಲಂಕಾ ತಂಡ ಶುಕ್ರವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ಐದು ರನ್‌ಗಳ ರೋಚಕ ಗೆಲುವು ಪಡೆದಿತ್ತು.
ಇಂದಿನ ಪಂದ್ಯಗಳು
ನ್ಯೂಜಿಲೆಂಡ್- ದಕ್ಷಿಣ ಆಫ್ರಿಕಾ
ಆರಂಭ: ಮಧ್ಯಾಹ್ನ 3.00ಕ್ಕೆ
ಹಾಲೆಂಡ್- ಶ್ರೀಲಂಕಾ
ಆರಂಭ: ರಾತ್ರಿ 7.00ಕ್ಕೆ
ಸ್ಥಳ: ಚಿತ್ತಗಾಂಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.