ADVERTISEMENT

ನಾನಿರುವುದು ಆಡಲು; ರಾಜಕೀಯ ಮಾಡಲು ಅಲ್ಲ;ಒಲಿಂಪಿಕ್ಸ್‌ನಲ್ಲಿ ಆಡಲು ಪೇಸ್ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2012, 19:30 IST
Last Updated 29 ಜೂನ್ 2012, 19:30 IST
ನಾನಿರುವುದು ಆಡಲು; ರಾಜಕೀಯ ಮಾಡಲು ಅಲ್ಲ;ಒಲಿಂಪಿಕ್ಸ್‌ನಲ್ಲಿ ಆಡಲು ಪೇಸ್ ಒಪ್ಪಿಗೆ
ನಾನಿರುವುದು ಆಡಲು; ರಾಜಕೀಯ ಮಾಡಲು ಅಲ್ಲ;ಒಲಿಂಪಿಕ್ಸ್‌ನಲ್ಲಿ ಆಡಲು ಪೇಸ್ ಒಪ್ಪಿಗೆ   

ಲಂಡನ್ (ಪಿಟಿಐ): ವಿವಾದದ ಬಿರುಗಾಳಿ ತಣ್ಣಗಾಗಿದ್ದು ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಆಡಲು ಒಪ್ಪಿಕೊಂಡಿದ್ದಾರೆ.ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಜೊತೆಗೆ ಆಡಲು ಅವಕಾಶ ನೀಡಿದರೆ ಮಾತ್ರ ಒಲಿಂಪಿಕ್‌ಗೆ ಹೋಗುವುದಾಗಿ ಶರತ್ತು ಹಾಕಿದ್ದ ಪೇಸ್ ಈಗ ಶಾಂತವಾಗಿದ್ದಾರೆ.

ಏಕೆಂದರೆ? ನಿರೀಕ್ಷೆಯಂತೆ ಸಾನಿಯಾಗೆ ವೈಲ್ಡ್ ಕಾರ್ಡ್ ಪ್ರವೇಶ ಸಿಕ್ಕಿದೆ. ಅಷ್ಟೇ ಅಲ್ಲ ಮಿಶ್ರ ಡಬಲ್ಸ್‌ನಲ್ಲಿ ಅವರನ್ನು ಲಿಯಾಂಡರ್ ಜೊತೆಗೆ ಆಡಿಸಲು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ನಿರ್ಣಯ ಕೈಗೊಂಡಿದೆ.
ಪುರುಷರ ಡಬಲ್ಸ್ ತಂಡ ರಚನೆಯಲ್ಲಿ ಕಾಡಿದ ಅಸಮಾಧಾನವೂ ತಿಳಿಯಾಗಿದೆ. ಯುವ ಆಟಗಾರ ವಿಷ್ಣುವರ್ಧನ್ ತಮಗೆ ಜೊತೆಯಾಗಿದ್ದು ಕೂಡ ಪೇಸ್ ಈಗ ಚಿಂತೆಯಾಗಿ ಕಾಡುತ್ತಿಲ್ಲ.

ತಾವು ಇಷ್ಟಪಟ್ಟಂತೆ ಸಾನಿಯಾ ಅವರೊಂದಿಗೆ ಮಿಶ್ರಡಬಲ್ಸ್‌ನಲ್ಲಿ ಆಡಲು ಸಾಧ್ಯವಾಗುತ್ತಿದೆ ಎನ್ನುವುದೇ ಅವರಿಗೆ ಸಿಕ್ಕಿರುವ ಸಮಾಧಾನ.ಈಗ ಹಿಂದಿನ ಎಲ್ಲಾ ಗೊಂದಲಗಳನ್ನು ಮರೆತು ವಿಶ್ವಾಸದಿಂದ ಒಲಿಂಪಿಕ್ಸ್‌ಗೆ ಸಿದ್ಧತೆ ಮಾಡಿಕೊಳ್ಳುವುದು ಅವರ ಉದ್ದೇಶವಾಗಿದೆ. ಭಾರತದ ಮೊದಲ ಕ್ರಮಾಂಕದ ಆಟಗಾರ ಎನಿಸಿರುವ ಲಿಯಾಂಡರ್ `ಟೆನಿಸ್ ಸಂಸ್ಥೆಯು ರೂಪಿಸಿರುವ ತಂಡ ಹೊಂದಾಣಿಕೆಯನ್ನು ಒಪ್ಪಿಕೊಂಡಿದ್ದೇನೆ. ಒಲಿಂಪಿಕ್ಸ್‌ನಲ್ಲಿ ದೇಶಕ್ಕಾಗಿ ಆಡಲು ಕಾತರದಿಂದ ಕಾಯ್ದಿದ್ದೇನೆ~ ಎಂದು ಶುಕ್ರವಾರ ಇಲ್ಲಿ ತಿಳಿಸಿದರು.

ವಿಶ್ವ ರ‌್ಯಾಂಕಿಂಗ್‌ನಲ್ಲಿ ತಮಗಿಂತ ಬಹಳಷ್ಟು ಕೆಳಗಿರುವ ವಿಷ್ಣುವರ್ಧನ್ ಜೊತೆಗೆ ಪುರುಷರ ಡಬಲ್ಸ್‌ನಲ್ಲಿ ಜೋಡಿ ಮಾಡುವುದನ್ನು ಆಕ್ಷೇಪಿಸಿದ್ದ ಪೇಸ್ ಈ ಮೊದಲು ಒಲಿಂಪಿಕ್ಸ್‌ನಿಂದಲೇ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿದ್ದರು. ಆನಂತರ ಮಿಶ್ರಡಬಲ್ಸ್‌ನಲ್ಲಿ ಆಡಲು ಅವಕಾಶ ನೀಡಿದ ಎಐಟಿಎ ತೀರ್ಮಾನವನ್ನು ಸ್ವೀಕರಿಸಿರುವ ಅವರು `ನಾನು ಆಟವಾಡುವ ಉದ್ದೇಶದಿಂದ ಕ್ರೀಡಾ ಕ್ಷೇತ್ರದಲ್ಲಿ ಇದ್ದೇನೆ; ರಾಜಕೀಯ ಮಾಡಲು ಅಲ್ಲ~ ಎಂದು ಹೇಳಿದರು.

ತಮ್ಮ ವಿರುದ್ಧ ಸಾನಿಯಾ ಮಾಡಿದ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿದ ಲಿಯಾಂಡರ್ `ದುರದೃಷ್ಟ,  ಆಟದ ನಡುವೆಯೇ `ಆಟ~ ನಡೆದಿರುವುದನ್ನು ನಾನು ಗಮನಿಸಿದ್ದೇನೆ. ಅದೂ ಅತಿ ಎನಿಸುವ ಮಟ್ಟದಲ್ಲಿ. ಅದು ಮನಸ್ಸಿಗೆ ಘಾಸಿಯಾಗುವಂಥದು~ ಎಂದರು.

`ದೇಶಕ್ಕಾಗಿ ನಾನು ಆಡಲಿರುವುದು ಆರನೇ ಒಲಿಂಪಿಕ್ಸ್. ಇಪ್ಪತ್ತೆರಡು ವರ್ಷಗಳ ಕಾಲ ನಾಡಿಗಾಗಿ ಹಾಗೂ ನಾಡಿನ ಜನತೆಗೆ ಸಂತೋಷ ತರುವುದಕ್ಕಾಗಿ ಆಡಿದ್ದೇನೆ~ ಎಂದ ಅವರು `ಪ್ರತಿಯೊಂದು ಒಲಿಂಪಿಕ್ಸ್‌ಗೆ ಮುನ್ನ ಇಂಥ ಯಾವುದಾದರೊಂದು ವಿವಾದ ತಲೆ ಎತ್ತುತ್ತದೆ. ಅದರಲ್ಲಿಯೇ ಹೆಚ್ಚಿನ ಶ್ರಮ ಪೋಲಾಗುತ್ತದೆ.

ನನಗೆ ಗೊತ್ತು ಆಟಗಾರರಾಗಿ ಸಿದ್ಧತೆ ಮಾಡಿಕೊಳ್ಳಲು ಎಷ್ಟು ಕಷ್ಟಪಡಬೇಕೆಂದು. ಜನರಿಗೂ ಇದು ಅರಿವಾಗಬೇಕು. ನಮ್ಮ ದೇಶದವರು ಯಾರಿಗೆ ಗೌರವ ನೀಡಬೇಕು ಹಾಗೂ ಯಾರಿಗಿಲ್ಲ ಎನ್ನುವುದನ್ನು ಸರಿಯಾಗಿ ನಿರ್ಧರಿಸುತ್ತಾರೆ. ಈ ವಿಷಯದಲ್ಲಿ ನಾನು ಅದೃಷ್ಟವಂತ. ಬೇರೆಯವರ ವಿಷಯ ನನಗೆ ಗೊತ್ತಿಲ್ಲ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ~ ಎಂದು ವಿವರಿಸಿದರು.

ವಿಷ್ಣು ತಮ್ಮಂದಿಗೆ ಆಡಲಿರುವುದರಿಂದ ಎಲ್ಲ ಹಂತದಲ್ಲಿ ಆ ಯುವ ಆಟಗಾರನಿಗೆ ನೆರವು ನೀಡುವ ಭರವಸೆಯನ್ನು ಲಿಯಾಂಡರ್ ನೀಡಿದ್ದಾರೆ. `ಸದ್ಯಕ್ಕೆ ನನಗೆ ಗೊತ್ತಿಲ್ಲ, ಈ ಆಟಗಾರನಲ್ಲಿ ಗ್ರಾಸ್ ಕೋರ್ಟ್ ಶೂ ಇವೆಯೋ ಇಲ್ಲವೆಂದು. ಅಷ್ಟರ ಮಟ್ಟಿಗೆ ನಾವಿಬ್ಬರೂ ಅಪರಿಚಿತರು. ಆದರೂ ಆ ಹುಡುಗನೊಂದಿಗೆ ಆಡಲು ಸಂತೋಷವಾಗುತ್ತದೆ~ ಎಂದು ನುಡಿದರು.

`ಒಲಿಂಪಿಕ್ಸ್‌ನಲ್ಲಿ ನನಗೆ ಜೊತೆಯಾಗಲಿರುವ ಆಟಗಾರ ವಿಂಬಲ್ಡನ್‌ಗೆ ಹೋಗಿದ್ದರೋ ಎನ್ನುವುದು ಗೊತ್ತಿಲ್ಲ. ಅಲ್ಲಿ ಆಡುವುದಕ್ಕಾಗಿ ಹೊಂದಿರುವ ವಿಶ್ವಾಸದ ಮಟ್ಟವೆಷ್ಟೆಂದು ಕೂಡ ನನಗೆ ತಿಳಿದಿಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.