ADVERTISEMENT

ನಾಳೆಯಿಂದ ಐಪಿಎಲ್ ಟ್ವೆಂಟಿ-20 ಕಲರವ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 19:30 IST
Last Updated 6 ಏಪ್ರಿಲ್ 2011, 19:30 IST
ನಾಳೆಯಿಂದ ಐಪಿಎಲ್ ಟ್ವೆಂಟಿ-20 ಕಲರವ
ನಾಳೆಯಿಂದ ಐಪಿಎಲ್ ಟ್ವೆಂಟಿ-20 ಕಲರವ   

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್‌ನ ಅಬ್ಬರ ಕೊನೆಗೊಳ್ಳುತ್ತಿದ್ದಂತೆಯೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ ಸಂಭ್ರಮಕ್ಕೆ ಚಾಲನೆ ಲಭಿಸಲಿದೆ. ಐಪಿಎಲ್‌ನ ನಾಲ್ಕನೇ ಅವತರಣಿಕೆಯ ಟೂರ್ನಿ ಶುಕ್ರವಾರ ಆರಂಭವಾಗಲಿದೆ. ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಆ ಬಳಿಕ ನಡೆಯುವ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ದ ಪೈಪೋಟಿ ನಡೆಸಲಿದೆ,


ಈ ಬಾರಿ ಒಟ್ಟು 10 ತಂಡಗಳು ಕಣದಲ್ಲಿವೆ. ಇದರಿಂದ ಟೂರ್ನಿಯ ಮಾದರಿಯಲ್ಲಿ ಅಲ್ಪ ಬದಲಾವಣೆ ಉಂಟಾಗಿದೆ. ಟೂರ್ನಿ 51 ದಿನಗಳ ಕಾಲ ನಡೆಯಲಿವೆ. ದೇಶದ ಒಟ್ಟು 13 ವಿವಿಧ ಕ್ರೀಡಾಂಗಣಗಳು ಐಪಿಎಲ್ ಪಂದ್ಯಗಳಿಗೆ ವೇದಿಕೆಯಾಗಲಿವೆ. ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ಪುಣೆ ವಾರಿಯರ್ಸ್ ತಂಡಗಳು ಈ ಬಾರಿ ಹೊಸದಾಗಿ ಐಪಿಎಲ್ ಸೇರಿಕೊಂಡಿವೆ. ಎಲ್ಲ ತಂಡಗಳು ಲೀಗ್‌ನಲ್ಲಿ ಒಟ್ಟು 14 ಪಂದ್ಯಗಳನ್ನಾಡಲಿವೆ. ಅಂದರೆ ಒಟ್ಟು 70 ಲೀಗ್ ಪಂದ್ಯಗಳು ಇವೆ.

ಆ ಬಳಿಕ ಮೂರು ಪ್ಲೇ-ಆಫ್ ಪಂದ್ಯಗಳು ನಡೆಯಲಿದ್ದು, ಗೆಲುವು ಪಡೆಯುವ ಎರಡು ತಂಡಗಳು ಫೈನಲ್‌ಗೆ ಅರ್ಹತೆ ಗಿಟ್ಟಿಸಲಿವೆ. ಮೊದಲ ಪ್ಲೇ ಆಫ್ (ಕ್ವಾಲಿಫೈಯರ್-1) ಪಂದ್ಯವು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳ ಮಧ್ಯೆ ನಡೆಯಲಿವೆ. ಇದರಲ್ಲಿ ಜಯ ಸಾಧಿಸುವ ತಂಡ ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ.

ಪಾಯಿಂಟ್ ಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳು ಎರಡನೇ ಪ್ಲೇ ಆಫ್ (ಎಲಿಮಿನೇಟರ್) ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ. ಇದರಲ್ಲಿ ಸೋಲು ಅನುಭವಿಸುವ ತಂಡ ಟೂರ್ನಿಯಿಂದ ಹೊರಬೀಳಲಿದೆ. ಎಲಿಮಿನೇಟರ್‌ನಲ್ಲಿ ಗೆಲುವು ಪಡೆಯುವ ತಂಡ ಹಾಗೂ ಮೊದಲ ಪ್ಲೇ ಆಫ್‌ನಲ್ಲಿ (ಕ್ವಾಲಿಫೈಯರ್-1) ಸೋಲು ಅನುಭವಿಸಿದ ತಂಡ ಮೂರನೇ ಪ್ಲೇ ಆಫ್ (ಕ್ವಾಲಿಫೈಯರ್-2) ಪಂದ್ಯದಲ್ಲಿ ಪರಸ್ಪರ ಪೈಪೋಟಿ ನಡೆಸಲಿವೆ. ವಿಜೇತ ತಂಡ ಫೈನಲ್‌ಗೆ ಪ್ರವೇಶ ಪಡೆಯಲಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ‘ಚಿಯರ್‌ಲೀಡರ್ಸ್’ ತಂಡದ ಬೆಡಗಿಯರು ಆಟಗಾರರು ಹಾಗೂ ಪ್ರೇಕ್ಷಕರಿಗೆ ಮನರಂಜನೆ ನೀಡಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೆಂಬಲ ನೀಡಲಿರುವ ‘ವೈಟ್ ಮಿಸ್ಚೀಫ್’ ತಂಡದ ಯುವತಿಯರು ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮ ನೃತ್ಯ ಕೌಶಲ ತೆರೆದಿಟ್ಟರು.

ರಾಯಲ್ ಚಾಲೆಂಜರ್ಸ್ ತಂಡ ಸಿದ್ಧ: ಡೇನಿಯಲ್ ವೆಟೋರಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಗೆ ತಕ್ಕ ರೀತಿಯಲ್ಲಿ ಸಜ್ಜಾಗಿದೆ. ಕಳೆದ ಕೆಲ ದಿನಗಳಿಂದ ತಂಡದ ಆಟಗಾರರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಠಿಣ ತರಬೇತಿಯಲ್ಲಿ ನಿರತರಾಗಿದ್ದಾರೆ. ಆರ್‌ಸಿಬಿ ತಂಡ ಶನಿವಾರ ಕೊಚ್ಚಿಯಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡವನ್ನು ಎದುರಿಸಲಿದೆ.

ಟ್ರೋಫಿ ಉಳಿಸಿಕೊಳ್ಳುವ ವಿಶ್ವಾಸ (ಚೆನ್ನೈ ವರದಿ): ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ ಎಂಬ ವಿಶ್ವಾಸವನ್ನು ನಾಯಕ ಮಹೇಂದ್ರ ಸಿಂಗ್ ದೋನಿ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT