ADVERTISEMENT

ನನ್ನಿಂದಾದ ತಪ್ಪು ಸೋಲಿಗೆ ಕಾರಣ: ದೋನಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST

ಚೆನ್ನೈ (ಪಿಟಿಐ): `ಗಾಯಗೊಂಡಿರುವ ಸಚಿನ್ ತೆಂಡೂಲ್ಕರ್ ಚಾಂಪಿಯನ್ಸ್ ಲೀಗ್ ಟೂರ್ನಿ ಆಡುತ್ತಿಲ್ಲ. ಆದರೂ ನಮ್ಮ ಗೆಲುವಿಗೆ ಅವರ ಪ್ರೇರಣೆ ಕಾರಣ. ಇದರಿಂದ ಕಳೆದ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಲು ಸಾಧ್ಯವಾಯಿತು~

-ಹೀಗೆ ಸಂತಸದಿಂದಲೇ ಹೇಳಿದ್ದು ಮುಂಬೈ ಇಂಡಿಯನ್ಸ್ ತಂಡದ ನಾಯಕ ಹರಭಜನ್ ಸಿಂಗ್. ಚೆನ್ನೈಯಲ್ಲಿ ನಡೆದ ಪಂದ್ಯದಲ್ಲಿ ಗೆಲುವು ಪಡೆಯಲು ಸಚಿನ್ ಪ್ರೇರಕ ಶಕ್ತಿ. ಅವರು ಆಡದಿದ್ದರೂ ಡ್ರೆಸ್ಸಿಂಗ್ ಕೊಠಡಿಯಲ್ಲಿ ಎಲ್ಲಾ ಆಟಗಾರರಿಗೂ ಸ್ಫೂರ್ತಿ ತುಂಬಿದರು. ಅವರು ಸ್ಫೂರ್ತಿಯ ಚಿಲುಮೆ~ ಎಂದು ಹರಭಜನ್ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 3 ವಿಕೆಟ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿತ್ತು.

ರೋಹಿತ್ ಶರ್ಮ ಹಾಗೂ ಮುನಾಫ್ ಪಟೇಲ್ ಅವರೂ ತಂಡದಲ್ಲಿಲ್ಲ. ಗೆಲುವು ಯಾರ ಮುಡಿಗೆ ಎನ್ನುವ ಒತ್ತಡ ಇತ್ತಾದರೂ, ಜಯಿಸುವ ವಿಶ್ವಾಸವಿತ್ತು. ಬಲಿಷ್ಠ ತಂಡದ ಎದುರಿನ ಗೆಲುವು ಮುಂದಿನ ಪಂದ್ಯಗಳಿಗೆ ಪ್ರೇರಣೆಯಾಗಿದೆ. ಮಾಲಿಂಗ್ ಕೊನೆಯಲ್ಲಿ ಗಳಿಸಿದ ರನ್‌ಗಳು ತಂಡಕ್ಕೆ ಅಮೂಲ್ಯ ಎನಿಸಿದವು ಎಂದು ಭಜ್ಜಿ ಹೇಳಿದರು.

`ನಾನೊಬ್ಬ ಬೌಲರ್ ಆಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡಿದೆ. ಆದರೆ ಬ್ಯಾಟಿಂಗ್‌ನಲ್ಲಿಯು ಉತ್ತಮ ಪ್ರದರ್ಶನ ನೀಡಿದ್ದು ಖುಷಿ ನೀಡಿದೆ~ ಎಂದು `ಪಂದ್ಯ ಶ್ರೇಷ್ಠ~ ಗೌರವ ಪಡೆದ ಮಾಲಿಂಗ ಸಂತಸ ವ್ಯಕ್ತಪಡಿಸಿದರು. ಇಂಗ್ಲೆಂಡ್ ಪ್ರವಾಸದ ವೇಳೆ ಸಚಿನ್ ಗಾಯಗೊಂಡಿದ್ದರು. ಆದ್ದರಿಂದ ಚಾಂಪಿಯನ್ಸ್ ಲೀಗ್‌ನಲ್ಲಿ ಆಡುತ್ತಿಲ್ಲ.

ನನ್ನಿಂದಾದ ತಪ್ಪು ಸೋಲಿಗೆ ಕಾರಣ: ತವರು ನೆಲದ ಅಭಿಮಾನಿಗಳು ಎದುರು ಸೋಲು ಅನುಭವಿಸಲು ನನ್ನಿಂದಾದ ತಪ್ಪು ಕಾರಣ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಒಪ್ಪಿಕೊಂಡಿದ್ದಾರೆ.

`ಮ್ಯಾಚ್ ವಿನ್ನರ್~ ಲಸಿತ್ ಮಾಲಿಂಗ್ ಅವರನ್ನು 17ನೇ ಓವರ್‌ನಲ್ಲಿ ಸ್ಟಂಪ್ಡ್ ಮೂಲಕ ಔಟ್ ಮಾಡುವ ಅವಕಾಶ ದೋನಿಗೆ ಲಭಿಸಿತ್ತು. ಅದರೆ ಈ ವೇಳೆ ತಪ್ಪೆಸಗಿದ ಕಾರಣ ಪಂದ್ಯಕ್ಕೆ ರೋಚಕ ತಿರುವು ಸಿಕ್ಕಿತು.

ಈ ಅವಕಾಶ ಬಳಸಿಕೊಂಡ ಮಾಲಿಂಗ್ ಔಟಾಗದೇ 18 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಮೂರು ಸಿಕ್ಸರ್ ಸೇರಿದಂತೆ ಒಟ್ಟು 37 ರನ್ ಗಳಿಸಿದ್ದರು. ಈ ಮೂಲಕ ಸೋಲಿನ ದವಡೆಯಲ್ಲಿದ್ದ ಇಂಡಿಯನ್ಸ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದ್ದರಿಂದ ಮಾಲಿಂಗ್ ಅವರನ್ನು ಬೇಗನೆ ಕಟ್ಟಿ ಹಾಕಿದ್ದರೆ ಗೆಲುವು ನಮಗೆ ಒಲಿಯುತ್ತಿತ್ತು ಎಂದು ದೋನಿ ಅಭಿಪ್ರಾಯ ಪಟ್ಟಿದ್ದಾರೆ.

`ನನ್ನಿಂದಾದ ತಪ್ಪಿನಿಂದ ಸೋಲು ಎದುರಾಯಿತು. ಇದರಿಂದ ಭಾರಿ ಬೆಲೆ ತೆರಬೇಕಾಯಿತು. ಈ ರೀತಿಯ ತಪ್ಪು ಮುಂದಿನ ಪಂದ್ಯಗಳಲ್ಲಿ ಆಗದಂತೆ ಎಚ್ಚರಿಕೆ ವಹಿಸುವುದಾಗಿ ಅವರು ತಿಳಿಸಿದರು.

ಈ ವರ್ಷದಲ್ಲಿ ತವರು ನೆಲದಲ್ಲಿ ಆಡಿದ ಪಂದ್ಯಗಳಲ್ಲಿ ಶನಿವಾರ ಕಂಡಿದ್ದು ಮೊದಲು ಸೋಲು. ನಮ್ಮ ಬೌಲರ್‌ಗಳು ಇನ್ನೂ ಚರುಕಿನ ಬೌಲಿಂಗ್ ಮಾಡಿದ್ದರೆ, ಗೆಲುವು ಸಾಧ್ಯವಿತ್ತು ಎಂದು ಸುರೇಶ್ ರೈನಾ ಅಭಿಪ್ರಾಯ ಪಟ್ಟಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.